ಮಾಜಿ ಸಿಎಂ ಸೊಸೆಯಾಗಲಿದ್ದಾರಾ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್; ವೈರಲ್ ಪೋಸ್ಟ್‌ನಲ್ಲಿರೋ ಶಿಖರ್ ಪಹರಿಯಾ ಯಾರು?
ಬಹುಭಾಷೆಗಳಲ್ಲಿ ಮಿಂಚಿದ್ದ ದಿವಂಗತ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ದಂಪತಿಯ ಹಿರಿಯ ಪುತ್ರಿ, ಬಾಲಿವುಡ್ ಸ್ಟಾರ್ ನಟಿ ಜಾನ್ವಿ ಕಪೂರ್ ಸದ್ಯ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ಸಮಯದಿಂದ ಉದ್ಯಮಿ ಶಿಖರ್ ಪಹರಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಜಾನ್ವಿ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿ ಜೋರಾಗಿ ಹರಡಿದೆ. ಇದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸದೊಂದು ಫೋಟೋ ಈಗ ಇವರಿಬ್ಬರ ನಡುವಿನ ಸಂಬಂಧದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.
ವೈರಲ್ ಆದ ಆ ಪೋಸ್ಟ್‌ನಲ್ಲಿ ಏನಿದೆ?
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಜಾನ್ವಿ ಕಪೂರ್ ಅವರ ಫೋಟೋವೊಂದು ವೈರಲ್ ಆಗಿದ್ದು, ಅದರಲ್ಲಿ ಬರೆದಿರುವ ಸಾಲುಗಳು ನೆಟ್ಟಿಗರ ಗಮನ ಸೆಳೆದಿವೆ. "ಒಂದು ವೇಳೆ ನಾನು ಎಲ್ಲಾದರೂ ಕಳೆದುಹೋದರೆ, ದಯವಿಟ್ಟು ನನ್ನನ್ನು ಶಿಖರ್ ಪಹಾಡಿಯಾ ಅವರ ಬಳಿಗೆ ತಲುಪಿಸಿ" ಎಂಬ ರೊಮ್ಯಾಂಟಿಕ್ ಹಾಗೂ ತಮಾಷೆಯ ಸಾಲುಗಳು ಆ ಫೋಟೋದಲ್ಲಿದೆ. ಸದಾ ಪ್ರೀತಿಯನ್ನು ಸಾರುವ ಜಾನ್ವಿ ಅವರ ಈ ಕ್ಯೂಟ್ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದು, "ಇವರಿಬ್ಬರ ಮದುವೆ ಫಿಕ್ಸ್ ಆಗಿದೆ, ಶೀಘ್ರದಲ್ಲೇ ಶುಭ ಸಮಾಚಾರ ಸಿಗಲಿದೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ದೊಡ್ಡ ಚಲನಚಿತ್ರ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಜಾನ್ವಿ ಕಪೂರ್, ತಮ್ಮ ಕೊರಳಿನಲ್ಲಿ ಶಿಖರ್ ಅವರ ಮುದ್ದಿನ ಹೆಸರಾದ 'ಶೀಖು' (Shikhu) ಎಂದು ಬರೆದಿರುವ ಪೆಂಡೆಂಟ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು.

ಯಾರೀ ಶಿಖರ್ ಪಹರಿಯಾ?
ಜಾನ್ವಿ ಕಪೂರ್ ಮನಗೆದ್ದಿರುವ ಶಿಖರ್ ಪಹಾಡಿಯಾ ಯಾರು ಎಂಬ ಕುತೂಹಲ ಹಲವರಲ್ಲಿದೆ. ಶಿಖರ್ ಪಹಾಡಿಯಾ ಭಾರತದ ಯಶಸ್ವಿ ಉದ್ಯಮಿ ಮತ್ತು ಪ್ರತಿಭಾವಂತ ಪೋಲೋ (Polo) ಆಟಗಾರ. 1997ರಲ್ಲಿ ಮುಂಬೈನಲ್ಲಿ ಜನಿಸಿದ ಇವರು, ದೊಡ್ಡ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಭಾರತದ ಮಾಜಿ ಕೇಂದ್ರ ಗೃಹ ಸಚಿವ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂದೆ ಅವರ ಮೊಮ್ಮಗ. ಇವರ ತಂದೆ ಸಂಜಯ್ ಪಹರಿಯಾ ಮತ್ತು ತಾಯಿ ಸ್ಮೃತಿ ಶಿಂದೆ. ಶಿಖರ್ ಅವರ ಸಹೋದರ ವೀರ್ ಪಹರಿಯಾ ಕೂಡ ಬಾಲಿವುಡ್‌ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ.
ಅವನೇ ನನ್ನ ಸಪೋರ್ಟ್ ಎಂದಿದ್ದ ಜಾನ್ವಿ
ಇತ್ತೀಚಿನ ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್ ತಮ್ಮ ಮತ್ತು ಶಿಖರ್ ನಡುವಿನ ಬಾಂಧವ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಶಿಖರ್ ಅವರನ್ನು ತಮ್ಮ "ಸಪೋರ್ಟ್ ಸಿಸ್ಟಮ್" ಎಂದು ಕರೆದಿದ್ದ ನಟಿ, "ಅವನ ಜೊತೆ ಇದ್ದಾಗ ನನಗೆ ಯಾವುದೇ ಭಯ ಇರುವುದಿಲ್ಲ. ನನ್ನ ಜೀವನದ ಅತ್ಯಂತ ಆಪ್ತ ವ್ಯಕ್ತಿಗಳಲ್ಲಿ ಅವನು ಒಬ್ಬ" ಎಂದು ಹೇಳಿಕೊಂಡಿದ್ದರು. ಇವರಿಬ್ಬರ ಸ್ನೇಹ ಕಾಲೇಜು ದಿನಗಳಿಂದಲೇ ಆರಂಭವಾಗಿದ್ದು, ನಂತರ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ.
1997ರಲ್ಲಿ ಜನಿಸಿದ ಜಾನ್ವಿ ಕಪೂರ್, ಮುಂಬೈ ಹಾಗೂ ಅಮೆರಿಕಾದಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ. 2018ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ 'ಧಡಕ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಇವರು, ಆನಂತರ 'ಗುಂಜನ್ ಸಕ್ಸೇನಾ: ದ ಕಾರ್ಗಿಲ್ ಗರ್ಲ್', 'ರೂಹಿ', 'ಮಿಲಿ', 'ಬವಾಲ್' ನಂತಹ ವಿಭಿನ್ನ ಚಿತ್ರಗಳಲ್ಲಿ ನಟಿಸಿ ಯುವ ತಾರೆಯಾಗಿ ಹೊರಹೊಮ್ಮಿದ್ದಾರೆ. ಸದ್ಯ ಇವರಿಬ್ಬರ ಮದುವೆಯ ಸುದ್ದಿಗಳು ಜೋರಾಗಿ ಕೇಳಿಬರುತ್ತಿದ್ದರೂ, ಜಾನ್ವಿ ಕಪೂರ್ ಆಗಲಿ ಅಥವಾ ಶಿಖರ್ ಪಹರಿಯಾ ಕುಟುಂಬವಾಗಲಿ ಮದುವೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.













Click it and Unblock the Notifications