ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗಳೇ ಶಿಕ್ಷಕರ ಜೀವ ರಕ್ಷಣೆ ಮಾಡಿ, ಮೊದಲು ಲಸಿಕೆ ಕೊಡಿ: ಹೊರಟ್ಟಿ

|
Google Oneindia Kannada News

ಬೆಂಗಳೂರು, ಮೇ. 18: ಸರ್ಕಾರದ ಭಾಗವಾಗಿ ಕಾರ್ಯ ನಿರ್ವಹಿಸಿದ 262 ಶಿಕ್ಷಕರು ಕಳೆದ ಹದಿನೈದು ದಿನದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಶಿಕ್ಷಕ ಸಮುದಾಯ ಕೊರೊನಾ ದಿಂದ ಎದುರಿಸುತ್ತಿರುವ ಸವಾಲು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಆರು ಸಲಹೆಗಳನ್ನು ನೀಡಿ ಅವನ್ನು ಜಾರಿ ಮಾಡುವಂತೆ ಹೊರಟ್ಟಿ ಒತ್ತಾಯಿಸಿದ್ದಾರೆ. ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಪರವಾಗಿ ಬರೆದಿರುವ ಕಳಕಳಿಯ ಪತ್ರದ ವಿವರ ಹೀಗಿದೆ.

ಬಸವರಾಜ ಹೊರಟ್ಟಿ ಪತ್ರದ ಪೀಠಿಕೆ: ಜಾಗತಿಕ ಮಹಾಮಾರಿ ಕೋವಿಡ್‌ಗೆ ವಿಶ್ವದ ಅನೇಕ ದೇಶಗಳು ತಲ್ಲಣಗೊಂಡಿದ್ದು ಅತೀವ ಸಂಕಷ್ಟಕ್ಕೆ ತುತ್ತಾಗಿರುವುದು ನಮ್ಮೆಲ್ಲರನ್ನೂ ಚಿಂತಾಕ್ರಾಂತರನ್ನಾಗಿಸಿದೆ. ನಮ್ಮ ದೇಶವೂ ಸಹ ಅದೇ ಸ್ಥಿತಿಯಲ್ಲಿದ್ದು ಆರೋಗ್ಯ ತುರ್ತುಪರಿಸ್ಥಿತಿಯ ವಾತಾವರಣ ಕಂಡುಬರುತ್ತಿದೆ. ನಮ್ಮ ರಾಜ್ಯದ ಚಿತ್ರಣವೂ ಭಿನ್ನವಾಗಿರದೇ ನಿತ್ಯವೂ ಕೊರೊನಾ ಹರಡುವಿಕೆಯ ಭಯ ಎಲ್ಲೆಡೆ ವ್ಯಾಪಿಸಿದೆ. ತಮ್ಮ ನೇತೃತ್ವದ ಸರಕಾರ ಹಾಗೂ ತಮ್ಮ ಸಚಿವರ ತಂಡ ಮಹಾಮಾರಿ ನಿಯಂತ್ರಣಕ್ಕಾಗಿ ಅವಿರತ ಶ್ರಮಿಸುತ್ತಿರುವುದೂ ಸಹ ನನ್ನ ಗಮನದಲ್ಲಿದೆ.

ತಮಗೆ ತಿಳಿದಿರುವಂತೆ ಕಳೆದ 42 ವರ್ಷಗಳಿಂದ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿನ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಮತದಾರರಾದ ಶಿಕ್ಷಕರ ಹಿತ ಕಾಯುವುದು ನನ್ನ ಆದ್ಯ ಕರ್ತವ್ಯ ಹಾಗೂ ಪ್ರಮುಖ ಜವಾಬ್ದಾರಿ ಎಂಬುದನ್ನು ಅರಿತು ತಮಗೆ ಈ ಪತ್ರ ಬರೆಯುತ್ತಿದ್ದೇನೆ.

