21.89 ಕೋಟಿ ಕೋವಿಡ್ ಲಸಿಕೆಗಳನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ: ಆರೋಗ್ಯ ಸಚಿವಾಲಯ
ನವದೆಹಲಿ, ಮೇ 25: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಲಸಿಕೆ ವಿಚಾರವಾಗಿ ಮಾಹಿತಿಯನ್ನು ನೀಡಿದೆ. ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಈವರೆಗೆ 21.89 ಕೋಟಿ ಕೊರೊನಾ ಲಸಿಕೆಯನ್ನು ಹಂಚಿಕೆ ಮಾಡಿದೆ ಎಂದು ತಿಳಿಸಿದೆ.
ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ 1,77,67,850 ಕೋಟಿ ಲಸಿಕೆ ಲಭ್ಯವಿದೆ ಎಂದು ಕೂಡ ಇದೇ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದೆ.
ಆರೋಗ್ಯ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರ ಈವರೆಗೆ 21,89,69,250 ಡೋಸ್‌ಗಳನ್ನು ನೀಡಿದೆ. ಇದರಲ್ಲಿ ಕೇಂದ್ರದಿಂದ ಉಚಿತವಾಗಿ ನೀಡುವ ಲಸಿಕೆ ಹಾಗೂ ರಾಜ್ಯಗಳು ನೇರವಾಗಿ ಖರೀದಿ ಮಾಡುವ ಲಸಿಕೆಗಳು ಕೂಡ ಸೇರಿದೆ. ಇದರಲ್ಲಿ ವೇಸ್ಟೇಜ್ ಸೇರಿದಂತೆ 19,93,39,750 ಡೋಸ್‌ಗಳು ಬಳಕೆಯಾಗಿದೆ ಎಂದು ತಿಳಿಸಿದೆ.

ಅಲ್ಲದೆ 7 ಲಕ್ಷದಷ್ಟು ಪ್ರಮಾಣದ ಲಸಿಕೆಗಳು ಹಂಚಿಕೆಗೆ ಸಿದ್ಧವಾಗಿದೆ. ಮುಂದಿನ ಮೂರು ದಿನದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಲಸಿಕೆಗಳನ್ನು ಸ್ವೀಕರಿಸಲಿದೆ. ಜೊತೆಗೆ ಲಸಿಕೆಗಳನ್ನು ನೇರವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಖರೀದಿಸಲು ಭಾರತ ಸರ್ಕಾರ ಸಹಕರಿಸುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪರೀಕ್ಷೆ, ಪತ್ತೆ, ಚಿಕಿತ್ಸೆ ಮಹತ್ವದ ಪಾತ್ರವಹಿಸುತ್ತದೆ. ಇದರ ಜೊತೆಗೆ ಈ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಲಸಿಕಾ ಕಾರ್ಯಕ್ರಮ ಮಹತ್ವದ ಯೋಜನೆ ಎಂದು ಸರ್ಕಾರ ಭಾವಿಸುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಮಂಗಳವಾರ ಮುಂಜಾನೆ 7 ಗಂಟೆಯವರೆಗೆ 19,85,38,999 ಲಸಿಕೆಗಳನ್ನು ನೀಡಲಾಗಿದೆ ಎಂದು ಕೂಡ ಈ ಸಂದರ್ಭದಲ್ಲಿ ಮಾಹಿತಿ ನೀಡಿದೆ.












Click it and Unblock the Notifications