ಗಡಿಜಿಲ್ಲೆ ಕೊಡಗಿನಲ್ಲಿ ಕೋರ್ಬಿವ್ಯಾಕ್ಸ್ ಕೋವಿಡ್ ಲಸಿಕೆ ಪಡೆಯಲು ಸಲಹೆ
ಮಡಿಕೇರಿ, ಜನವರಿ 04: ಕರ್ನಾಟಕದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕೇರಳ ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚಳವಾದ ಬಳಿಕ ಕರ್ನಾಟಕದಲ್ಲಿ ಪ್ರಕರಣ ಹೆಚ್ಚಾಗುತ್ತಿದೆ. ಆದ್ದರಿಂದ ಕರ್ನಾಟಕ-ಕೇರಳ ಗಡಿಭಾಗದ ಕೊಡಗು ಜಿಲ್ಲೆಯಲ್ಲಿ ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಲು ಮನವಿ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾಕರಣವನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದಲ್ಲಿಯೂ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ಇನ್ನೂ ಕೋವಿಡ್-19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೆ ಉಳಿದಿರುವ 18 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತೆಯರು ಕೋವಿಡ್-19 ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯದಂಚಿನಲ್ಲಿರುತ್ತಾರೆ.
ಲಸಿಕೆ ಪಡೆಯಲು ಮನವಿ; ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಯಲ್ಲಿರುವ ಕೊಡಗು ಜಿಲ್ಲೆಗೆ 220 ಡೋಸ್ ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆ ಸರಬರಾಜಾಗಿದೆ. ಇದನ್ನು ಮುನ್ನೆಚ್ಚರಿಕೆ ಡೋಸ್ ಆಗಿ ಬಳಸಲು ಈಗಾಗಲೇ ಆರೋಗ್ಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದ ಫಲಾನುಭವಿಗಳು 6 ತಿಂಗಳುಗಳು ಅಥವಾ 26 ವಾರಗಳನ್ನು ಪೂರೈಸಿದ 18 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಆರೋಗ್ಯ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತೆಯರು ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಬಾಕಿ ಇರುವ ಫಲಾನುಭವಿಗಳು ಪಡೆಯುಬಹುದು.
ಕೋರ್ಬಿವ್ಯಾಕ್ಸ್ ಲಸಿಕೆಯು ಜಿಲ್ಲಾ ಆಸ್ಪತ್ರೆ, ಮಡಿಕೇರಿ 100 (ಡೋಸ್), ತಾಲ್ಲೂಕು ಆಸ್ಪತ್ರೆ, ಸೋಮವಾರಪೇಟೆ 60 (ಡೋಸ್) ಮತ್ತು ಸಾರ್ವಜನಿಕ ಆಸ್ಪತ್ರೆ ವಿರಾಜಪೇಟೆ 60 (ಡೋಸ್) ಲಭ್ಯವಿರುತ್ತದೆ. ಜಿಲ್ಲಾ ಆಸ್ಪತ್ರೆ, ಮಡಿಕೇರಿ ಮತ್ತು ತಾಲ್ಲೂಕು ಆಸ್ಪತ್ರೆ ಸೋಮವಾರಪೇಟೆ ಮತ್ತು ವಿರಾಜಪೇಟೆಗೆ ಭೇಟಿ ನೀಡಿ ಜನವರಿ 4ರಿಂದ ಲಸಿಕೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮನವಿ ಮಾಡಿದ್ದಾರೆ.
ಸಚಿವರಿಂದ ಸಭೆ; ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್. ಬೋಸರಾಜು ಮಡಿಕೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಕುರಿತು ಚರ್ಚೆಗಳು ನಡೆದಿತ್ತು.
ಸಭೆಯಲ್ಲಿ ಮಾತನಾಡಿದ್ದ ಸಚಿವರು, "ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರ ಕೈಗೊಳ್ಳಬೇಕು. ಜಿಲ್ಲೆಯ ಗಡಿ ಭಾಗದಲ್ಲಿ ಕೋವಿಡ್ ತಪಾಸಣೆ ಮಾಡಬೇಕು. ಕೋವಿಡ್ ಕಂಡುಬಂದಲ್ಲಿ ಸರ್ಕಾರದ ನಿಯಮದಂತೆ ಹೆಚ್ಚಿನ ಗಮನಹರಿಸಬೇಕು. ಔಷಧಿ ದಾಸ್ತಾನು ಮಾಡಿಕೊಳ್ಳಬೇಕು" ಎಂದು ಸೂಚನೆ ನೀಡಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, "ಕೋವಿಡ್ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಗಡಿ ಪ್ರದೇಶದ ಚೆಕ್ ಪೋಸ್ಟ್‌ಗಳಲ್ಲಿ ಅಗತ್ಯ ತಪಾಸಣೆ ಮಾಡಲಾಗುತ್ತಿದೆ" ಎಂದು ಹೇಳಿದ್ದರು.
ಜನವರಿ 1ರಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯನ್ನು ನಡೆಸಿದ್ದರು.ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಚಲಿತ ಕೋವಿಡ್ ಸಂಬಂಧಿಸಿದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ವಿವರಿಸಿದ್ದರು. ಕೋವಿಡ್ ಸಂಬಂಧಿಸಿದಂತೆ ಭಯಪಡುವ ಅಗತ್ಯ ಇಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು.












Click it and Unblock the Notifications