ಮೈಸೂರಿನಲ್ಲಿ 6 ಕೋವಿಡ್ ಪ್ರಕರಣ
ಮೈಸೂರು, ಡಿಸೆಂಬರ್ 21: ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಮನೆಮಾಡಿದ್ದುಘಿ, ಮೈಸೂರು ಜಿಲ್ಲೆಯಲ್ಲಿ ಗುರುವಾರ ಆರು ಕೋವಿಡ್ ಪ್ರಕರಣಗಳು ಕಂಡು ಬಂದಿದೆ.
ಇದೇ ವೇಳೆ ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಎಚ್.ಡಿ. ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್‌ಗೆ ಗುರುವಾರ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಭೇಟಿ ನೀಡಿದರು. ಕೇರಳದಿಂದ ಬರುವ ಜನರು ಹಾಗೂ ವಾಹನಗಳ ತಪಾಸಣೆ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಎಂ.ಗಾಯಿತ್ರಿ, ಹುಣಸೂರು ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಉಪಸ್ಥಿತರಿದ್ದರು.

ಶುಕಮನ ನಿರ್ಬಂಧ:
ಕ್ರಿಸ್‌ಮಸ್- ಹೊಸ ವರ್ಷ ಅಂಗವಾಗಿ ಪ್ರವಾಸಿಗರು ಆಗಮಿಸುವ ಹಿನ್ನೆಲೆ ಹಾಗೂ ಕೋವಿಡ್ ಹೆಚ್ಚಳಗೊಂಡಿರುವುದರಿಂದ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಶುಕವನ ಹಾಗೂ ಬೋನ್ಸಾಯಿ ಗಾರ್ಡನ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕೋವಿಡ್ ಹರಡದಂತೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಆಶ್ರಮಕ್ಕೆ ಭೇಟಿ ನೀಡುವ ಭಕ್ತರು ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸುವಂತೆ ಆಶ್ರಮದ ವತಿಯಿಂದ ಮನವಿ ಮಾಡಿಕೊಳ್ಳಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಆರು ಮಂದಿ ರೋಗಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದಿದ್ದರೂ ಕೋವಿಡ್ ಟೆಸ್ಟ್ ಮಾಡಿದಾಗ ಸೋಂಕು ಪತ್ತೆಯಾಗಿದೆ. 5 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದು, 48 ವರ್ಷದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕು ಪತ್ತೆಯಾದ ಎಲ್ಲಾ ಆರು ಮಂದಿಗೂ ತುರ್ತು ನಿಗಾ ಘಟಕದಲ್ಲಿರಿಸಿ ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಆರೋಗ್ಯ ಇಲಾಖೆ ಸೂಚನೆಯಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 1700ಕ್ಕೂ ಹೆಚ್ಚು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಿಂದ ಕೇರಳ ರಾಜ್ಯಗಳಿಗೆ ತೆರಳುವವರ ಮೇಲೆ ನಿಗವಹಿಸಲು ಆಶಾ ಕಾರ್ಯಕರ್ತರಿಗೆ ತಿಳಿಸಲಾಗಿದೆ. ಆಶಾ ಕಾರ್ಯಕರ್ತೆಯರ ಮೂಲಕ ಕೋವಿಡ್ ಅರಿವು ಮೂಡಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಹೇಳಿದರು.
ಡಿಸಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಕೋವಿಡ್ ಜೆಎನ್1 ಹೊಸ ತಳಿಯ ಕೋವಿಡ್ ಹರಡುತ್ತಿದ್ದು ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. 60 ವರ್ಷ ಮೇಲ್ಪಟ್ಟ ವರು, ಹೃದಯ ಸಂಬಂಧಿ ಕಾಯಿಲೆಗಳು ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ಲಕ್ಷಣ ಇರುವವರು ಕೊರೊನಾ ಟೆಸ್ಟ್ ಮಾಡಿಸಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ. ಕೇರಳ ಮತ್ತು ತಮಿಳುನಾಡು ಚೆಕ್ ಪೋಸ್ಟ್‌ಗಳಲ್ಲಿ ಅವರಿಗೆ ಅರ್ಥ ಆಗುವ ಭಾಷೆಯಲ್ಲಿ ಕೋವಿಡ್ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಮಾಹಿತಿ ಪ್ರದರ್ಶನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 5 ಬೆಡ್‌ಗಳನ್ನು ಹಾಗೂ 2 ಆಕ್ಸಿಜನ್ ವೆಂಟಿಲೇಟರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಕೋವಿಡ್ ಹೆಚ್ಚಾದಾಗ ಕೈಗೊಳ್ಳಬೇಕಾದ ಕುರಿತು ಮಾಕ್ ಡ್ರಿಲ್ ಮಾಡಿ. ಮುಂದಿನ ಒಂದು ವಾರದ ನಂತರ ದಿನಕ್ಕೆ ಕನಿಷ್ಠ 1000 ಕೋವಿಡ್ ಟೆಸ್ಟ್ ಮಾಡುವ ಹಾಗೆ ಯೋಜನೆ ರೂಪಿಸಿಕೊಳ್ಳಿ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ದೊರೆಯುವಂತೆ, ಜಂಬೋ ಸಿಲಿಂಡರ್‌ಗಳು ಇರುವಂತೆ ನೋಡಿಕೊಳ್ಳಬೇಕು. ಅಗತ್ಯ ಮೆಡಿಷಿನ್ ಇರುವಂತೆ ಆರೋಗ್ಯ ಅಧಿಕಾರಿಗಳು ಗಮನ ಹರಿಸಬೇಕು ಎಂದರು.












Click it and Unblock the Notifications