ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಗುಡ್‌ನ್ಯೂಸ್: ವೈಟ್‌ಫೀಲ್ಡ್, ಐಟಿಪಿಎಲ್ ಸೇರಿ ಪ್ರಮುಖ ರಸ್ತೆಗಳ ಅಗಲೀಕರಣಕ್ಕೆ ವೇಗ
ಬೆಂಗಳೂರಿನಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ರಸ್ತೆ ಅಗಲೀಕರಣ ಮತ್ತು ಅಂಡರ್ಪಾಸ್ ಯೋಜನೆಗಳಿಗೆ ಅಗತ್ಯ ಭೂ ಹಸ್ತಾಂತರ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆ ಅಭಿವೃದ್ಧಿ, ರಸ್ತೆ ಅಗಲೀಕರಣ ಹಾಗೂ ಅಂಡರ್ಪಾಸ್ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ, ರಸ್ತೆ ಅಗಲೀಕರಣಕ್ಕಾಗಿ ಕಾಯ್ದಿರಿಸಲಾಗಿರುವ ಜಾಗಗಳನ್ನು ಉಚಿತವಾಗಿ ಪರಿತ್ಯಾಜನಾ ಪತ್ರ (ರಸ್ತೆ ವಿಸ್ತರಣೆಗಾಗಿ ಉಚಿತವಾಗಿ ಜಾಗ ಒಪ್ಪಿಸಬೇಕಾದ ಪ್ರದೇಶಗಳು) ಮೂಲಕ ಹಸ್ತಾಂತರಗೊಳ್ಳಬೇಕಿರುವ ಪ್ರದೇಶಗಳು ಹಾಗೂ ಪಾರ್ಕ್ ಮತ್ತು ಮುಕ್ತ ಸ್ಥಳಗಳಿಗಾಗಿ ಮೀಸಲಾದ ಸಿ.ಎ ಸ್ವತ್ತುಗಳನ್ನು ತ್ವರಿತವಾಗಿ ನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಕೆಐಎಡಿಬಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಸಮನ್ವಯ ಸಭೆ ನಡೆಸಿದರು.
ರಸ್ತೆ ಅಗಲೀಕರಣಕ್ಕೆ ಗುರುತಿಸಲಾದ ಪ್ರಮುಖ ರಸ್ತೆಗಳು
ಸಭೆಯಲ್ಲಿ ಕೆ.ಐ.ಎ.ಡಿ.ಬಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ಪ್ರದೇಶಗಳಲ್ಲಿನ ಪ್ರಮುಖ ರಸ್ತೆಗಳಿಗೆ ಸಂಬಂಧಿಸಿದಂತೆ ರಸ್ತೆ ಅಗಲೀಕರಣ ಮತ್ತು ಭೂ ಹಸ್ತಾಂತರ ಪ್ರಕ್ರಿಯೆಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.

ಪ್ರಮುಖ ರಸ್ತೆಗಳು
* ಐಟಿಪಿಎಲ್ ಮುಖ್ಯ ರಸ್ತೆ (ಹೊರ ವರ್ತುಲ ರಸ್ತೆಯಿಂದ ಹೋಪ್ ಫಾರಂ ಜಂಕ್ಷನ್ ವರೆಗೆ) - ಆರ್.ಎಂ.ಪಿ ಪ್ರಕಾರ 45 ಮೀಟರ್ ಅಗಲದ ರಸ್ತೆ
* ವೈಟ್ಫೀಲ್ಡ್ ಮುಖ್ಯ ರಸ್ತೆ (ವರ್ತೂರು ಕೋಡಿಯಿಂದ ಹೋಪ್ ಫಾರಂ ಜಂಕ್ಷನ್ ವರೆಗೆ) - ಆರ್.ಎಂ.ಪಿ ಪ್ರಕಾರ 45 ಮೀಟರ್ ಅಗಲದ ರಸ್ತೆ
* ನ್ಯೂ ಹೊರೈಜನ್ ಸ್ಕೂಲ್ ರಸ್ತೆ (ಹೊರ ವರ್ತುಲ ರಸ್ತೆಯಿಂದ ಗೇರ್ ಸ್ಕೂಲ್ ರಸ್ತೆ ವರೆಗೆ) - ಆರ್.ಎಂ.ಪಿ ಪ್ರಕಾರ 45 ಮೀಟರ್ ಅಗಲದ ರಸ್ತೆ
* ಗೋಶಾಲೆ ರಸ್ತೆ (ಹೊರ ವರ್ತುಲ ರಸ್ತೆಯಿಂದ ಭಾಗಮನೆ ಟೆಕ್ ಪಾರ್ಕ್ - ಎಸ್ಎಪಿ ರಸ್ತೆ ಸಂಖ್ಯೆ-07 ಮೂಲಕ ಸತ್ಯಸಾಯಿ ಆಸ್ಪತ್ರೆ ವರೆಗೆ) - ಆರ್.ಎಂ.ಪಿ ಪ್ರಕಾರ 24 ಮೀಟರ್ ಅಗಲದ ರಸ್ತೆ
* ದಿಣ್ಣೂರು ಮುಖ್ಯ ರಸ್ತೆ (ಐಟಿಪಿಎಲ್ ಮುಖ್ಯ ರಸ್ತೆಯಿಂದ ರೈಲ್ವೆ ಟ್ರ್ಯಾಕ್ / ರೈಲ್ವೆ ಕ್ರಾಸಿಂಗ್ ವರೆಗೆ) - ಆರ್.ಎಂ.ಪಿ ಪ್ರಕಾರ 18 ಮೀಟರ್ ಅಗಲದ ರಸ್ತೆ
ಈ ರಸ್ತೆಗಳ ಎರಡೂ ಬದಿಗಳಲ್ಲಿನ ಖಾಸಗಿ ಸ್ವತ್ತುಗಳಿಗೆ ನಕ್ಷೆ ಮಂಜೂರಾತಿ ನೀಡುವ ಸಂದರ್ಭದಲ್ಲಿ ರಸ್ತೆ ಅಗಲೀಕರಣ, ಪಾರ್ಕ್ ಹಾಗೂ ಓಪನ್ ಸ್ಪೇಸ್ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ ಜಾಗಗಳನ್ನು ಪರಿತ್ಯಾಜನಾ ಪತ್ರದ ಮೂಲಕ ನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಕೆ.ಐ.ಎ.ಡಿ.ಬಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ಪ್ರದೇಶಗಳಲ್ಲಿನ ಪ್ರಮುಖ ರಸ್ತೆಗಳಿಗೆ ಸಂಬಂಧಿಸಿದಂತೆ ರಸ್ತೆ ಅಗಲೀಕರಣಕ್ಕಾಗಿ ಗುರುತಿಸಲಾದ ಸ್ವತ್ತುಗಳ ಭೂ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಕೆಐಎಡಿಬಿ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಬಿಗ್ ಬಜಾರ್ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಏಕಮುಖ ಅಂಡರ್ಪಾಸ್ ಕಾಮಗಾರಿಯನ್ನು ಪರಿಶೀಲಿಸಿದ ಹೆಚ್ಚುವರಿ ಆಯುಕ್ತರು ಕೆಐಎಡಿಬಿ ವತಿಯಿಂದ ಹಸ್ತಾಂತರಿಸಬೇಕಾದ ಸ್ವತ್ತುಗಳ ಮಾಹಿತಿಯನ್ನು ಪಡೆದುಕೊಂಡರು. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಸ್ವತ್ತುಗಳ ತ್ವರಿತವಾಗಿ ನಗರ ಪಾಲಿಕೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೋಪ್ ಪಾರ್ಮ್ ಜಂಕ್ಷನ್
ಚನ್ನಸಂದ್ರದ ಮುಖ್ಯ ರಸ್ತೆಯಲ್ಲಿನ ಹೋಪ್ ಪಾರ್ಮ್ ಜಂಕ್ಷನ್ ಅಂಡರ್ ಪಾಸ್ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಇರುವ ಸ್ವತ್ತುಗಳ ಭೂಸ್ವಾಧೀನ ಪ್ರಕ್ರಿಯೆಗಳ ಕುರಿತು ವಿಶೇಷವಾಗಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ ಕೆ.ಐ.ಎ.ಡಿ.ಬಿ ವ್ಯಾಪ್ತಿಯ ಕೆಲವು ಜಾಗಗಳ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಗಮನಕ್ಕೆ ಬಂದಿದ್ದು, ಬಾಕಿ ಇರುವ ಭೂಸ್ವಾಧೀನ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ರೀತಿ, ಎಚ್ ಎಂ ಟೆಕ್ ಕಂಪನಿಗೆ ಸಂಬಂಧಿಸಿದ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಸುಮಾರು 4.10 ಮೀಟರ್ ಅಗಲದ ಜಾಗ ಅಗತ್ಯವಿದ್ದು, ಕಾಮಗಾರಿ ವ್ಯಾಪ್ತಿಗೆ ಒಳಪಡುವ ಕಾಂಪೌಂಡ್ ಗೋಡೆ, ಭದ್ರತಾ ಕೊಠಡಿ ಹಾಗೂ ಪ್ರವೇಶ ದ್ವಾರವನ್ನು ತೆರವುಗೊಳಿಸುವ ಸಲುವಾಗಿ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ರಸ್ತೆ ಅಗಲೀಕರಣ, ಅಂಡರ್‌ಪಾಸ್ ನಿರ್ಮಾಣ ಹಾಗೂ ಪರ್ಯಾಯ ರಸ್ತೆ ಜಾಲದ ಅಭಿವೃದ್ಧಿ ಅತ್ಯಗತ್ಯವಾಗಿದ್ದು, ರಸ್ತೆ ಅಭಿವೃದ್ಧಿಗೆ ಮೀಸಲಾದ ಜಾಗಗಳನ್ನು ತ್ವರಿತವಾಗಿ ನಗರ ಪಾಲಿಕೆಗೆ ಹಸ್ತಾಂತರಿಸುವ ಮೂಲಕ ಯೋಜನೆಗಳನ್ನು ಗಡುವಿನೊಳಗೆ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಹೀಗಾಗಿ ಸಾರ್ವಜನಿಕರಿಗೆ ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ನಗರ ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications