Covid-19: ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸೇರಿ ಐದು ಮಂದಿಗೆ ಸೋಂಕು ದೃಢ
ಚಿತ್ರದುರ್ಗ, ಡಿಸೆಂಬರ್, 28: ಕೋಟೆನಾಡು ಚಿತ್ರದುರ್ಗದಲ್ಲೂ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಖಾತೆ ಆರಂಭಿಸಿದಂತಾಗಿದೆ.
ಜಿಲ್ಲೆಯಲ್ಲಿ ಓರ್ವ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸೇರಿದಂತೆ 5 ಮಂದಿಗೆ ಸೋಂಕು ದೃಢಪಟ್ಟಿದೆ. ಚಿತ್ರದುರ್ಗ ತಾಲೂಕಿನಲ್ಲಿ 2, ಚಳ್ಳಕೆರೆ ತಾಲೂಕಿನಲ್ಲಿ 2, ಮೊಳಕಾಲ್ಮೂರು ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐವರು ಸೋಂಕಿತರಲ್ಲಿ ಓರ್ವ ಕೋವಿಡ್ ಪೀಡಿತ ವ್ಯಕ್ತಿ ಬೆಂಗಳೂರಿನ ಹೋಂ ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರೇಣು ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಡಿಸೆಂಬರ್ 26ರವರೆಗೆ ಒಟ್ಟು 368 ಮಂದಿಗೆ ಪರೀಕ್ಷೆ ನಡೆಸಿದ್ದರು. ಇದರಲ್ಲಿ ಹಿರಿಯೂರು 76, ಚಿತ್ರದುರ್ಗ 66, ಚಳ್ಳಕೆರೆ 57, ಹೊಳಲ್ಕೆರೆ 41, ಹೊಸದುರ್ಗ 79 ಹಾಗೂ ಮೊಳಕಾಲ್ಮುರಿನಲ್ಲಿ 49 ಮಂದಿಯನ್ನು ಕೋವಿಡ್ ಪರೀಕ್ಷೆ ಒಳಪಡಿಸಲಾಗಿತ್ತು.

ಜೆಎನ್-1 ಸೋಂಕು ತಡೆಗಟ್ಟಲು ಕ್ರಮ
ಇನ್ನು ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್ ಹೊಸ ಪ್ರಭೇದ ತಳಿಯ ಜೆಎನ್-1 ಸೋಂಕು ತಡೆಗಟ್ಟಲು ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರೇಣು ಪ್ರಸಾದ್ ತಿಳಿಸಿದ್ದಾರೆ.
ನಗರದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಕಚೇರಿಯಲ್ಲಿ ಬುಧವಾರ ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ನೇತೃತ್ವದಲ್ಲಿ ಆಯೋಜಿಸಿದ್ದ ಕೋವಿಡ್ ಮುಂಜಾಗ್ರತಾ ಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದರು.
ದೇಶದಲ್ಲಿ ಮೊದಲು ಕೇರಳದಲ್ಲಿ ಕಾಣಿಸಿಕೊಂಡ ಈ ಜೆಎನ್-1 ತಳಿ ಸೋಂಕು ಈಗ ರಾಜ್ಯದಲ್ಲಿಯೂ ಕಾಣಿಸಿಕೊಂಡಿದೆ. ಸರ್ಕಾರದ ಮಾರ್ಗದರ್ಶನದಂತೆ ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸುತ್ತಿದ್ದು, ನಿಗದಿತ ಗುರಿಯಂತೆ ನಿತ್ಯವೂ ಸ್ಯಾಂಪಲ್ ಪತ್ತೆ ಹಚ್ಚಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವವರು ಹಾಗೂ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಈಗಾಗಲೇ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಹಾಸಿಗೆಗಳು, ಮರಡಿಹಳ್ಳಿ ಹಾಗೂ ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 15 ಹಾಸಿಗೆಗಳ ವ್ಯವಸ್ಥೆ, 68 ಜಂಬೂ ಆಕ್ಸಿಜನ್ ಹಾಗೂ 36 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೂಡ ಸಿದ್ಧತೆಗಳು ನಡೆದಿದೆ. ವಿದೇಶ ಹಾಗೂ ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಮೇಲೆ ಆರೋಗ್ಯ ಇಲಾಖೆ ಕಣ್ಣಿಟ್ಟಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗಿ ಬಂದವರ ಮೇಲೆ ಸಹ ನಿಗಾ ಇಡಲಾಗಿದೆ ಎಂದು ತಿಳಿಸಿದರು.












Click it and Unblock the Notifications