ಆಲ್ಯೂಮಿನಿಯಂ ಫಾಯಿಲ್ ಒಂದಿದ್ದರೆ ಸಾಕು ನಲ್ಲಿಯ ಸುತ್ತ ಅಂಟಿಕೊಂಡಿರುವ ಗಡಸು ಕಲೆಯನ್ನು ನಿಮಿಷದಲ್ಲಿ ತೆಗೆಯಬಹುದು
ನಿಮ್ಮ ಮನೆಯ ನಲ್ಲಿಗಳ ಕೆಳಗೆ ಬಿಳಿ ಬಣ್ಣದ ಕಲೆಗಳು ಉಳಿದುಕೊಂಡಿರುವುದನ್ನು ನೀವು ಗಮನಿಸಿರಬಹುದು. ಇದು ಗಡಸು ನೀರಿನ ಪರಿಣಾಮವಾಗಿ ಉಂಟಾಗುವ ಕಲೆಗಳಾಗಿರುತ್ತವೆ. ಗಡಸು ನೀರಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಸಿಯಂ ಖನಿಜಾಂಶಗಳು ಒಂದೇ ಕಡೆ ಶೇಖರಣೆಯಾಗುವ ಕಾರಣ ಈ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳಿಂದ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ನಿಜ. ಆದರೆ, ಇದರ ಪರಿಣಾಮವಾಗಿ ಹೊಸ ನಲ್ಲಿ ಕೂಡಾ ಹಳೆಯದರಂತೆ ಕಾಣುತ್ತವೆ. ಇದು ನಿಮ್ಮ ಕಿಚನ್ ಲುಕ್ ಅನ್ನೇ ಕೆಡಿಸಿ ಬಿಡಬಹುದು.
ಈ ಗಡಸು ನೀರಿನ ಕಲೆಗಳನ್ನು ತೆಗೆದು ಹಾಕಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ಕೆಮಿಕಲ್ ಕ್ಲೀನರ್‌ಗಳು ಸಿಗುತ್ತವೆ. ಇವು ಖರೀದಿಗೂ ದುಬಾರಿಯಾಗಿರುತ್ತವೆ. ಆದರೆ, ಇದರ ಬದಲಿಗೆ ಸುಲಭವಾಗಿ ಸಿಗುವಂಥಹ ಆಲ್ಯೂಮಿನಿಯಂ ಫಾಯಿಲ್ ಅನ್ನು ಬಳಸುವ ಮೂಲಕ ಈ ಕಲೆಗಳನ್ನು ತೆಗೆದು ಹಾಕಬಹುದು.

ಸ್ಪಂಜ್ ಬದಲು ಅಲ್ಯೂಮಿನಿಯಂ ಫಾಯಿಲ್ ಬೆಸ್ಟ್:
ಸಾಮಾನ್ಯವಾಗಿ ನಾವು ಮನೆಯಲ್ಲಿ ಕ್ಲೀನಿಂಗ್ ಕೆಲಸಗಳಿಗೆ ಸ್ಕ್ರಬ್ಬರ್ ಅಥವಾ ಸ್ಪಂಜ್ ಬಳಸುತ್ತೇವೆ. ಇದರ ಬದಲು ಒಮ್ಮೆ ಅಲ್ಯೂಮಿನಿಯಂ ಫಾಯಿಲ್ ಬಳಸಿ ನೋಡಿ. ಈ ಫಾಯಿಲ್ ಅನ್ನು ಮುದ್ದೆ ಮಾಡಿ ನಲ್ಲಿಯ ಮೇಲೆ ಉಜ್ಜುವ ಮೂಲಕ ಕಲೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಈ ಫಾಯಿಲ್ ಅನ್ನು ಬಳಸುವ ಇನ್ನೊಂದು ಪ್ರಯೋಜನವೆಂದರೆ ಇದು ನಲ್ಲಿಯ ಮೇಲೆ ಯಾವುದೇ ಗೇರೆಗಳು ಬೀಳದಂತೆ ತಡೆಯುತ್ತದೆ. ಅಲ್ಯೂಮಿನಿಯಂ ಒಂದು ಮೃದುವಾದ ಲೋಹವಾಗಿದೆ. ಹಾಗಾಗಿ ಇದು ಸ್ಟೀಲ್‌ವೂಲ್‌ನಂತೆ ನಲ್ಲಿಯ ಹೊಳಪನ್ನು ತೆಗೆದು ಹಾಕುವುದೂ ಇಲ್ಲ ಅದರ ಮೇಲೆ ಗೆರೆಗಳು ಮೂಡುವುದಕ್ಕೆ ಕಾರಣವಾಗುವುದೂ ಇಲ್ಲ.
ಇದರ ಹಿಂದೆ ಒಂದು ಆಸಕ್ತಿದಾಯಕ ರಾಸಾಯನಿಕ ಪ್ರಕ್ರಿಯೆಯೂ ಇದೆ. ಅಲ್ಯೂಮಿನಿಯಂ ಎಲೆಕ್ಟ್ರೋಕೆಮಿಕಲ್ ಕ್ರಿಯೆಯಲ್ಲಿ ಇತರ ಕೆಲವು ಲೋಹಗಳೊಂದಿಗೆ ರಿಯಾಕ್ಟ್ ಆಗಬಹುದು. ಇಲ್ಲಿ ನೀರಿನೊಂದಿಗೆ ಅಲ್ಯೂಮಿನಿಯಂ ಇತರ ಲೋಹಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಒಂದು ಸಣ್ಣ ಎಲೆಕ್ಟ್ರೋಕೆಮಿಕಲ್ ರಿಯಾಕ್ಷನ್ ನಡೆಯುತ್ತದೆ. ಹಾಗಾಗಿ ಕೇವಲ ಉಜ್ಜುವುದರಿಂದ ಮಾತ್ರವಲ್ಲ ರಾಸಾಯನಿಕವಾಗಿಯೂ ಕಲೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.
ಬಳಸುವ ಬಗೆ ಹೇಗೆ?:
ಈ ವಿಧಾನವು ಕ್ರೋಮ್, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಕಬ್ಬಿಣದಂತಹ ಗಟ್ಟಿಯಾದ ಲೋಹದ ಮೇಲ್ಮೈಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ನೀರು, ಉಪ್ಪು ಅಥವಾ ಬಿಳಿ ವಿನೆಗರ್‌ನಂತಹ ಸೌಮ್ಯ ಎಲೆಕ್ಟ್ರೋಲೈಟ್‌ನೊಂದಿಗೆ ಇದನ್ನು ಸಂಯೋಜಿಸಿದಾಗ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಅಲ್ಯೂಮಿನಿಯಂ ಫಾಯಿಲ್‌ನ ಸಣ್ಣ ತುಂಡನ್ನು ತೆಗೆದುಕೊಂಡು ಮುದ್ದೆ ಮಾಡಿ ಬಾಲ್ ಆಕಾರಕ್ಕೆ ತನ್ನಿ. ಹೀಗೆ ಮಾಡುವಾಗ ಹೆಚ್ಚು ಚಪ್ಪಟೆಯಾಗದಂತೆ ನೋಡಿಕೊಳ್ಳಿ. ಯಾಕೆಂದರೆ ಇದನ್ನು ಬಾಲ್‌ನಂತೆ ಮಾಡುವಾಗ ಅದರ ಮೇಲೆ ಮೂಡುವ ಮಡಿಕೆಗಳೇ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತವೆ.
ಒಂದು ವೇಳೆ ನಲ್ಲಿಯ ಮೇಲಿರುವ ಕಲೆಗಳು ತುಂಬಾ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ಮೊದಲು ನೀರು ಸಿಂಪಡಿಸಿಕೊಳ್ಳಿ. ನಂತರ ಆಲ್ಯೂಮಿನಿಯಂ ಫಾಯಿಲ್ ಬಾಲ್ ಅನ್ನು ವೈಟ್ ವಿನೆಗರ್‌ನಲ್ಲಿ ಅದ್ದಿ ಕಲೆಯ ಮೇಲೆ ವೃತ್ತಾಕಾರದಲ್ಲಿ ಉಜ್ಜಿಕೊಳ್ಳಿ. ಹೀಗೆ ಮಾಡಿದರೆ ಹೆಚ್ಚು ಶ್ರಮವಿಲ್ಲದೆ ಕಲೆಗಳು ಬಿಡುತ್ತಾ ಹೋಗುತ್ತದೆ. ಕಲೆಗಳು ಹೋದ ನಂತರ ಶುದ್ಧ ನೀರಿನಿಂದ ತೊಳೆಯಿರಿ. ನಂತರ ಒಣ ಬಟ್ಟೆಯಿಂದ ಒರೆಸಿ. ಇದರಿಂದ ತಕ್ಷಣವೇ ಹೊಸ ನೀರಿನ ಕಲೆಗಳು ರೂಪುಗೊಳ್ಳುವುದನ್ನು ತಡೆಯಬಹುದು. ಇನ್ನು ಈ ಪ್ರಕ್ರಿಯೆಯಲ್ಲಿ ನೀವು ಬಳಸಿದ ಫಾಯಿಲ್ ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಬಹುದು. ಅಂದರೆ ನಿಮ್ಮ ನಲ್ಲಿಯ ಮೇಲ್ಮೈಯಲ್ಲಿದ್ದ ಖನಿಜಗಳು ಫಾಯಿಲ್ ಮೇಲೆ ಅಂಟಿಕೊಂಡಿದೆ ಎಂದರ್ಥ.
ಗಮನಿಸಬೇಕಾದ ಪ್ರಮುಖ ಅಂಶಗಳು:
ಬಹಳ ಕಾಲದಿಂದ ಉಳಿದುಕೊಂಡಿರುವ ಕಲೆಗಳಿಗಿಂತ ಇದು ಹಗುರ ಹಾಗೂ ಸಾಧಾರಣ ಕಲೆಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದು ವೇಳೆ ಕಲೆ ಗಾಢವಾಗಿದೆ ಎಂದನಿಸಿದರೆ ಮೊದಲು ವಿನೆಗರ್‌ನಲ್ಲಿ ಫಾಯಿಲ್ ಅನ್ನು ನೆನೆಸಿ ಕ್ಲೀನ್ ಮಾಡುವ ಪ್ರಕ್ರಿಯೆಗೆ ಮುಂದಾಗಿ. ಒಂದು ವೇಳೆ ನಿಮ್ಮ ನಲ್ಲಿಯು ಮ್ಯಾಟ್ ಬ್ರಷ್ಡ್ ಅಥವಾ ಯಾವುದೇ ವಿಶೇಷ ಕೋಟಿಂಗ್ ಹೊಂದಿದ್ದರೆ, ವಿನೆಗರ್ ಬಳಸುವ ಮೊದಲು ಅದನ್ನು ಸಣ್ಣ ಜಾಗದಲ್ಲಿ ಪರೀಕ್ಷಿಸಿ ನೋಡುವುದು ಉತ್ತಮ. ಇನ್ನು, ನಲ್ಲಿಯ ಕಲೆಗಳನ್ನು ಸ್ವಚ್ಛಗೊಳಿಸುವಾಗ ಗ್ಲೌಸ್ ಧರಿಸುವುದು ಸೂಕ್ತ.
ಈ ಇಡೀ ಪ್ರಕ್ರಿಯೆ ಕೆಮಿಕಲ್ ಮುಕ್ತವಾಗಿದ್ದು, ಇದಕ್ಕೆ ತಗಲುವ ವೆಚ್ಚ ಕೂಡಾ ತೀರಾ ಕಡಿಮೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications