ವಿದೇಶದಿಂದಲೇ ಮಾಸ್ಟರ್‌ಪ್ಲ್ಯಾನ್: ಸಿಸಿಟಿವಿ ಮೂಲಕ ಪರ ಸ್ತ್ರೀ ಜೊತೆಗಿದ್ದ ಪೊಲೀಸ್ ಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ
ಸಾಮಾನ್ಯವಾಗಿ ಕಳ್ಳರನ್ನು ಹಿಡಿಯುವುದಕ್ಕೆ ಪೊಲೀಸರು ಮಾಸ್ಟರ್ ಪ್ಲ್ಯಾನ್ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಪೊಲೀಸ್ ಪತಿಯ ಕಳ್ಳಾಟವನ್ನು ಪತ್ತೆ ಮಾಡುವುದಕ್ಕೆ ಪೊಲೀಸ್ ಪತ್ನಿಯೊಬ್ಬರು ಮಾಡಿದ ಮಾಸ್ಟರ್ ಪ್ಲ್ಯಾನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದೇಶದಲ್ಲಿದ್ದ ಪತ್ನಿ ಸಿಸಿಟಿವಿ ಮೂಲಕ ಪತಿಯ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದರು. ತನ್ನ ಸ್ನೇಹಿತೆಯೊಂದಿಗೆ ಸೇರಿ ರೆಡ್‌ಹ್ಯಾಂಡ್ ಆಗಿ ಹಿಡಿದಿರುವ ರೋಚಕ ಘಟನೆ ಇದೀಗ ಸಂಚಲನ ಸೃಷ್ಟಿ ಮಾಡಿದೆ.
ಚೆನ್ನೈನ ಮಾಂಬಲಂ ಸಂಚಾರ ವಿಭಾಗದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರುಲ್ ಪ್ರಸಾದ್ ಅವರು ಕಡಲೂರು ಮೂಲದ ಅಭಿನಯ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅಭಿನಯ ಎನ್ನುವವರಿಗೆ ವಿದೇಶದಲ್ಲಿ ಉದ್ಯೋಗ ಸಿಕ್ಕಿತ್ತು. ವಿದೇಶದಲ್ಲಿ ಉದ್ಯೋಗ ಸಿಕ್ಕ ಕಾರಣಕ್ಕಾಗಿ ಅವರು ವಿದೇಶದಲ್ಲೇ ನೆಲೆಸಿ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರುಲ್ ಪ್ರಸಾದ್ ಅವರು ಚೆನ್ನೈನ ರಾಮಾಪುರಂನಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಈ ಮಧ್ಯೆ, ಅರುಲ್ ಪ್ರಸಾದ್ ಅವರ ಮನೆಗೆ ಮಹಿಳೆಯೊಬ್ಬರು ಆಗಾಗ್ಗೆ ಬರುತ್ತಿದ್ದಾರೆ ಎಂದು ನೆರೆಹೊರೆಯವರು ಅಭಿನಯ ಅವರಿಗೆ ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಅಭಿನಯ, ಕೆಲ ತಿಂಗಳ ಹಿಂದೆ ಚೆನ್ನೈಗೆ ಬಂದಾಗ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ತಮ್ಮ ಮೊಬೈಲ್ ಫೋನ್‌ಗೆ ಕನೆಕ್ಟ್ ಮಾಡಿಕೊಂಡಿದ್ದರು. ಆದರೆ ಈ ವಿಚಾರವನ್ನು ತಮ್ಮ ಪತ್ನಿಗೆ ಹೇಳಿರಲಿಲ್ಲ. ವಿದೇಶದಲ್ಲಿದ್ದರೂ ಮನೆಯ ಚಟುವಟಿಕೆಗಳನ್ನು ಗಮನಿಸಲು ಅಭಿನಯ ಅವರು ಆರಂಭಿಸಿದ್ದರು. ನಿರಂತರವಾಗಿ ಕ್ಯಾಮೆರಾದಲ್ಲಿ ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳನ್ನು ವೀಕ್ಷಿಸುತ್ತಿದ್ದರು. ಪತಿಯ ನಡವಳಿಕೆಯಲ್ಲಿ ಅನುಮಾನ ಮೂಡಿದ್ದು, ಕೊನೆಯದಾಗಿ ಸರಿಯಾಗಿ ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕೊನೆಗೂ ಪೊಲೀಸಪ್ಪನ ಕಳ್ಳಾಟ ಬಯಲಾಗಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಅರುಲ್ ಪ್ರಸಾದ್ ಅವರು ಮಹಿಳೆಯೊಬ್ಬರನ್ನು ಮನೆಗೆ ಕರೆತರುತ್ತಿರುವುದು ಪದೇ ಪದೇ ಕಾಣಿಸಿಕೊಂಡಿದೆ. ಇದರಿಂದ ಸತ್ಯ ತಿಳಿದುಕೊಳ್ಳಲು ನಿರ್ಧರಿಸಿದ ಅಭಿನಯ, ಮೂರು ದಿನಗಳ ಹಿಂದೆ ವಿದೇಶದಿಂದ ಚೆನ್ನೈಗೆ ಆಗಮಿಸಿದ್ದು, ಪತಿಗೆ ತಿಳಿಯದಂತೆ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿಂದಲೇ ಮೊಬೈಲ್ ಮೂಲಕ ಸಿಸಿಟಿವಿ ದೃಶ್ಯಗಳನ್ನು ನಿರಂತರವಾಗಿ ವೀಕ್ಷಿಸುತ್ತಿದ್ದರು. ಅರುಲ್ ಪ್ರಸಾದ್ ಅವರು ಜನನಿ ಎಂಬ ಮಹಿಳೆಯನ್ನು ಮನೆಗೆ ಕರೆತಂದಿರುವುದು ದೃಶ್ಯಗಳಲ್ಲಿ ದಾಖಲಾಗಿತ್ತು. ತಕ್ಷಣ ಮನೆಗೆ ತೆರಳಿದ ಅಭಿನಯ, ಪತಿಯನ್ನು ಮಹಿಳಾ ಸ್ನೇಹಿತೆಯೊಂದಿಗೆ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ ಎನ್ನಲಾಗಿದೆ.
ಇದರಿಂದ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಬಳಿಕ ಕೋಪಗೊಂಡ ಅಭಿನಯ ಅವರು ಜನನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಗೊಂಡ ಜನನಿ, ವಲಸರವಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದೇಶದಲ್ಲಿದ್ದ ಪತ್ನಿಯೊಬ್ಬರು ಸಿಸಿಟಿವಿ ಕ್ಯಾಮೆರಾ ಮೂಲಕ ಪತಿಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟು, ಇದ್ದಕ್ಕಿದ್ದಂತೆ ಚೆನ್ನೈಗೆ ಬಂದು ಪತಿಯನ್ನು ಮಹಿಳಾ ಸ್ನೇಹಿತೆಯೊಂದಿಗೆ ರೆಡ್‌ಹ್ಯಾಂಡ್ ಆಗಿ ಹಿಡಿದ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications