Condom: ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಬ್ಯಾಟ್, ಬಾಲ್‌ಗಿಂತ ಕಾಂಡೋಮ್ ಚರ್ಚೆಯೇ ಬಲು ಜೋರು
Condom: ಇದೀಗ ಸದ್ಯ ಭಾರತ-ಇಂಗ್ಲೆಂಡ್ ನಡುವೆ ಟಿ20 ಸರಣಿ ನಡೆಯುತ್ತಿದೆ. ಈ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಬ್ಯಾಟ್, ಬಾಲ್‌ಗಿಂತ ಕಾಂಡೋಮ್ ಚರ್ಚೆಯೇ ಜೋರಾಗಿದೆ. ಹಾಗಾದ್ರೆ ಈ ವಿಚಾರ ಮುನ್ನಲೆಗೆ ಬರಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೂಲಗಳ ಪ್ರಕಾರ, ಟಿ20 ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೋಮ್ ಜಾಹೀರಾತು ಪ್ರದರ್ಶನಗೊಂಡಿರುವುದು ಭಾರತದಲ್ಲಿ ಪ್ರಸಾರ ನಿಯಮಗಳು ಮತ್ತು ಸಾರ್ವಜನಿಕ ನೈತಿಕತೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ನೇರ ಪ್ರಸಾರದ ವೇಳೆ ಪ್ರಸಿದ್ಧ ಕಂಪನಿಯೊಂದರ ಕಾಂಡೋಮ್ ಜಾಹೀರಾತನ್ನು ಪ್ರದರ್ಶಿಸಲಾಗಿದ್ದು, ಇದು ಭಾರಿ ಚರ್ಚೆಗೆ ಕಾರಣವಾಗಿದೆ.

ಜೋರಾಯ್ತು ಕಾಂಡೋಮ್ ಜಾಹೀರಾತು ಚರ್ಚೆ
ಈ ಘಟನೆಯು ಕೋಟ್ಯಂತರ ಕುಟುಂಬಗಳು ಒಟ್ಟಾಗಿ ಕೂತು ನೋಡುವ ಕ್ರೀಡಾ ಕಾರ್ಯಕ್ರಮಗಳಲ್ಲಿ ಇಂತಹ ವಯಸ್ಕರ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಎಷ್ಟು ಸರಿ ಎಂಬ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ ಕಾಂಡೋಮ್ ಜಾಹೀರಾತುಗಳು ಕಾನೂನುಬದ್ಧವಾಗಿದ್ದರೂ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದ್ದರೂ ಪ್ರಸಾರ ಮಾಡಿದ ಸಮಯದ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.
ಕೀರ್ತಿ ಆಜಾದ್ ಅವರಿಂದ ತೀವ್ರ ಆಕ್ಷೇಪ
ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರಾದ ಕೀರ್ತಿ ಆಜಾದ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡು ಬಿಸಿಸಿಐ ಗಮನ ಸೆಳೆದಿದ್ದಾರೆ. 'ಮಕ್ಕಳು, ಹದಿಹರೆಯದವರು ಮತ್ತು ಇಡೀ ಕುಟುಂಬಗಳು ಒಟ್ಟಾಗಿ ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ವೀಕ್ಷಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಈ ಜಾಹೀರಾತುಗಳು ಪ್ರದರ್ಶನ ಮಾಡುವುದು ಸರಿಯೇ,' ಎಂದು ಪ್ರಶ್ನೊಸಿದ್ದಾರೆ.
'ಕ್ರಿಕೆಟ್ ಅನ್ನು ಭಾರತದಲ್ಲಿ ಧರ್ಮದಂತೆ ನೋಡಲಾಗುತ್ತದೆ. ಕೋಟ್ಯಂತರ ಜನರು ಪಂದ್ಯ ನೋಡುವಾಗ ಇಂತಹ ಜಾಹೀರಾತುಗಳು ಬಂದರೆ ಪೋಷಕರು ಮುಜುಗರಕ್ಕೊಳಗಾಗುತ್ತಾರೆ ಮತ್ತು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ,' ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, 'ಅಗತ್ಯಬಿದ್ದರೆ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುವುದು. ಧೂಮಪಾನ ಮತ್ತು ಮದ್ಯಪಾನದಂತಹ ಜಾಹೀರಾತುಗಳನ್ನು ನಿಷೇಧಿಸಿರುವಂತೆ ಇವುಗಳಿಗೂ ಪಂದ್ಯದ ಮಧ್ಯೆ ನಿರ್ಬಂಧ ಹೇರಬೇಕು,' ಎನ್ನುವುದು ಅವರ ವಾದವಾಗಿದೆ.
ಐಸಿಸಿಗೆ ಸಿಟಿಸಿ ಮಾಡಿದ ಮನವಿ ಏನು?
