Corona: ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳ: ಆತಂಕ ಬೇಡ ಇರಲಿ ಕಾಳಜಿ..!
ಬೆಂಗಳೂರು ಜನವರಿ 2: ಕೊರೊನಾ ಬಗ್ಗೆ ಮಾತನಾಡಿದರೆ ಇವತ್ತಿಗೆ ಯಾರೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಅದರ ತೀವ್ರತೆ ಕಡಿಮೆಯಾಗಿದೆ ಎನ್ನುವ ವಿಶ್ವಾಸ. ಆದರೆ ಈಗ ಜಾಗೃತಗೊಳ್ಳುವ ಸಮಯ ಬಂದಿದೆ. ರಾಜ್ಯದಲ್ಲಿ ಕಳೆದ ದಿನ 296 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಮೈಸೂರಿನಲ್ಲಿ ಓರ್ವ ವ್ಯಕ್ತಿ ಕೊರೊನಾಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.
ಇದು ಕೊರೊನಾ ಬಗ್ಗೆ ಜಾಗೃತವಾಗಿರುವುದನ್ನು ಸೂಚಿಸುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಕೊರೊನಾ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚಿನ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಸೋಮವಾರ 131 ಕೊರೊನಾ ಕೇಸ್ ದಾಖಲಾಗಿವೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಮಾಹಿತಿ ನೀಡಿದೆ. ರಾಜ್ಯದಲ್ಲಿ 296 ಕೊರೊನಾ ಪ್ರಕರಣಗಳ ಪೈಕಿ ಬೆಂಗಳೂರು ಗ್ರಾಮಾಂತರ 5, ಚಾಮರಾಜನಗರ 5, ದಾವಣಗೆರೆ 4, ಧಾರವಾಡ 4, ಕಲಬುರಗಿ 4, ಕೊಪ್ಪಳ 4, ಮೈಸೂರು 29, ಹಾಸನ 17, ತುಮಕೂರು 16, ದಕ್ಷಿಣ ಕನ್ನಡ 13, ಬಳ್ಳಾರಿ 11, ಮಂಡ್ಯ 9, ಕೋಲಾರ 7, ಚಿಕ್ಕಬಳ್ಳಾಪುರ 6 ಗದಗ 6, ವಿಜಯನಗರ 4 ಪ್ರಕರಣಗಳು ದಾಖಲಾಗಿವೆ.
ಭಾನುವಾರ 5021 ಜನರನ್ನು ರಾಜ್ಯದಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 1245 ಜನರಿಗೆ ಕೊರೊನಾ ದೃಢಪಟ್ಟಿದೆ. 50 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ಬಾಗಲಕೋಟೆ 3, ಬೆಳಗಾವಿ 2, ಬೀದರ್ 2, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಇಬ್ಬರಿಗೆ, ರಾಯಚೂರು, ರಾಮನಗರ, ಉಡುಪಿ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆ ಆಗಿದೆ.
ಮಕ್ಕಳನ್ನು ಕೊರೊನಾದಿಂದ ರಕ್ಷಿಸುವುದು ಹೇಗೆ?
ವಿಶ್ವದೆಲ್ಲೆಡೆ ಕೊರೊನಾ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿವೆ. ಈ ಹಠಾತ್ ಹೆಚ್ಚಳಕ್ಕೆ ಕೊರೊನಾ ಜೆಎನ್.1 ರೂಪಾಂತರವೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಇದರಿಂದ ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಳ್ಳುವ ಜೊತೆಗೆ ಮಕ್ಕಳು ಹಾಗೂ ಮನೆಯ ಹಿರಿಯರನ್ನೂ ಸುರಕ್ಷಿತವಾಗಿಡುವುದು ಬಹಳ ಮುಖ್ಯ. ಹಾಗಾದರೆ ಈ ಬಗ್ಗೆ ಕಾಳಜಿ ವಹಿಸುವುದು ಹೇಗೆ... ಇಲ್ಲಿದೆ ಸಲಹೆಗಳು...

* ಆಗಾಗ ಕೈ ತೊಳೆಯುವುದು
ವಿಶೇಷವಾಗಿ ಆಹಾರ ತಿನ್ನುವಾಗ ನಿಮ್ಮ ಕೈಯನ್ನು ಮುಖವನ್ನು ಮುಟ್ಟಿಕೊಳ್ಳುವಾಗ ಕೈ ತೊಳೆಯುವುದು ಬಹಳ ಮುಖ್ಯ. ಇದರಿಂದ ಆವುದೇ ವೈರಸ್ ನಿಮ್ಮ ದೇಹ ಸೇರುವುದನ್ನು ನೀವು ತಡೆಗಟ್ಟಬಹುದು.
* ಸಮತೋಲಿತ ಆಹಾರ
ಈ ಸಮಯದಲ್ಲಿ ಹೊರ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಆಹಾರ ಬಿಸಿಯಾಗಿರುವಾಗಲೇ ಸೇವಿಸಿ. ಇದರಿಂದ ರೋಗ ಹರಡದಂತೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
* ಮಾಸ್ಕ್ ಧರಿಸುವುದು
ಮಾಸ್ಕ್ ಕೊರೊನಾ ಸಂದರ್ಭದಲ್ಲಿ ಎಷ್ಟೋ ಜನರನ್ನು ಕಾಪಾಡಿದೆ. ಮಾಸ್ಕ್ ಧರಿಸುವುದರಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು. ಹೀಗಾಗಿ ಹೆಚ್ಚು ಜನರಿರುವ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿಕೊಂಡರೆ ಒಳ್ಳೆಯದು.
* ಸಾಮಾಜಿಕ ಅಂತರ
ಒಬ್ಬರಿಂದ ಒಬ್ಬರ ನಡುವೆ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಮತ್ತೊಬ್ಬರನ್ನು ಮುಟ್ಟುವುದು, ಹತ್ತಿರದಿಂದ ಬೆರೆಯುವುದು ಅಥವಾ ಶೇಕ್ ಹ್ಯಾಂಡ್ ಮಾಡುವುದು ಉತ್ತಮವಲ್ಲ. ಇದರಿಂದ ಸೋಂಕು ನಿಮಗೂ ಬಹುಬೇಗ ಹರಡಬಹುದು.
* ವ್ಯಾಕ್ಸಿನೇಷನ್
ಕೊರೊನಾ ನಿಮಗೆ ಅಪಾಯವನ್ನುಂಟು ಮಾಡದೇ ಇರಲು ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಇರುವುದು ತುಂಬಾ ಮುಖ್ಯ. ಇದರಿಂದ ನಿಮಗಾಗುವ ಅಪಾಯವನ್ನು ಕೊಂಚ ಮಟ್ಟಿಗೆ ತಡೆಗಟ್ಟಬಹುದು.












Click it and Unblock the Notifications