ನಾನೂ ನಿರ್ಮಾಪಕನಾಗಿ ಸೋತವನು, ಕಾಳಜಿಯಿಂದ ಆ ಮಾತು ಹೇಳಿದೆ: ಕ್ಷಮೆ ಕೇಳಿದ ನೀನಾಸಂ ಸತೀಶ್
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ನೀನಾಸಂ ಸತೀಶ್ (Ninasam Satish) ಇತ್ತೀಚೆಗೆ ಸಿನಿಮಾ ನಿರ್ಮಾಪಕರ ಕುರಿತು ನೀಡಿದ್ದ ಹೇಳಿಕೆಯೊಂದು ಸ್ಯಾಂಡಲ್‌ವುಡ್ ಅಂಗಳದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಮುಂಬರುವ 'ಅಯೋಗ್ಯ 2' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಆಡಿದ್ದ ಮಾತುಗಳು ಚಲನಚಿತ್ರ ನಿರ್ಮಾಪಕರ ಸಂಘ ಸೇರಿದಂತೆ ಚಿತ್ರರಂಗದ ಗಣ್ಯರ ಕೆಂಗಣ್ಣಿಗೆ ಗುರಿಯಾಗಿತ್ತು. ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತ ನಟ ಸತೀಶ್, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರಲ್ಲದೆ, ಬಹಿರಂಗವಾಗಿ ಕ್ಷಮೆಯೂ ಕೇಳಿದ್ದಾರೆ.
ವಿವಾದಕ್ಕೆ ಕಾರಣವಾದ ಆ ಮಾತುಗಳೇನು?
'ಅಯೋಗ್ಯ 2' ಚಿತ್ರದ ಪ್ರಚಾರದ ವೇಳೆ ಮಾತನಾಡಿದ್ದ ಸತೀಶ್, "ಒಂದು ಸಿನಿಮಾ ಸೋಲುತ್ತದೆ ಎಂದು ಮೊದಲೇ ಗೊತ್ತಿದ್ದ ಮೇಲೂ ಅದನ್ನು ಯಾಕೆ ನಿರ್ಮಾಣ ಮಾಡಬೇಕು? ಚಿತ್ರರಂಗಕ್ಕೆ ಬರುವ ನಿರ್ಮಾಪಕರಿಗೆ ಶಿಕ್ಷಣದ (ಎಜುಕೇಷನ್) ಅವಶ್ಯಕತೆ ಇದೆ" ಎಂದು ಹೇಳಿದ್ದರು. ಈ ಮಾತುಗಳು ಇಡೀ ನಿರ್ಮಾಪಕರ ವಲಯವನ್ನು ಕೆರಳಿಸಿತ್ತು. ಹೂಡಿಕೆ ಮಾಡುವ ನಿರ್ಮಾಪಕರನ್ನೇ ನಟ ನಿಂದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ವಿಡಿಯೋದಲ್ಲಿ ಸತೀಶ್ ನೀಡಿದ ಸ್ಪಷ್ಟನೆ ಏನು?
ತಮ್ಮ ಹೇಳಿಕೆ ತಪ್ಪಾಗಿ ಬಿಂಬಿತವಾಗುತ್ತಿದ್ದಂತೆಯೇ ವಿಡಿಯೋ ಬಿಡುಗಡೆ ಮಾಡಿದ ನೀನಾಸಂ ಸತೀಶ್, ತಮ್ಮ ಮಾತಿನ ಹಿಂದಿನ ನಿಖರ ಉದ್ದೇಶವನ್ನು ವಿವರಿಸಿದ್ದಾರೆ. "ನಾನು ಪತ್ರಿಕಾಗೋಷ್ಠಿಯಲ್ಲಿ 'ಎಜುಕೇಷನ್' ಎಂಬ ಪದವನ್ನು ಬಳಸಿದ್ದು ನಿಜ. ಆದರೆ, ಅದರ ಅರ್ಥ ಶಾಲೆ-ಕಾಲೇಜಿಗೆ ಹೋಗಿ ಓದುವುದಲ್ಲ. ಬದಲಿಗೆ ಚಿತ್ರರಂಗಕ್ಕೆ ಹೊಸದಾಗಿ ಬರುವ ನಿರ್ಮಾಪಕರಿಗೆ ಸಿನಿಮಾ ನಿರ್ಮಾಣದ ಪ್ರಕ್ರಿಯೆ ಮತ್ತು ಅದರ ತಾಂತ್ರಿಕತೆಯ ಬಗ್ಗೆ ಇರಬೇಕಾದ ಜ್ಞಾನದ ಕುರಿತು ನಾನು ಹೇಳಿದ್ದೆ ಅಷ್ಟೇ" ಎಂದು ಸ್ಪಷ್ಟಪಡಿಸಿದ್ದಾರೆ.
"ಸಿನಿಮಾ ಮಾಡುವಾಗ ಯಾವ ಇಲಾಖೆಗೆ ಎಷ್ಟು ಹಣ ಹೋಗುತ್ತಿದೆ, ಯಾವ ವಿಭಾಗದಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬ ಕನಿಷ್ಠ ತಿಳಿವಳಿಕೆ ಇದ್ದರೆ ಒಳ್ಳೆಯದು ಎಂಬುದು ನನ್ನ ಆಶಯವಾಗಿತ್ತು. ನಾನು ಕೂಡ ಈ ಹಿಂದೆ ನಿರ್ಮಾಪಕನಾಗಿ ಸೋತು ಕೈಸುಟ್ಟುಕೊಂಡವನು. ಆ ಸೋಲಿನಿಂದ ಪಾಠ ಕಲಿಯಲು ನನಗೇ ಸಾಕಷ್ಟು ಸಮಯ ಬೇಕಾಯಿತು. ಹೊಸ ನಿರ್ಮಾಪಕರು ಗಾಂಧಿನಗರಕ್ಕೆ ಬಂದು ಹಣ ಕಳೆದುಕೊಂಡು ನಷ್ಟ ಅನುಭವಿಸಬಾರದು ಎಂಬ ಕಾಳಜಿಯಿಂದಷ್ಟೇ ನಾನು ಆ ಮಾತು ಹೇಳಿದ್ದೆ ಹೊರತು ಯಾರನ್ನೂ ವೈಯಕ್ತಿಕವಾಗಿ ನಿಂದಿಸುವ ಉದ್ದೇಶ ನನಗಿರಲಿಲ್ಲ" ಎಂದಿದ್ದಾರೆ.
ನಿರ್ಮಾಪಕರ ಸಂಘಕ್ಕೆ ಕ್ಷಮೆಯಾಚನೆ
"ಕನ್ನಡ ಚಿತ್ರರಂಗದಲ್ಲಿ ಲಕ್ಷಾಂತರ ಜನರ ಬದುಕು ಅಡಗಿದೆ. ನಿರ್ಮಾಪಕರು ಇದ್ದರೆ ಮಾತ್ರ ಚಿತ್ರರಂಗ ಇರಲು ಸಾಧ್ಯ ಮತ್ತು ಉದ್ಯಮ ಬೆಳೆಯಲು ಸಾಧ್ಯ. ಚಿತ್ರರಂಗವನ್ನು ಕಟ್ಟುವಲ್ಲಿ ಪ್ರತಿಯೊಬ್ಬ ನಿರ್ಮಾಪಕರ ಕೊಡುಗೆಯೂ ದೊಡ್ಡದಿದೆ. ನನ್ನ ಹೇಳಿಕೆಯಿಂದ ಚಿತ್ರರಂಗದ ಹಿರಿಯ ನಿರ್ಮಾಪಕರಿಗೆ, ಅದರಲ್ಲೂ ವಿಶೇಷವಾಗಿ ನಿರ್ಮಾಪಕರ ಸಂಘದ ಪದಾಧಿಕಾರಿಗಳಿಗೆ ನೋವಾಗಿದ್ದರೆ ನಾನು ಮುಕ್ತವಾಗಿ ಕ್ಷಮೆ ಯಾಚಿಸುತ್ತೇನೆ. ಯಾರನ್ನೋ ನೋಯಿಸಿ ಖುಷಿಪಡುವ ವ್ಯಕ್ತಿತ್ವ ನನ್ನದಲ್ಲ, ನಾನು ಕೂಡ ಇನ್ನೂ ಕಲಿಯುವ ಹಂತದಲ್ಲೇ ಇದ್ದೇನೆ" ಎಂದು ಸತೀಶ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದರಿಂದ ಮತ್ತು ಟ್ರೋಲ್ ಮಾಡುವುದರಿಂದ ಚಿತ್ರತಂಡಗಳು ಧೃತಿಗೆಡುತ್ತವೆ. ಇದೇ ಕಾರಣಕ್ಕೆ ನಾನು ಪತ್ರಿಕಾಗೋಷ್ಠಿಯಲ್ಲಿ ಧ್ವನಿ ಎತ್ತಿದ್ದೆ. ಸದ್ಯದಲ್ಲೇ ನಮ್ಮ 'ಅಯೋಗ್ಯ 2' ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ನಮಗೆ ಇಡೀ ಚಿತ್ರರಂಗ ಹಾಗೂ ನಿರ್ಮಾಪಕರ ಬೆಂಬಲ ಮತ್ತು ಆಶೀರ್ವಾದ ಬೇಕು ಎಂದು ಸತೀಶ್ ನೀನಾಸಂ ಮನವಿ ಮಾಡಿಕೊಂಡಿದ್ದಾರೆ. ಸತೀಶ್ ಅವರ ಈ ನಡೆ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ವಿವಾದ ತಿಳಿಯಾಗುವಂತೆ ಮಾಡಿದೆ.













Click it and Unblock the Notifications