ಈ ವಿವಾದದ ಬೆನ್ನಲ್ಲೇ ವರ್ತಕರ ಸಂಘಟನೆಯಾದ 'ಛೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ' (ಸಿಟಿಐ) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾದ ಜೈ ಶಾ ಅವರಿಗೆ ಪತ್ರ ಬರೆದಿದೆ. 'ಕುಟುಂಬಸಹಿತ ನೋಡುವ ನೇರಪ್ರಸಾರದ ಪಂದ್ಯಗಳಲ್ಲಿ ಕಾಂಡೋಮ್ ಹಾಗೂ ಡೇಟಿಂಗ್ ಆಪ್‌ಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮುಂದಿನ ಐಸಿಸಿ ಸಭೆಯಲ್ಲಿ 30 ದಿನಗಳ ಒಳಗಾಗಿ ಇದಕ್ಕೆ ಸ್ಪಷ್ಟ ಮಾರ್ಗಸೂಚಿಗಳನ್ನು ತರಬೇಕು,' ಎಂದು ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಕೀರ್ತಿ ಆಜಾದ್ ಅವರ ಈ ಆಕ್ರೋಶದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು 'ಕ್ರಿಕೆಟ್ ಪಂದ್ಯಗಳು ಕೌಟುಂಬಿಕ ಮನರಂಜನೆಯಾಗಿದ್ದು, ಪೋಷಕರೊಂದಿಗೆ ಕುಳಿತು ನೋಡುವಾಗ ಇಂತಹ ಜಾಹೀರಾತುಗಳು ಬಂದರೆ ಮುಜುಗರವಾಗುತ್ತದೆ,' ಎಂದು ಆಜಾದ್ ಅವರ ನಿಲುವನ್ನು ಬೆಂಬಲಿಸಿದ್ದಾರೆ.
ಇನ್ನೂ ಕೆಲವರು 'ಭಾರತದ ಜನಸಂಖ್ಯೆ ಮತ್ತು ಲೈಂಗಿಕ ಶಿಕ್ಷಣದ ಕೊರತೆಯನ್ನು ಗಮನಿಸಿದರೆ, ಇಂತಹ ಜಾಹೀರಾತುಗಳು ಜಾಗೃತಿ ಮೂಡಿಸಲು ಅತ್ಯಗತ್ಯ. 10ನೇ ತರಗತಿಯ ಪಠ್ಯದಲ್ಲೇ ಸಂತಾನೋತ್ಪತ್ತಿ ನಿಯಂತ್ರಣದ ಬಗ್ಗೆ ಇರುವಾಗ ಇದನ್ನು ಕೀಳಾಗಿ ನೋಡಬಾರದು,' ಅಂತಾ ಹೇಳಿದ್ದಾರೆ.
ನಿಯಮಗಳಲ್ಲಿ ಏನಿದೆ?
ಬಿಸಿಸಿಐ ತನ್ನ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ನೇರ ಪ್ರಸಾರದ ಜಾಹೀರಾತುಗಳ ಮೇಲೆ ಪರೋಕ್ಷ ನಿಯಂತ್ರಣ ಹೊಂದಿದೆ. ನಿಯಮಾವಳಿಗಳ ಪ್ರಕಾರ ರಾಜಕೀಯ ಅಥವಾ ಧಾರ್ಮಿಕ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಆದರೆ ಖಾಸಗಿ ವಾಹಿನಿಗಳು ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ವ್ಯಾಪಾರದ ಉದ್ದೇಶಗಳಿಗಾಗಿ ಜಾಹೀರಾತು ಸ್ಲಾಟ್‌ಗಳನ್ನು ಸ್ವತಂತ್ರವಾಗಿ ಹಂಚಿಕೆ ಮಾಡುತ್ತವೆ.
ಹಿಂದೆ ದೂರೆದರ್ಶನ ಮಾತ್ರ ಇದ್ದ ಕಾಲದಲ್ಲಿ ಪ್ರತಿ ಜಾಹೀರಾತಿನ ಸ್ಟೋರಿಬೋರ್ಡ್ ಹಾಗೂ ಅಂತಿಮ ಔಟ್‌ಪುಟ್ ಅನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ, ಸಾರ್ವಜನಿಕ ವೀಕ್ಷಣೆಗೆ ಯೋಗ್ಯವಾಗಿದ್ದರೆ ಮಾತ್ರ ಪ್ರಸಾರ ಮಾಡಲು ಅನುಮತಿ ನೀಡಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಮಾರುಕಟ್ಟೆ ಮತ್ತು ವಾಣಿಜ್ಯ ಲಾಭಗಳೇ ಮುಖ್ಯವಾಗಿವೆ.
ಈ ವಿವಾದವು ಕಾನೂನಿನ ಉಲ್ಲಂಘನೆಗಿಂತ ಹೆಚ್ಚಾಗಿ ಪ್ರಸಾರ ನೀತಿ ಸಂಹಿತೆಯ ಪ್ರಶ್ನೆಯಾಗಿದೆ. ಜಾಹೀರಾತು ಕಾನೂನುಬದ್ಧವಾಗಿದ್ದರೂ ಅದನ್ನು ಪ್ರಸಾರ ಮಾಡುವ ಸಮಯ ಮತ್ತು ಸಂದರ್ಭದ ಬಗ್ಗೆ ಪ್ರಸಾರಕರು ಸ್ವಯಂ ನಿಯಂತ್ರಣ ಹೇರಬೇಕೇ ಅಥವಾ ನಿಯಂತ್ರಕ ಮಂಡಳಿಗಳು ಹೊಸ ನಿಯಮಗಳನ್ನು ರೂಪಿಸಬೇಕೇ ಎಂಬ ಚರ್ಚೆ ಈಗ ತೀವ್ರಗೊಂಡಿದೆ. ಈ ನಿರೀಕ್ಷೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದೇ ಈಗಿರುವ ದೊಡ್ಡ ಸವಾಲಾಗಿದೆ. ಇದೀಗ ಟೀಮ್ ಇಂಡಿಯಾ ಕ್ರಿಕೆಟ್ ವೇಳೆಯೇ ಕಾಂಡೋಮ್ ವಿಚಾರ ಕಾವೇರಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications