National Highway: ಉತ್ತರ ಕರ್ನಾಟಕದ ಮೂಲಕ ಹಾದುಹೋಗುವ ಹೊಸ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಬಗ್ಗೆ ಬಿಗ್ ಅಪ್ಡೇಟ್
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಹಾಗೆಯೇ ಇದೀಗ ಮಹಾರಾಷ್ಟ್ರದ 6 ಮತ್ತು ಉತ್ತರ ಕರ್ನಾಟಕದ 2 ಜಿಲ್ಲೆಗಳ ಮೂಲಕ ಹಾದುಹೋಗುವ NH 548B ವಾಹನ ಸಂಚಾರಕ್ಕೆ ಯಾವಾಗ ಮುಕ್ತವಾಗಲಿದೆ ಎನ್ನುವ ಬಿಗ್ ಅಪ್ಡೇಟ್ ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಗುಮ್ಮಟ ನಗರಿ ಅಂತಲೇ ಪ್ರಸಿದ್ಧಿಯಾಗಿರುವ ಕರ್ನಾಟಕದ ವಿಜಯಪುರಕ್ಕೆ ಮತ್ತೊಂದು ಪ್ರಮುಖ ಹೆದ್ದಾರಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿಯ ರಾಷ್ಟ್ರೀಯ ಹೆದ್ದಾರಿ-548ಬಿ ಕಾಮಗಾರಿ ವೇಗ ಪಡೆದುಕೊಂಡಿದೆ. ಇದು ಮುಂಬರುವ 2027ರ ಮಾರ್ಚ್ ವೇಳೆಗೆ ಪೂರ್ಣಗೊಂಡು ಸಾರ್ವಜನಿಕರ ಸಾರಿಗೆಗೆ ಮುಕ್ತವಾಗಲಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.

ಹೆದ್ದಾರಿ ನಿರ್ಮಾಣದ ಪ್ರಗತಿ ಪರಿಶೀಲನೆಗಾಗಿ ಅವರು ಇತ್ತೀಚೆಗೆ ವಿವಿಧ ಕಾಮಗಾರಿ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿದ್ದರು. ಈ ವೇಳೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಯೋಜನೆಯ ವೆಚ್ಚ, ಪ್ರಸ್ತುತ ಸ್ಥಿತಿ
ಮಹಾರಾಷ್ಟ್ರದ ಜಾಲನಾ ಪ್ರದೇಶದಿಂದ ಆರಂಭವಾಗಿ ವಿಜಯಪುರ ನಗರದ ಹೃದಯಭಾಗದಲ್ಲಿರುವ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ಈ ಬೃಹತ್ ಹೆದ್ದಾರಿ ಯೋಜನೆಗೆ ಕೇಂದ್ರ ಸರ್ಕಾರವು ಒಟ್ಟು 957.09 ಕೋಟಿ ರೂಪಾಯಿಗಳ ಬಜೆಟ್ ನಿಗದಿಪಡಿಸಿದೆ. ಪ್ರಸ್ತುತ ಶೇಕಡಾ 65ರಷ್ಟು ಕಾಮಗಾರಿ ಮುಗಿದಿವೆ. ಉಳಿದ ಭಾಗದ ನಿರ್ಮಾಣ ಪ್ರಕ್ರಿಯೆಯೂ ಅತ್ಯಂತ ವೇಗವಾಗಿ ಸಾಗುತ್ತಿದ್ದು, 2027ರ ಮಾರ್ಚ್ ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ವಿಳಂಬಕ್ಕೆ ಕಾರಣ ಏನು?
'ಈ ಮಹತ್ವದ ಯೋಜನೆಗೆ 2025ರ ಜನವರಿ 16ರಂದು ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಇದು ಎರಡು ವರ್ಷಗಳ ಅವಧಿಯಲ್ಲಿ ಇದು ಪೂರ್ಣಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಹಾಗೂ ಕೆಲವು ಅನಿವಾರ್ಯ ಕಾರಣಾಂತರಗಳಿಂದಾಗಿ ಯೋಜನೆಯು ಸ್ವಲ್ಪ ಮಟ್ಟಿಗೆ ವಿಳಂಬವಾಗಿದೆ. ಇದನ್ನು ಸರಿದೂಗಿಸಿ ನಿಗದಿಪಡಿಸಲಾದ ಗಡುವಿನೊಳಗೆ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕು,' ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೆದ್ದಾರಿಯ ವಿಶೇಷತೆಗಳೇನು?