ಸಕಲ ಕೆಲಸಗಳಿಗೂ ಶಿಕ್ಷಕರ ನೇಮಕ

ಸಕಲ ಕೆಲಸಗಳಿಗೂ ಶಿಕ್ಷಕರ ನೇಮಕ

ಚುನಾವಣೆಗಳು, ಜನಗಣತಿ ಸೇರಿದಂತೆ ಎಲ್ಲ ಆಪತ್ತುಗಳ ಸಂದರ್ಭದಲ್ಲಿ ಸರಕಾರದ ಎಲ್ಲ ಕೆಲಸಗಳಿಗೂ ಶಿಕ್ಷಕರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಆದರೆ ಅಂತಹ ಕೆಲಸ ನಿರ್ವಹಣೆಯಲ್ಲಿ ಅವರಿಗೆ ಏನಾದರೂ ತೊಂದರೆ ಅನಾಹುತ ಸಂಭವಿಸಿದಲ್ಲಿ ಅವರಿಗೆ ನೀಡಬೇಕಾಗಿರುವ ಸುರಕ್ಷತೆ, ಆರೋಗ್ಯ ಸೌಲಭ್ಯ ಹಾಗೂ ಇತರೆ ಸೌಲತ್ತುಗಳನ್ನು ನೀಡುವಲ್ಲಿ ಸರಕಾರ ಆಸಕ್ತಿ ವಹಿಸದೇ ಇರುವುದು ತೀವ್ರ ವಿಷಾದದ ಸಂಗತಿ. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಬಂದಾಗಿನಿಂದ ಶಿಕ್ಷಕರನ್ನು ಕೋವಿಡ್ ಸೋಂಕಿತರನ್ನು ಗುರುತಿಸುವ ಕಾರ್ಯಕ್ಕೆ, ಸರ್ವೆ ಕಾರ್ಯಕ್ಕೆ, ಆರೈಕೆ ಕೇಂದ್ರಗಳ ಉಸ್ತುವಾರಿಗೆ, ಚೆಕ್ ಪೋಸ್ಟಗಳಲ್ಲಿ, ಡಾಟಾ ಎಂಟ್ರಿ ಕಾರ್ಯಕ್ಕೆ ಹಾಗೂ ಜನ ಜಾಗೃತಿ ಕಾರ್ಯ ಸೇರಿದಂತೆ ಹಲವು ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ.

ಅಲ್ಲದೇ ಕೋವಿಡ್ ಭೀಕರತೆ ಮಧ್ಯೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಲೋಕಸಭೆಯೂ ಸೇರಿದಂತೆ ವಿಧಾನ ಸಭೆಯ ಉಪಚುನಾವಣೆಗಳಿಗೆ ಚುನಾವಣಾ ಕಾರ್ಯ ಮತ್ತು ಬಿ.ಎಲ್.ಓ. ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಈ ಉಪಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಹಲವು ಶಿಕ್ಷಕರು ಸಂಪರ್ಕದ ಕಾರಣದಿಂದ ಕೋವಿಡ್ ಸೋಂಕಿತರಾಗಿ ತೀವ್ರವಾಗಿ ಅಸ್ವಸ್ಥರಾಗಿ ಬಳಲುತ್ತಿದ್ದಾರೆ. ಅವರಲ್ಲಿ ಹಲವು ಜನ ಶಿಕ್ಷಕರು ಅಸುನೀಗಿದ ದಾರುಣ ಘಟನೆಯು ಜರುಗಿರುವುದೂ ನನ್ನ ಗಮನಕ್ಕೆ ಬಂದಿದೆ.

ಉಪ ಚುನಾವಣೆಗೆ ಬಲಿಯಾದ ಶಿಕ್ಷಕರು

ಉಪ ಚುನಾವಣೆಗೆ ಬಲಿಯಾದ ಶಿಕ್ಷಕರು

ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದವರ ಪೈಕಿ 55 ಶಿಕ್ಷಕರು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆಂಬುದು ಅಂಕಿ ಅಂಶ ಸಮೇತ ತಿಳಿದು ಬಂದಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಅವರಲ್ಲಿ ಹಲವರಿಗೆ ಸೋಂಕು ತಗುಲಿದ್ದು ಸುಮಾರು 17 ಜನ ಮೃತಪಟ್ಟಿದ್ದಾರೆ. ಅಲ್ಲದೇ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ 51 ಜನ ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ. ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿಯೂ ಶಿಕ್ಷಕರನ್ನು ನಿಯೋಜಿಸಲಾಗಿತ್ತು ಅವರಲ್ಲಿ ಸುಮಾರು ಜನ ಸೋಂಕಿಗೆ ತುತ್ತಾಗಿದ್ದು 09 ಜನ ಶಿಕ್ಷಕರು ಮೃತರಾಗಿದ್ದು ಇದರಿಂದ ನನಗೆ ಅತೀವ ದುಃಖ ಉಂಟಾಗಿದೆ.

