ಅವೈಜ್ಞಾನಿಕ ನಗರಗಳಿಗೆ ಕಡಿವಾಣ; ಈ ಆಸ್ತಿದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ, ಡಿಕೆಶಿ ಹೇಳಿದ್ದೇನು
ಅವೈಜ್ಞಾನಿಕವಾಗಿ ನಗರಗಳು, ಪಟ್ಟಣಗಳು ಬೆಳೆಯುವುದನ್ನು ತಪ್ಪಿಸಿ ಶಿಸ್ತುಬದ್ಧವಾದ, ಯೋಜನಾಬದ್ಧವಾದ ನಗರಗಳು, ಪಟ್ಟಣಗಳ ಬೆಳವಣಿಗೆಗೆ ಪೂರಕವಾಗಿ ನಾವು ಕೆಲವು ಬದಲಾವಣೆಗಳನ್ನು ತರುತ್ತೇವೆ. ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳುವ ನಮ್ಮ ತೀರ್ಮಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜಾರಿಗೆ ತನ್ನಿ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ ಹೊಸ ಯೋಜನೆಯು ಆಸ್ತಿದಾರರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು. ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನಾದೇಶಕ್ಕಾಗಿ ಜನರ ಬಳಿಕೆ ಹೋಗಬೇಕು. ಅಧಿಕಾರಿಗಳಿಗೆ ಇದರ ಅಗತ್ಯ ಇರುವುದಿಲ್ಲ. ಹಾಗಂಥಾ ಅಧಿಕಾರಿಗಳು ಮೈ ಮರೆತರೆ, ಕರ್ತವ್ಯ ಮರೆತರೆ ಅದು ಜನತೆಗೆ ಬಗೆಯುವ ದ್ರೋಹವಾಗುತ್ತದೆ. ಅಧಿಕಾರಿ ವರ್ಗ ತಮ್ಮ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಸರ್ಕಾರದ ಮೇಲೆ ಜನತೆ ಇಟ್ಟಿರುವ ನಿರೀಕ್ಷೆ ಈಡೇರಿದಂತಾಗುತ್ತದೆ. ಜನ ನಮ್ಮನ್ನು ಗಮನಿಸುತ್ತಿದ್ದಾರೆ, ಈ ಎಚ್ಚರದಲ್ಲಿ ಕೆಲಸ ಮಾಡಿ, ನಾವು ಎರಡು ಕಣ್ಣಲ್ಲಿ ನೂರು ಜನರನ್ನು ನೋಡಿದರೆ, ನೂರು ಜನರ ಇನ್ನೂರು ಕಣ್ಣುಗಳು ನಮ್ಮನ್ನು ಗಮನಿಸುತ್ತಿರುತ್ತವೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಸಭೆಯ ನಡುವೆ ಯಾವುದೇ ಅಧಿಕಾರಿ ಮೊಬೈಲ್‌ನಲ್ಲಿ ಮಾತಾಡುವುದು ಕಂಡು ಬಂದರೆ ಸಂಜೆ ಮೀಟಿಂಗ್ ಮುಗಿಯುವ ವೇಳೆಗೆ ನಿಮ್ಮ ಅಮಾನತ್ತು ಆದೇಶ ಬರುತ್ತದೆ. ಈ ಎಚ್ಚರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಭಾಗವಹಿಸಿ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೇ ನೆಲೆಸಬೇಕು. ಹಾಗಾದಾಗ ಮಾತ್ರ ನೀವು ಜನರ ಕೈಗೆ ಸಿಗಲು, ಅವರಿಗೆ ಸ್ಪಂದಿಸಲು ನೆರವಾಗುತ್ತದೆ. ಸುಖಾ ಸುಮ್ಮನೆ ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ. ನಿಮ್ಮ ಹಂತದಲ್ಲೇ ಕೆಲಸ ಸರಾಗವಾಗಿ ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಜನತೆ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದೂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ತಮ್ಮ ಅಧೀನ ಅಧಿಕಾರಿಗಳ ಮಾಹಿತಿ ಅಂಗೈ ತುದಿಯಲ್ಲಿ ಇರಬೇಕು. ಯಾವ ಅಧಿಕಾರಿ ಫೀಲ್ಡ್ ವರ್ಕ್‌ಗೆ ಹೋಗಿದ್ದಾರೆ, ಯಾವ ಪ್ರದೇಶಕ್ಕೆ ಹೋಗಿದ್ದಾರೆ, ಜನರ ಬಳಿಗೆ ಹೋಗಿ ಯಾವ ಸಮಸ್ಯೆ ಬಗೆಹರಿಸಿದ್ದಾರೆ ಎನ್ನುವ ನಿತ್ಯದ ಅಪ್‌ಡೇಟ್ ನಿಮ್ಮ ಬಳಿ ಇರಬೇಕು. ಈ ರೀತಿಯ ಒಂದು ರಿಜಿಸ್ಟರ್ ನಿರ್ವಹಣೆ ಮಾಡುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಎಂದಿದ್ದಾರೆ.
