ಕೇರಳ ಸಿಎಂ ಪುತ್ರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್
ಬೆಂಗಳೂರು, ಫೆಬ್ರವರಿ 13: ಗಂಭೀರ ವಂಚನೆ ಪ್ರಕರಣದಲ್ಲಿ ಹೈಕೋರ್ಟ್ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ಡಾ. ವೀಣಾ ವಿಜಯನ್ ಅವರ ವಿರುದ್ಧ ಬಂಧನ ಸೇರಿ ಇತರೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ. ಅಲ್ಲದೆ, ವಾದ-ಪ್ರತಿವಾದ ಆಲಿಸುವುದನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದರಿಸಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ಡಾ. ವೀಣಾ ನಿರ್ದೇಶಕಿಯಾಗಿರುವ ಎಕ್ಸಾಲಜಿಕ್ ಸಲುಷನ್ಸ್ ಕಂಪೆನಿ ವಿರುದ್ಧ ತನಿಖೆಗೆ ಆದೇಶಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ: ಕೇಂದ್ರ ಸರ್ಕಾರದ ಪರ ವಕೀಲರು, ಕೊಚ್ಚಿನ್ ಮಿನರಲ್ಸ್ ಕಂಪನಿಯೂ ಅರ್ಜಿದಾರರ ಆಪೇಕ್ಷೆಯಂತೆ 135 ಕೋಟಿ ರೂ.ವನ್ನು ರಾಜಕೀಯ ವ್ಯಕ್ತಿಗಳಿಗೆ ನೀಡಿದೆ ಹಾಗೂ ಸ್‌ಟಾ ವೇರ್ ಸೇವೆಗಾಗಿ 1.72 ಕೋಟಿ ರೂ.ಗಳನ್ನು ನೀಡಿದೆ.
ಯಾವುದೇ ಸೇವೆ ನೀಡದೆ ಇದ್ದರು. ಕೊಚ್ಚಿನ್ ಮಿನರಲ್ಸ್ ಹಣ ಸಂದಾಯ ಮಾಡಿದೆ. ಮಾಹಿತಿ ಕೇಳಿದರೆ ಜಿಎಸ್‌ಟಿ ಪಾವತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಇವರ ನಡುವೆ ಹಲವು ವ್ಯವಹಾರಗಳು ಅನುಮಾನಾಸ್ಪದವಾಗಿವೆ ಎಂದರು.
ಅರ್ಜಿದಾರರ ಪರ ವಕೀಲರು ವ್ಯವಹಾರದ ಮಾಹಿತಿ ನೀಡದಿರುವುದು ವಂಚನೆಯಾಗುವುದಿಲ್ಲ. ಯಾವುದೇ ಅಪರಾಧ ಎಸಗದಿದ್ದರೂ ಸರ್ಕಾರ ತನಿಖೆಗೆ ಆದೇಶಿಸಿದ್ದು ಕಾನೂನುಬಾಹಿರ ಎಂದು ಹೇಳಿದರು.
ವಿಚಾರಣೆ ಆಲಿಸಿದ ನ್ಯಾಯಪೀಠ, ಕಂಪನಿ ತನಿಖಾದಳಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸಬೇಕು. ಆದರೆ ಅರ್ಜಿದಾರ ವಿರುದ್ಧ ಬಂಧನದಂತಹ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ಕೊಚ್ಚಿನ್ ಮಿನರಲ್ಸ್ ರುಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಮತ್ತು ಅರ್ಜಿದಾರರ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದ 2021ರಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಕಂಪೆನಿ ಕಾಯಿದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಬೆಂಗಳೂರಿನ ರಿಜಿಸ್ಟ್ರಾರ್ ಅವರಿಂದ ಅರ್ಜಿದಾರರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ್ದ ಅರ್ಜಿದಾರರು ಕಂಪೆನಿ ರಿಜಿಸ್ಟ್ರಾರ್ ಕೇಳಿದ್ದ ಎಲ್ಲ ಮಾಹಿತಿಗಳನ್ನು ದಾಖಲೆಗಳೊಂದಿಗೆ ಸಲ್ಲಿಸಿದ್ದರು.
ಆದರೆ ಕಂಪೆನಿಗಳ ರಿಜಿಸ್ಟ್ರಾರ್ ಅವರು 2021ರ ಅ. 1 ರಂದು ಮತ್ತೊಂದು ಪತ್ರ ಬರೆದು, ಈವರೆಗೂ ಸಲ್ಲಿಸಿರುವ ದಾಖಗಳೂ ಸರಿಯಿಲ್ಲ. ಹಾಗಾಗಿ ಮುಂದಿನ ಏಳು ದಿನಗಳಲ್ಲಿ ಎಲ್ಲ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದರು. ಆ ಪ್ರಕಾರವಾಗಿ 2022ರ ಜೂ 24ರಂದು ಅರ್ಜಿದಾರರು ತಮ್ಮ ಪ್ರತಿನಿಧಿಗಳೊಂದಿಗೆ ಖುದ್ದು ಹಾಜರಾಗಿ ಅಗತ್ಯವಿರುವ ದಾಖಲೆಗಳೊಂದಿಗೆ ಎಲ್ಲ ವಿವರಣೆ ಮತ್ತು ಸ್ಪಷ್ಟೀಕರಣಗಳನ್ನು ನೀಡಿದ್ದರು.
ಆದರೆ, ಅರ್ಜಿದಾರ ಕಂಪೆನಿಯ ನಿರ್ದೇಶಕರ ತಂದೆಯ ಅಧೀನದಲ್ಲಿರುವ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್‌ಐಡಿಸಿ) ವು ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್‌ಯಲ್ಲಿ ಶೇ. 13.4 ರಷ್ಟು ಷೇರುಗಳನ್ನು ಹೊಂದಿದೆ ಎಂದು ಆರೋಪಿಸಿ ರಿಜಿಸ್ಟ್ರಾರ್ ಅವರು 2023ರಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ನೋಟಿಸ್‌ಗೆ ಸಂಬಂಧಿಸಿದಂತೆ ಅರ್ಜಿದಾರ ಕಂಪೆನಿ ವಿವರಣೆಯನ್ನು ನೀಡಿತ್ತು. ಆದರೆ, ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್‌ಐಡಿಸಿ) ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್ ವ್ಯವಹಾರಗಳ ಕುರಿತಂತೆ ತನಿಖೆಯನ್ನು ಪ್ರಾರಂಭಿಸಲು ಆದೇಶ ಹೊರಡಿಸಲಾಗಿತ್ತು.
ಜತೆಗೆ, ಈ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ತನಿಖಾಧಿಕಾರಿ ಕೆ.ಪ್ರಭು ಎಂಬುವರು ನೋಟಿಸ್ ನೀಡಿದ್ದರು. ಈ ಸಂಬಂಧ ಅರ್ಜಿದಾರರು ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಕಂಪೆನಿಯ ವಿರುದ್ಧ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಕಂಪೆನಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ನಡೆಸುವಂತೆ ಜ.31 ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು.












Click it and Unblock the Notifications