ಅಲ್ಲದೇ ಕೋವಿಡ್ ನಿಯಂತ್ರಣದ ಸರಕಾರದ ಕಾರ್ಯದಲ್ಲಿ ಭಾಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು 262 ಜನ ಶಿಕ್ಷಕರು ಕಳೆದ ಕೇವಲ 15 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೃತಪಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಸಮಾಜಮುಖಿಯಾಗಿ ಸರಕಾರದ ಎಲ್ಲಾ ಆದೇಶಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವ ನನ್ನ ಶಿಕ್ಷಕ ಬಾಂಧವರ ಜೀವನದ ಬಗ್ಗೆ ಸರಕಾರ ಅಸಡ್ಡೆ ತೋರದೆ ಅವರಿಗೆ ಸೂಕ್ತ ಸುರಕ್ಷತೆ ಹಾಗೂ ರಕ್ಷಣೆ ನೀಡಬೇಕಾಗಿರುವುದು ಸರಕಾರದ ಪ್ರಮುಖ ಕರ್ತವ್ಯವಾಗಿದೆ ಎಂಬುದನ್ನು ನಾನು ಬಲವಾಗಿ ಪ್ರತಿಪಾದಿಸುತ್ತೇನೆ.

ಶಿಕ್ಷಕ ಸಮುದಾಯದ ವಸ್ತುಸ್ಥಿತಿ

ಶಿಕ್ಷಕ ಸಮುದಾಯದ ವಸ್ತುಸ್ಥಿತಿ

ರಾಜ್ಯದಲ್ಲಿ ಸುಮಾರು 6.5 ಲಕ್ಷ ಸರಕಾರಿ ನೌಕರರಿದ್ದು ಅದರಲ್ಲಿ ಸರಕಾರಿ, ಅನುದಾನಿತ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸುಮಾರು 3.5 ಲಕ್ಷ ಜನ ಶಿಕ್ಷಕರಿದ್ದಾರೆ. ಸರಕಾರದ ಎಲ್ಲಾ ಗಣತಿ ಕಾರ್ಯ ಸೇರಿದಂತೆ ಇತರೆ ಕೆಲಸಗಳಿಗೆ ಕೇವಲ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಿರುವುದು ನಮ್ಮೆಲ್ಲರ ಗಮನದಲ್ಲಿದೆ. ಇನ್ನು ಮುಂದೆ ಇತರೆ ಇಲಾಖೆಗಳ ನೌಕರರನ್ನೂ ಸಹ ಸಮಾನ ರೀತಿಯಲ್ಲಿ ನಿಯೋಜಿಸಬೇಕು. ಉದಾಹರಣೆಗೆ ಚುನಾವಣೆ ಸೇರಿದಂತೆ ಇತರೆ ಆಪತ್ತು ನಿರ್ವಹಣೆ ಕಾರ್ಯಕ್ಕೆ ಸುಮಾರು 50 ಸಾವಿರ ಸಿಬ್ಬಂದಿ ಬೇಕಾಗಿದ್ದರೆ ಅವರಲ್ಲಿ ಸುಮಾರು 5 ಸಾವಿರ ಶಿಕ್ಷಕರನ್ನು ಮಾತ್ರ ಇಂತಹ ಕಾರ್ಯಗಳಿಗೆ ನಿಯೋಜಿಸಬೇಕು. ಉಳಿದವರನ್ನು ಕಂದಾಯ, ಜಲಸಂಪನ್ಮೂಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ, ಅರಣ್ಯ ಮುಂತಾದ ಇತರೆ ಇಲಾಖೆಗಳಿಂದ ಸಮ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕು.

ಸರಕಾರದ ವ್ಯವಸ್ಥೆಯಲ್ಲಿ ಹುದ್ದೆಗಳು ಬೇರೆ ಬೇರೆಯಾಗಿದ್ದರೂ ಸರಕಾರದ ಮುಖ್ಯ ಕಾರ್ಯದರ್ಶಿಯೂ ಸರಕಾರಿ ನೌಕರರಾಗಿದ್ದು, ಅಲ್ಲಿ ಕೆಲಸ ಮಾಡುವ ಡಿ ವರ್ಗದ ಸಿಬ್ಬಂದಿಯೂ ಸರಕಾರಿ ನೌಕರರೇ ಆಗಿರುತ್ತಾರೆ. ಹೀಗಾಗಿ ಎಲ್ಲಾ ಹಂತದ ಸಿಬ್ಬಂದಿಗೂ ಈ ರೀತಿಯ ವಿಪತ್ತು ನಿರ್ವಹಣಾ ಸಂದರ್ಭದ ಕಾರ್ಯಗಳಿಗೆ ನಿಯೋಜಿಸಬಹುದಾಗಿದ್ದು ಕಳೆದ 20-30 ವರ್ಷಗಳಿಂದ ಸಂಪ್ರದಾಯವೆಂಬಂತೆ ಕೇವಲ ಶಿಕ್ಷಕರನ್ನು ಗಣತಿ, ಚುನಾವಣೆ ಸೇರಿದಂತೆ ವಿಪತ್ತು ನಿರ್ವಹಣಾ ಕಾರ್ಯಗಳಿಗೆ ಬಳಸುವುದನ್ನು ಈಗಲಾದರೂ ಕೈಬಿಟ್ಟು ಹೊಸ ಮನ್ವಂತರಕ್ಕೆ ನಾಂದಿ ಹಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಪ್ರತಿಯೊಬ್ಬ ಹಂತದ ನೌಕರರು ಹಾಗೂ ನಾಗರೀಕರ ಜೀವವೂ ಅಮೂಲ್ಯವಾಗಿದ್ದು ತಾರತಮ್ಯ ಮಾಡಲಾರದೇ ಎಲ್ಲ ನೌಕರರನ್ನು ಸಮಾನ ರೀತಿಯಲ್ಲಿ ನೋಡಿಕೊಳ್ಳುವುದು ಸರಕಾರದ ಕರ್ತವ್ಯವೆಂಬುದು ನನ್ನ ಅನಿಸಿಕೆಯಾಗಿದೆ.

ಹೋರಾಟದ ಎಚ್ಚರಿಕೆ

ಹೋರಾಟದ ಎಚ್ಚರಿಕೆ

ತಮ್ಮ ಪ್ರಧಾನ ವೃತ್ತಿಯೊಂದಿಗೆ ಇತರೆ ಸರಕಾರಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದಂತೆ ಒತ್ತಾಯಿಸಿ ಶಿಕ್ಷಕರು, ರಾಜ್ಯಾದ್ಯಂತ ಬೃಹತ್ ಆಂದೋಲನ ನಡೆಸುವ ಅನಿವಾರ್ಯತೆಯ ನಿರ್ಧಾರವನ್ನು ಶಿಕ್ಷಕರ ಸಂಘಟನೆಗಳು ಪ್ರಕಟಿಸುವ ಹಂತದಲ್ಲಿವೆ. ನಾನು ಸೇರಿದಂತೆ ಹಲವು ಜನ ಪ್ರತಿನಿಧಿಗಳ ಒತ್ತಾಸೆಯಂತೆ ಶಿಕ್ಷಕರು ಕಳೆದ ವರ್ಷದ ಹಾಗೇ ಈ ವರ್ಷವೂ ಕೋವಿಡ್ ಮಹಾಮಾರಿ ನಿಯಂತ್ರಣಾ ಕಾರ್ಯದಲ್ಲಿ ಮಾನವೀಯತೆಯ ಆಧಾರದಲ್ಲಿ ತಮ್ಮ ಜೀವದ ಹಂಗು ತೊರೆದು ಸರಕಾರದ ಆದೇಶ ಪಾಲಿಸುತ್ತಾ ಇದ್ದಾರೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಸರಕಾರದ ಆಡಳಿತ, ಸಾರ್ವಜನಿಕ ಬದುಕು ಹಾಗೂ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ತಾವು ಶಿಕ್ಷಕರ ಸಂಕಷ್ಠ, ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತಾ ಇನ್ನು ಮುಂದೆಯಾದರೂ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕೋರುತ್ತೇನೆ.

 ಹೊರಟ್ಟಿ ನೀಡಿರುವ ಸಲಹೆಗಳು

ಹೊರಟ್ಟಿ ನೀಡಿರುವ ಸಲಹೆಗಳು

ಶಿಕ್ಷಕರು ಸೇರಿ ಎಲ್ಲ ಸರಕಾರಿ ನೌಕರರು ಇಂತಹ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಕೆಲಸ ಮಾಡುವವರಿಗೆ ಸೂಕ್ತ ಆರೋಗ್ಯ ಸರಕ್ಷತೆ ಹಾಗೂ ಭದ್ರತೆ ವ್ಯವಸ್ಥೆ ನೀಡಬೇಕು.

ಪ್ರಸಕ್ತ ಕೋವಿಡ್ ಕೆಲಸ ನಿರ್ವಹಿಸುವವರಿಗೆ ಸೂಕ್ತ ಯಂತ್ರೋಪಕರಣಗಳು, ಪಿ.ಪಿ.ಇ. ಕಿಟ್, ಸ್ಯಾನಿಟೈಜರ್, ಮಾಸ್ಕ್, ಗ್ಲೌಸ್ ಮೊದಲಾದ ಪರಿಕರಗಳನ್ನು ಸರಕಾರ ಪೂರೈಸಬೇಕು.

ಜನಗಣತಿ, ಇತರೆ ಗಣತಿ ಹಾಗೂ ಚುನಾವಣೆ ಕಾರ್ಯ ಸೇರಿದಂತೆ ಎಲ್ಲ ಸರಕಾರಿ ಕೆಲಸಗಳು ಮತ್ತು ಯೋಜನೆಗಳಿಗೆ ಕೇವಲ ಶಿಕ್ಷಕರನ್ನಷ್ಟೇ ಗುರಿ ಮಾಡದೇ ಸರಕಾರದ ಇತರೆ ಇಲಾಖೆಗಳ ನೌಕರರನ್ನು ಸಹ ಸಮಪ್ರಮಾಣದಲ್ಲಿ ನಿಯೋಜಿಸಬೇಕು.


ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವ ಶಿಕ್ಷಕರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‍ಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸುವ ವ್ಯವಸ್ಥೆ ಮಾಡಬೇಕು.

ಈಗಾಗಲೇ ಕೋವಿಡ್ ಮಹಾಮಾರಿಗೆ ಬಲಿಯಾಗಿರುವ ಶಿಕ್ಷಕರ ಕುಟುಂಬಕ್ಕೆ ಸೂಕ್ತ ಆರ್ಥಿಕ ಪರಿಹಾರ ನೀಡಿ ಅವಲಂಬಿತರಲ್ಲಿ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು.

ಈಗಾಗಲೇ ಕೋವಿಡ್‍ಗೆ ಬಲಿಯಾಗಿರುವ ಶಿಕ್ಷಕರು, ಮೇಧಾವಿಗಳು, ಸಂಪನ್ಮೂಲ ವ್ಯಕ್ತಿಗಳಾಗಿದ್ದು ಅಂತಹ ಶಿಕ್ಷಕರ ಮನೆಗಳಿಗೆ ತೆರಳಿ ಅಧಿಕಾರಿಗಳು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು.

Recommended Video

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು: ಗೃಹ ಸಚಿವ ಬೊಮ್ಮಾಯಿ ಜನಮೆಚ್ಚುವ ಕೆಲಸ | Oneindia Kannada
ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ

ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ

ಇದೀಗ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು ಅಧಿಕಾರಿಗಳನ್ನು ಕೋವಿಡ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸರಕಾರ ಕೇವಲ ಕೆಲವು ಇಲಾಖೆಗಳ ಸಿಬ್ಬಂದಿಯನ್ನು ಮಾತ್ರ "ಕೋವಿಡ್ ವಾರಿಯರ್ಸ್" ಗಳೆಂದು ಪರಿಗಣಿಸಿದೆ. ಕೂಡಲೇ ಕೋವಿಡ್ ಸಂಬಂಧಿತ ಕಾರ್ಯದಲ್ಲಿ ತೊಡಗಿರುವ "ಎಲ್ಲಾ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್" ಗಳೆಂದು ಘೋಷಿಸಬೇಕು. ಅಲ್ಲದೇ ಕೂಡಲೇ ರಾಜ್ಯದ ಎಲ್ಲಾ ಶಿಕ್ಷಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆದ್ಯತೆಯ ಮೇರೆಗೆ "ಕೋವಿಡ್ ಲಸಿಕೆ" ಹಾಕಿಸಲು ಸರಕಾರ ಕ್ರಮ ವಹಿಸಬೇಕು ಎಂದು ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ. ಪತ್ರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ರವಾನಿಸಿದ್ದಾರೆ.

English summary
Karnataka Legislative council Chairman Basavaraj Horatti wrote letter to CM Yediyurappa demands to consider teachers as Corona Warriors and vaccinated first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X