DK Shivakumar: ಅವೈಜ್ಞಾನಿಕ ನಗರಗಳ ಮೇಲೆ ಸರ್ಕಾರದ ಕಣ್ಣು
ಅವೈಜ್ಞಾನಿಕವಾಗಿ ನಗರಗಳು, ಪಟ್ಟಣಗಳು ಬೆಳೆಯುವುದನ್ನು ತಪ್ಪಿಸಿ ಶಿಸ್ತುಬದ್ಧವಾದ, ಯೋಜನಾಬದ್ಧವಾದ ನಗರಗಳು, ಪಟ್ಟಣಗಳ ಬೆಳವಣಿಗೆಗೆ ಪೂರಕವಾಗಿ ನಾವು ಕೆಲವು ಬದಲಾವಣೆಗಳನ್ನು ತರುತ್ತೇವೆ. ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳುವ ನಮ್ಮ ತೀರ್ಮಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜಾರಿಗೆ ತನ್ನಿ. ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಪಾಲಿಕೆಗಳ ವ್ಯಾಪ್ತಿಯಲ್ಲಿ ಯೋಜನಾಬದ್ದ ಬೆಳವಣಿಗೆ ಆಗಬೇಕು. ಅನುಮತಿ ಪಡೆಯದೆ ಯಾರೂ ಬಡವಾವಣೆಗಳನ್ನು ನಿರ್ಮಿಸಲು ಅವಕಾಶ ಇರಬಾರದು. ಇಡೀ ದೇಶದಲ್ಲಿ ಕ್ರಾಂತಿಕಾರವಾಗಿ ಕಂದಾಯ ಇಲಾಖೆಯಲ್ಲಿ ಬದಲಾವಣೆ ತಂದಿದ್ದೇವೆ. ಯಾರೂ ಕೂಡ ಒಂದು ಪೈಸೆ ಖರ್ಚಿಲ್ಲದಂತೆ ಅವರ ಆಸ್ತಿಗೆ ಇ-ಖಾತೆ ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಬೆಂಗಳೂರಿನ ಬಳಿಕ ಇಡೀ ರಾಜ್ಯಕ್ಕೆ ಇದು ವಿಸ್ತರಣೆ ಆಗುತ್ತಿದೆ. ನಮ್ಮ ಸರ್ಕಾರದ ಈ ಕ್ರಾಂತಿಕಾರಕ ಯೋಜನೆ ಅಷ್ಟೇ ಪರಿಣಾಮಕಾರಿಯಾಗಿ ತಳಮಟ್ಟದಲ್ಲಿ ಜಾರಿ ಆಗಬೇಕು ಎಂದು ಹೇಳಿದ್ದಾರೆ.
ಮುಂದುವರಿದು ಕರ್ನಾಟಕದಾದ್ಯಂತ ಕಂದಾಯ ಇಲಾಖೆ ಭೂಮಿ ಎಲ್ಲೆಲ್ಲಿದೆಯೋ ಅದೆಲ್ಲದರ ಆಡಿಟಿಂಗ್ ಆಗಲಿದೆ. ನಿವೇಶನ ರಹಿತ ಎಲ್ಲಾ ಬಡವರಿಗೂ ನಿವೇಶನ ಕೊಡುವುದನ್ನು ಕಡ್ಡಾಯವಾಗಿ ಜಾರಿಯಾಗಬೇಕು. ಇದಕ್ಕೆ ಒಂದು ಸ್ಪಷ್ಟವಾದ ಯೋಜನೆ ರೂಪಿಸುತ್ತಿದ್ದೇವೆ. ನೀವೆಲ್ಲರೂ ಕಂದಾಯ ಭೂಮಿ ಎಲ್ಲೆಲ್ಲಿದೆಯೋ ಅವುಗಳ ಬಗ್ಗೆ ಸ್ಪಷ್ಟ ದಾಖಲೆ, ವಿವರಗಳನ್ನು ಸಂಗ್ರಹಿಸಿ ಕಳುಹಿಸಬೇಕು ಎಂದಿದ್ದಾರೆ.
ಅಲ್ಲದೆ ಶಿಕ್ಷಣ ಇಲಾಖೆಯಲ್ಲೂ ಇದೇ ರೀತಿಯ ಮತ್ತೊಂದು ಕ್ರಾಂತಿಕಾರಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಸಿಎಸ್‌ಆರ್ ಶಾಲೆಗಳನ್ನು ನಾವು ಆರಂಭಿಸುತ್ತಿದ್ದೇವೆ. ಕೆಪಿಎಸ್ ಶಾಲೆಗಳ ಮಾದರಿಯಲ್ಲಿ ಸಿಎಸ್‌ಆರ್ ಶಾಲೆಗಳನ್ನು ಅಭಿವೃದ್ಧಿ ಪಡಿಸಲಿದ್ದೇವೆ. ಗ್ರಾಮಾಂತರ ಭಾಗದಲ್ಲೂ ಉತ್ತಮ ಗುಣಮಟ್ಟದ ಶಾಲೆಗಳು ಅವರ ಏರಿಯಾದಲ್ಲೇ ಇರಬೇಕು ಎನ್ನುವುದು ನಮ್ಮ ಸರ್ಕಾರದ ಆಲೋಚನೆಯಾಗಿದೆ. ಇದಕ್ಕಾಗಿ ಎಲ್ಲಾ ಉದ್ಯಮಿಗಳನ್ನು ಕರೆಸಿ ಮಾತುಕತೆ ನಡೆಸುತ್ತಿದ್ದೇವೆ. ಪ್ರಾಥಮಿಕ ಹಂತದಿಂದಲೇ ನನ್ನ ಕ್ಷೇತ್ರದಲ್ಲಿ ನಾನು ಈ ಪ್ರಯೋಗ ಮಾಡಿ ಯಶಸ್ವಿ ಆಗಿದೆ. 20 ಶಾಲೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ.












Click it and Unblock the Notifications