ಬೆಂಗಳೂರು Vs ಹೈದರಾಬಾದ್: ಒಂದೂರು ನರಕವಾದ್ರೆ, ಮತ್ತೊಂದೂರು ಸ್ವರ್ಗ ಎಂದು ಹೋಲಿಕೆ ಮಾಡಿದ ಯುವಕ
ಭಾರತದ ಎರಡು ಪ್ರಮುಖ ಐಟಿ ಹಬ್‌ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ಯಾವ ಸಿಟಿ ಬೆಸ್ಟ್ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಇತ್ತೀಚೆಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಶಿಫ್ಟ್ ಆದ ಯುವಕನೊಬ್ಬ, ಕಳೆದ 5 ತಿಂಗಳ ತನ್ನ ಅನುಭವವನ್ನು ಆಧಾರವಾಗಿಟ್ಟುಕೊಂಡು ಎರಡೂ ನಗರಗಳ ನಡುವಿನ ವ್ಯತ್ಯಾಸಗಳನ್ನು ಸೋಷಿಯಲ್ ಮೀಡಿಯಾ ವೇದಿಕೆಯಾದ ರೆಡ್ಡಿಟ್‌ನಲ್ಲಿ (Reddit) ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ದೊಡ್ಡ ಚರ್ಚೆಗೂ ಕಾರಣವಾಗಿದೆ.
ಯುವಕನು ವಿದ್ಯುತ್, ರಸ್ತೆ, ಹವಾಮಾನ, ಆಹಾರ, ಟ್ರಾಫಿಕ್ ಹಾಗೂ ಜನರ ಸ್ವಭಾವದ ಆಧಾರದ ಮೇಲೆ ಮಾಡಿರುವ ಎರಡೂ ನಗರವನ್ನು ಹೋಲಿಕೆ ಮಾಡಿ ಯಾವುದು? ಯಾವುದರಲ್ಲಿ ಬೆಸ್ಟ್ ಎಂದು ತಿಳಿಸಿದ್ದಾನೆ.
1. ಹವಾಮಾನ ಮತ್ತು ಪವರ್ ಕಟ್
ಹೈದರಾಬಾದ್‌ನ ಬೇಸಿಗೆಯನ್ನು ತೀವ್ರವಾಗಿ ಟೀಕಿಸಿರುವ ಯುವಕ, "ಇಲ್ಲಿಗೆ ಬಂದ ಮೇಲೆಯೇ ವಿದ್ಯುತ್ ಇಲ್ಲದಿದ್ದರೆ ಜೀವನ ಎಷ್ಟು ನರಕವಾಗುತ್ತದೆ ಎಂಬುದು ನನಗೆ ಅರ್ಥವಾಯಿತು" ಎಂದಿದ್ದಾನೆ. ಬೇಸಿಗೆಯಲ್ಲಿ ಹೈದರಾಬಾದ್‌ನಲ್ಲಿ ವಿಪರೀತ ಪವರ್ ಕಟ್ ಇರುತ್ತದೆ. ಎಸಿ ಇಲ್ಲದಿದ್ದರೆ ಕೋಣೆಯಲ್ಲಿ ಇರಲು ಸಾಧ್ಯವೇ ಇಲ್ಲ, ಹೀಗೇ ಮುಂದುವರಿದರೆ ತನಗೆ ಹೀಟ್‌ಸ್ಟ್ರೋಕ್ ಆಗಿ ಸತ್ತುಹೋಗಬಹುದು ಎಂದೆನಿಸಿತ್ತು ಎಂದು ಬರೆದುಕೊಂಡಿದ್ದಾನೆ. ಈ ವಿಚಾರದಲ್ಲಿ ಬೆಂಗಳೂರಿನ ಹವಾಮಾನ ಹೈದರಾಬಾದ್‌ಗಿಂತ ಸಾಟಿಯಿಲ್ಲದಷ್ಟು ಆಹ್ಲಾದಕರ ಮತ್ತು ಪ್ರಶಾಂತವಾಗಿದೆ ಎಂದು ಆತ ಹೇಳಿದ್ದಾನೆ.

2. ರಸ್ತೆಗಳು ಮತ್ತು ಮೂಲಸೌಕರ್ಯ
ಇನ್ನು ರಸ್ತೆಗಳ ವಿಚಾರಕ್ಕೆ ಬಂದರೆ, "ಹೈದರಾಬಾದ್ ರಸ್ತೆಗಳಲ್ಲಿ ಬೆಂಗಳೂರಿನಂತೆ ಗುಂಡಿಗಳಿಲ್ಲ. ಆದರೆ, ಇಲ್ಲಿ ಸರಿಯಾಗಿ ಮುಚ್ಚದ ಮ್ಯಾನ್‌ಹೋಲ್‌ಗಳ (Manholes) ಸಮಸ್ಯೆ ಇದೆ. ರಸ್ತೆ ನೋಡದೆ ಗಾಡಿ ಓಡಿಸಿದರೆ ನೇರ ಆಸ್ಪತ್ರೆ ಸೇರಬೇಕಾಗುತ್ತದೆ" ಎಂದೂ ಎಚ್ಚರಿಸಿದ್ದಾನೆ. ಬೆಂಗಳೂರಿನಲ್ಲಿ ಗುಂಡಿಗಳಿದ್ದರೂ ಅವು ಪ್ರಾಣಾಪಾಯ ತರುವ ಮಟ್ಟಿಗೆ ಇರುವುದಿಲ್ಲ ಎಂದು ಆತ ಅಭಿಪ್ರಾಯಪಟ್ಟಿದ್ದಾನೆ.
3. ಆಹಾರ ಮತ್ತು ಭಾಷೆ
ಆಹಾರದ ವಿಚಾರದಲ್ಲಿ ಹೈದರಾಬಾದ್‌ಗೆ ಯುವಕ ಫುಲ್ ಮಾರ್ಕ್ಸ್ ನೀಡಿದ್ದಾನೆ. ಊಟದ ವಿಷಯದಲ್ಲಿ ಬೆಂಗಳೂರಿಗೂ ಹೈದರಾಬಾದ್‌ಗೂ ಹೋಲಿಕೆಯೇ ಇಲ್ಲ. ಇಲ್ಲಿನ ಆಹಾರ ಅತ್ಯುತ್ತಮವಾಗಿದೆ. ಆದರೆ, ಇಲ್ಲಿನ ಖಾರ ಸ್ವಲ್ಪ ಜಾಸ್ತಿ ಎಂದು ಹೇಳಿದ್ದಾನೆ. ಇನ್ನು ಹೈದರಾಬಾದ್‌ನ ಜನರು ತುಂಬಾ ಸ್ನೇಹಪರರಾಗಿದ್ದಾರೆ. ಇಲ್ಲಿ ಹಿಂದಿ ಭಾಷೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ, ಆದರೆ ಬೆಂಗಳೂರಿಗೆ ಹೋಲಿಸಿದರೆ ಇಲ್ಲಿ ಇಂಗ್ಲಿಷ್ ಬಳಸುವವರ ಸಂಖ್ಯೆ ಕಡಿಮೆ ಎಂದಿದ್ದಾನೆ.
Hyderabad vs bengaluru
byu/ArticleBusiness6245 inhyderabad
4. ಟ್ರಾಫಿಕ್ ಮತ್ತು ಐಷಾರಾಮಿ ಜೀವನ
ಬೆಂಗಳೂರಿಗೆ ಹೋಲಿಸಿದರೆ ಹೈದರಾಬಾದ್‌ನಲ್ಲಿ ಟ್ರಾಫಿಕ್ ನಿರ್ವಹಣೆ ಸಾಕಷ್ಟು ಉತ್ತಮವಾಗಿದೆ. ಆದರೆ ಪೀಕ್ ಅವರ್ಸ್‌ನಲ್ಲಿ ಇಲ್ಲೂ ಪ್ರಯಾಣ ಸುದೀರ್ಘವಾಗಿರುತ್ತದೆ. ವಿಶೇಷವೆಂದರೆ, ಬೆಂಗಳೂರಿಗಿಂತ ಹೈದರಾಬಾದ್‌ನಲ್ಲಿ ಅತಿ ಹೆಚ್ಚು ಸೂಪರ್ ಕಾರ್ಸ್ ಹಾಗೂ ಐಷಾರಾಮಿ ಕಾರುಗಳು ರಸ್ತೆಯಲ್ಲಿ ಕಾಣಿಸುತ್ತವೆ. ಇಲ್ಲಿನ ಜನ ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಿದ್ದಾರೆ ಎಂದು ಆತ ಬರೆದಿದ್ದಾನೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹೈದರಾಬಾದ್‌ನ ಹಳೆಯ ನಿವಾಸಿಯೊಬ್ಬರು, "ನೀವು ತಪ್ಪು ಸಮಯದಲ್ಲಿ ಹೈದರಾಬಾದ್‌ಗೆ ಬಂದಿದ್ದೀರಿ. ಕಳೆದ 30 ವರ್ಷಗಳಲ್ಲಿ ನಾನು ಇಂತಹ ಕೆಟ್ಟ ಬೇಸಿಗೆಯನ್ನು ನೋಡಿರಲಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ಎರಡೂ ನಗರಗಳ ಒಟ್ಟಾರೆ ಅನುಭವವು ನೀವು ಆಯಾ ನಗರಗಳಲ್ಲಿ ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ" ಎಂದಿದ್ದಾರೆ. "ಭಾರತದ ಎಲ್ಲ ಮೆಟ್ರೋ ನಗರಗಳ ಜೀವನಮಟ್ಟವೂ ಹದಗೆಡುತ್ತಿದೆ. ಆದರೆ ಹೈದರಾಬಾದ್‌ನ ಜನರು ತುಂಬಾ ಒಳ್ಳೆಯವರಾಗಿರುವುದರಿಂದ ಇದು ವಾಸಿಸಲು ಬೆಸ್ಟ್ ಜಾಗ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬೆಂಗಳೂರು ಎಷ್ಟೋ ವಿಚಾರದಲ್ಲಿ ಬೆಸ್ಟ್ ಹಾಗೂ ಫಸ್ಟ್ ಎಂದಿದ್ದಾರೆ.












Click it and Unblock the Notifications