ಸುಮಾರು 102.303 ಕಿಲೋ ಮೀಟರ್ ಉದ್ದದ ಈ ಹೆದ್ದಾರಿಯು ಕೇವಲ ಎರಡು ನಗರಗಳನ್ನು ಸಂಪರ್ಕಿಸುವುದಲ್ಲದೆ, ಪ್ರಮುಖ ಗ್ರಾಮೀಣ ಭಾಗಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಈ ಯೋಜನೆಯಲ್ಲಿ ಒಟ್ಟು 7 ಪ್ರಮುಖ ಬೈಪಾಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ಮಹಾರಾಷ್ಟ್ರದ ಕರಜಗಿ, ಮಾಶ್ಯಾಳ ಸೇರಿದಂತೆ ಕರ್ನಾಟಕದ ಇಂಡಿ, ರೂಗಿ, ಅಥರ್ಗಾ ಹಾಗೂ ನಾಗಠಾಣ ಮುಂತಾದ ಪ್ರಮುಖ ಪ್ರದೇಶಗಳು ಒಳಗೊಂಡಿವೆ. ಸುಗಮ ಸಂಚಾರಕ್ಕಾಗಿ ಈ ಯೋಜನೆಯಡಿ ನಾಲ್ಕು ಬೃಹತ್ ಸೇತುವೆಗಳು ಮತ್ತು ರೈಲ್ವೆ ಹಳಿ ದಾಟಲು ಒಂದು ಬೃಹತ್ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ.
ಏನಲ್ಲಾ ಪ್ರಯೋಜನಾಗಳಿವೆ?
ಇನ್ನು 'ಈ ಹೆದ್ದಾರಿ ನಿರ್ಮಾಣದ ಕಾಮಗಾರಿ ಪೂರ್ಣಗೊಂಡರೆ ವಿಜಯಪುರ ನಗರವನ್ನು ಪ್ರವೇಶಿಸುವ ಅಥವಾ ಸಂಪರ್ಕಿಸುವ 7ನೇ ರಾಷ್ಟ್ರೀಯ ಹೆದ್ದಾರಿ ಇದಾಗಲಿದೆ. ಇದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲಿದೆ,'ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, 'ಮುಂದಿನ ದಿನಗಳಲ್ಲಿ ಈ ರಾಷ್ಟ್ರೀಯ ಹೆದ್ದಾರಿಯು ಕೇವಲ ಸಾರಿಗೆಗೆ ಸೀಮಿತವಾಗದೆ ಎರಡು ರಾಜ್ಯಗಳ ನಡುವಿನ ವ್ಯಾಪಾರ-ವಹಿವಾಟು, ಕೈಗಾರಿಕಾ ಪ್ರಗತಿ, ಪ್ರವಾಸೋದ್ಯಮದ ಉತ್ತೇಜನ ಹಾಗೂ ಕೃಷಿ ಉತ್ಪನ್ನಗಳ ಸುಲಭ ಸಾಗಣೆಗೆ ತುಂಬಾ ಸಹಾಯವಾಗಲಿದೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಯಾವೆಲ್ಲಾ ಜಿಲ್ಲೆಗಳಲ್ಲಿ ಹಾದುಹೋಗಲಿದೆ?
* ಜಾಲನಾ
* ಪರಭಣಿ
* ಬೀಡ್
* ಲಾತೂರ್
* ಧಾರಾಶಿವ್
* ಸೋಲಾಪುರ
ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳ ಎಲ್ಲೆಲ್ಲಿ ಹಾದುಹೋಗಲಿದೆ?
* ವಿಜಯಪುರ - ಇಂಡಿ, ಅಲ್ಮೇಲ್, ವಿಜಯಪುರ ನಗರ ಮತ್ತು ತಿಕೋಟಾ ಮೂಲಕ ಹಾದುಹೋಗುತ್ತದೆ.
* ಬೆಳಗಾವಿ - ಅಥಣಿ, ಕಾಗವಾಡ, ಚಿಕ್ಕೋಡಿ ಮತ್ತು ಸಂಕೇಶ್ವರ ಮೂಲಕ ಹಾದುಹೋಗಿ ಗೋಟೂರ್ ಬಳಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕ ಕಲ್ಪಿಸುತ್ತದೆ.












Click it and Unblock the Notifications