Karnataka corona update: ದೇಶದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ, ಜನವರಿ ಮೊದಲ ವಾರ ಸೋಂಕಿನ ತೀವ್ರತೆ ಹೆಚ್ಚಳ?
ಬೆಂಗಳೂರು, ಡಿಸೆಂಬರ್ 21: ಕರ್ನಾಟಕದಲ್ಲಿ ಕೊರೊನಾ ಏರಿಕೆ ಆಗುತ್ತಲೇ ಇದ್ದು, ಹೊಸ ಕೋವಿಡ್ ಅಲೆ ಶುರುವಾದ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು ಮೂರು ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಸರ್ಕಾರ ಮೇಲಿಂದ ಮೇಲೆ ಸಭೆ ನಡೆಸಿ ತಜ್ಞರ ಜತೆ ಚರ್ಚಿಸುತ್ತಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರ ಕೋವಿಡ್ 19 ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಇಂದು ಗುರುವಾರ (ಡಿಸೆಂಬರ್ 21) ಸಹ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಹಿಂದಿನಂತೆ ಈ ಬಾರಿಯು ವೇಗದಲ್ಲಿ ವ್ಯಾಪ್ತಿಸುತ್ತಿರುವ ಕೊರೊನಾ ಕಟ್ಟಿಹಾಕಲು ಸರ್ಕಾರ ಎಲ್ಲ ವಿಧದಲ್ಲೂ ಸಿದ್ಧತೆ ಆರಂಭಿಸಿದೆ.

ಆಶ್ಚರ್ಯಕರ ವಿಚಾರವೆಂದರೆ, ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಹೆಚ್ಚಾಗಿದ್ದೆ ತಡ ರಾಜ್ಯದಲ್ಲಿ ಕೊರೊನಾ ಭೀತಿ ಸೃಷ್ಟಿಯಾಗಿದೆ. ಒಟ್ಟು 2041 ಸಕ್ರಿಯೆ ಪ್ರಕರಣಗಳಿಂದ ಕೇರಳ ರಾಜ್ಯದಲ್ಲಿ ದೇಶದಲ್ಲಿ ಅತ್ಯಧಿಕ ಕೋವಿಡ್ ಇರುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದರ ನಂತರ ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ.
ಕರ್ನಾಟಕದಲ್ಲಿ ಸಕ್ರಿಯೆ ಕೇಸ್ 92
ಒಟ್ಟು 92 ಸಕ್ರಿಯ ಪ್ರಕರಣಗಳು ಇರುವ ಕರ್ನಾಟಕವು ದೇಶದ ಎರಡನೇ ರಾಜ್ಯವಾಗಿ ಗುರುತಿಸಿಕೊಂಡಿದೆ. ಇನ್ನೂ ಒಟ್ಟಾರೆ ದೇಶದಲ್ಲಿದ್ದ 587 ಸಕ್ರಿಯೆ ಪ್ರಕರಣವು ಕೆಲವೇ ದಿನದಲ್ಲಿ 2300ರ ಗಡಿ ದಾಟಿದೆ. ಈ ಮೂಲಕ ಕೊರೊನಾ ಹೊಸ ತಳಿ JN.1 (ಜೆಎನ್ 1) ದೇಶಾದ್ಯಂತ ಅದರಲ್ಲೂ ಕರ್ನಾಟಕ, ಕೇರಳದಲ್ಲಿ ಆರೋಗ್ಯ ಆತಂಕ ಸೃಷ್ಟಿ ಮಾಡಿದೆ.

ಕರ್ನಾಟಕದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಸುಮಾರು 72 ಮಂದಿ ಹೋಂ ಐಸೋಲೆಷನ್‌ನಲ್ಲಿದ್ದು, ಅವರ ಮೇಲೆ ನಿಗಾ ಇಡಲಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ಬುಲಿಟಿನ್ (ಡಿ.20) ಪ್ರಕಾರ ಒಂದೇ ದಿನದಲ್ಲಿ 20 ಪಾಸಿಟಿವ್ ಪ್ರಕರಣಗಳು ವರದಿ ಆಗಿದೆ. ಇದರಲ್ಲಿ ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ.
ಜನವರಿ ಮೊದಲ ವಾರ ಕೋವಿಡ್ ಏರಿಕೆ?
ಕೊರೊನಾ ಏರಿಕೆ ಆಗುತ್ತಿದೆ. ಈ ಮಧ್ಯೆ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗಳು ಎದುರಾಗಿವೆ. ಕೋವಿಡ್ ಇಲ್ಲದೇ ನಿಶ್ಚಿಂತೆಯಿಂದ ಇದ್ದ ಜನರು ಇದೀಗ ಒಮ್ಮೆಲೆ ಮಾರ್ಗಸೂಚಿಗಳನ್ನು ಅನುಸರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಆರೋಗ್ಯ ದೃಷ್ಟಿಯಿಂದ ಸರ್ಕಾರ ಸೂಚನೆ ಪಾಲಿಸಬೇಕಿದೆ. ಆದರೆ ಹಲವು ಕೋವಿಡ್ ಅಲೆ ನೋಡಿರುವ ಜನರು ಹೊಸ ತಳಿ ಏನು ಮಾಡೀತು ಎಂಬ ನಿರ್ಲಕ್ಷ್ಯ ತೋರಿದ್ದೇ ಆದಲ್ಲಿ ಜನವರಿ ಮೊದಲ ವಾರದಲ್ಲಿ ಕೊರೊನಾ ತೀವ್ರಗತಿಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.
ಟೆಸ್ಟಿಂಗ್ ಹೆಚ್ಚಳ: ಪಾಸಿಟಿವಿಟಿ ರೇಟ್ ಎಷ್ಟಿದೆ?
ಕರ್ನಾಟಕದಲ್ಲಿ ಕಳೆದ ಒಂದು ದಿನದಲ್ಲಿ 407 ಆರ್‌ಟಿಪಿಸಿ ಆರ್ ಟೆಸ್ಟ್ ಮಾಡಲಾಗಿದ್ದು, 401 ಆರ್‌ಎಟಿ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಒಟ್ಟು 20 ಮಂದಿಗೆ ಕೊರೊನಾ ದೃಢವಾಗಿದೆ. ಶೇಕಡಾ 10 ಸಾವಿನ ದರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ ಕೋವಿಡ್ ಪಾಸಿಟಿವಿ ರೇಟ್ ಶೇ. 2.47 ರಷ್ಟಿದೆ.
ಸದ್ಯ ಕೊರೊನಾ ಹೆಚ್ಚುತ್ತಿರುವುದರಿಂದ ನಿಗದಿತ ವಯೋಮಾನದವರಿಗೆ, ಮಕ್ಕಳಿಗೆ, ಬಾಣಂತಿಯರಿಗೆ ಮಾಸ್ಕ್ ಕಡ್ಡಾಯ ಸೇರಿದಂತೆ ಕೆಲವು ಮಾರ್ಗಸೂಚಿ ಹೊರಡಿಸಲಾಗಿದೆ. ಕೋವಿಡ್ ಪರೀಕ್ಷೆ ಹೆಚ್ಚಿಸುವುದಾಗಿ ಸರ್ಕಾರ ತಿಳಿಸಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಪ್ರಯುಕ್ತ ಮತ್ತಷ್ಟು ನಿರ್ಬಂಧ ಹೇರಿದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications