ಕೊರೊನಾ ಹಾವಳಿ ಹೆಚ್ಚಳ: ಮಾಸ್ಕ್ ಎಲ್ಲರಿಗೂ ಕಡ್ಡಾಯ!
ನವದೆಹಲಿ: ದೇಶದಲ್ಲಿ ದಿಢೀರ್ ಕೊರೊನಾ ಹಾವಳಿ ಹೆಚ್ಚಾಗಿದೆ. ತಜ್ಞರ ಊಹೆಗೂ ಸಿಗದಷ್ಟು ವೇಗವಾಗಿ ಕೊರೊನಾ ಪ್ರಕರಣ ಏರಿಕೆ ಕಂಡಿದ್ದು, ಕಳೆದ 24 ಗಂಟೆಗಳಲ್ಲಿ 6,050 ಕೊರೊನಾ ಕೇಸ್ ಪತ್ತೆಯಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 28,303ಕ್ಕೆ ಏರಿಕೆಯಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಂದೇಶ ರವಾನಿಸಿದ್ದು, ಮತ್ತೊಂದು ಕಡೆ ದೇಶದಲ್ಲಿ ಒಂದೊಂದೇ ರಾಜ್ಯಗಳು ಮಾಸ್ಕ್ ಕಡ್ಡಾಯ ಮಾಡುತ್ತಿವೆ.
ಅಷ್ಟಕ್ಕೂ ನಿನ್ನೆ ಅಂದರೆ ಗುರುವಾರ 5,335 ಕೊರೊನಾ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದವು, ಇಂದು ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು 6,050 ಕೇಸ್ ಕನ್ಫರ್ಮ್ ಆಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗವಾಗಿ ಕೊರೊನಾ ಸೋಂಕು ಹರಡುವ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ನೇತೃತ್ವದಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಸಭೆ ನಡೆಸಲಾಗಿದೆ.

ರಾಜ್ಯಗಳಿಗೆ ಗಂಭೀರ ಸಂದೇಶ: ದೇಶದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದೇ ಬಿಟ್ಟಿದೆ ಅಂತಾ ನಿಟ್ಟುಸಿರು ಬಿಡುವುದರ ಒಳಗೆ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿದೆ. ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆದಿದ್ದರೂ ಕೊರೊನಾ ರೂಪಾಂತರಿಯಾಗಿ ಕಾಟ ಕೊಡುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ರಾಜ್ಯಗಳಿಗೆ ಗಂಭೀರ ಸಂದೇಶವನ್ನು ರವಾನಿಸಿದ್ದಾರೆ. ತುರ್ತು ಪರಿಸ್ಥಿತಿ ಎದುರಾದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮ ಹಾಗೂ ಮಾರ್ಗಸೂಚಿ ಬಗ್ಗೆ ಸಭೆಯಲ್ಲಿ ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ಪುದುಚೇರಿಯಲ್ಲಿ ಮಾಸ್ಕ್ ಕಡ್ಡಾಯ: ಕೊರೊನಾ ಹಾವಳಿ ಬಗ್ಗೆ ಕೇಂದ್ರ ಸರ್ಕಾರ ಸಭೆ ನಡೆಸಿ ಚರ್ಚೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದೆ. ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಪುದುಚೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ. ರಸ್ತೆ, ಥಿಯೇಟರ್, ಕಚೇರಿಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ನೌಕರರಿಂದ ಹಿಡಿದು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡುವಂತೆ ಜಿಲ್ಲಾಧಿಕಾರಿ ಇ. ವಲ್ಲವನ್ ಆದೇಶಿಸಿದ್ದಾರೆ.

ವ್ಯಾಕ್ಸಿನ್ ಬೇಕೆ ಬೇಕು: ಒಂದು ಕಡೆ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ಕೊರೊನಾ ಲಸಿಕೆಗೂ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜನ ಮುಂದೆಬರುತ್ತಿರುವ ಕಾರಣ ಲಸಿಕೆಗೆ ಕೊರತೆ ಉಂಟಾಗುತ್ತಿದೆ. ಇನ್ನು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬಿಹಾರದಲ್ಲಿ ವ್ಯಾಕ್ಸಿನ್ ಕೊರತೆ ಕಾಡುತ್ತಿದ್ದು, ನಮಗೆ ಬೇಕಾದಷ್ಟು ಲಸಿಕೆಯನ್ನು ತಕ್ಷಣ ಪೂರೈಕೆ ಮಾಡಿ ಅಂತಿದ್ದಾರೆ ನಿತೀಶ್ ಕುಮಾರ್.
ಹಾಗೇ ದೇಶದಲ್ಲೇ ಕೊರೊನಾ ಪರೀಕ್ಷೆ ನಡೆಸಿರುವ ರಾಜ್ಯಗಳ ಪೈಕಿ ಬಿಹಾರ ಮುಂಚೂಣಿಯಲ್ಲಿದೆ. 1 ಮಿಲಿಯನ್ ಜನಸಂಖ್ಯೆಗೆ 6 ಲಕ್ಷದಂತೆ ಕೊರೊನಾ ಪರೀಕ್ಷೆ ಮಾಡಿದ್ದೇವೆ. ಕಠಿಣ ಪರಿಸ್ಥಿತಿ ಎದುರಾದರೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೆ ನಮಗೆ ಈಗ ವ್ಯಾಕ್ಸಿನ್ ಅಗತ್ಯತೆ ತುಂಬಾ ಇದ್ದು, ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಪೂರೈಸಲೇಬೇಕು ಎಂದು ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.
ಒಟ್ಟಾರೆ ದೇಶದಲ್ಲಿ ಮತ್ತೊಮ್ಮೆ ಕೊರೊನಾ ಕರಿನೆರಳು ಆವರಿಸಿದೆ. ಕೇಂದ್ರ ಸರ್ಕಾರ ಈಗಾಗಲೇ ದೇಶದ ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ ನಡೆಸಲು ಸೂಚಿಸಿದೆ. ಇನ್ನೊಂದೆಡೆ ಅಗತ್ಯಬಿದ್ದರೆ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಗಳಿಗೂ ಈ ಬಗ್ಗೆ ಸೂಕ್ತ ಸಂದೇಶ ರವಾನಿಸಲಾಗಿದ್ದು, ಆಕ್ಸಿಜೆನ್ ಪೂರೈಕೆಗೂ ವ್ಯವಸ್ಥೆ ಸಜ್ಜಾಗಿದೆ.












Click it and Unblock the Notifications