ಕೊರೊನಾ ಹೆಚ್ಚಳ: ಶೀಘ್ರದಲ್ಲೇ ಶಾಲೆಗಳಿಗೆ ಹೊಸ ನಿಯಮ!
ನವದೆಹಲಿ: ದೇಶಾದ್ಯಂತ ಕೊರೊನಾ (Covid) ಕೇಸ್ ಸುನಾಮಿಯಂತೆ ಅಪ್ಪಳಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 10,158 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 44,998ಕ್ಕೆ ತಲುಪಿದ್ದು, ಶಾಲಾ-ಕಾಲೇಜುಗಳಿಗೆ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ. ಇದು ಕೊರೊನಾ (Corona) 4ನೇ ಅಲೆ ಭೀತಿಯನ್ನ ಮತ್ತಷ್ಟು ಹೆಚ್ಚು ಮಾಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಹೀಗಾಗಿ ಹೇಗಾದರೂ ಕೊರೊನಾ ನಿಯಂತ್ರಣ ಮಾಡಲೇಬೇಕು ಅಂತಾ ಕೇಜ್ರಿವಾಲ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಮುಂದಿನ 1 ಅಥವಾ 2 ವಾರದಲ್ಲಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ ಕರ್ನಾಟಕವೂ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಕೊರೊನಾ ಸುನಾಮಿ ಅಪ್ಪಳಿಸುವುದು ಬಹುತೇಕ ಪಕ್ಕಾ.

ಶಾಲೆಗಳಿಗೆ ಹೊಸ ನಿಯಮ?
ಇನ್ನು ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಕೇಜ್ರಿವಾಲ್ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ದೆಹಲಿ ಶಿಕ್ಷಣ ಸಚಿವೆ ಅತಿಶಿ, ಕೆಲವೇ ದಿನಗಳಲ್ಲಿ ಶಾಲೆಗಳಿಗೆ ಹೊಸ ಕೊರೊನಾ ಗೈಡ್‌ಲೈನ್ ನೀಡಲಿದ್ದೇವೆ ಎಂದಿದ್ದಾರೆ. ದೆಹಲಿಯಲ್ಲಿ ಈಗಾಗಲೇ ನಿತ್ಯ 1 ಸಾವಿರ ಕೇಸ್‌ಗಳ ಗಡಿ ದಾಟಿ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಇದರ ಜೊತೆಗೆ ಕೊರೊನಾ ಪಾಸಿಟಿವಿಟಿ ರೇಟ್ ಶೇ. 23ರ ಹಂತವನ್ನು ಮೀರಿ ಆತಂಕ ಹೆಚ್ಚು ಮಾಡಿದೆ.
ಮುಂದಿನ 10 ದಿನ ಕಠಿಣ!
ಅಷ್ಟಕ್ಕೂ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ, ಎಲ್ಲವೂ ಮಾಮೂಲಿಯಾಗುವ ಹೊತ್ತಲ್ಲೇ ಮತ್ತೊಮ್ಮೆ ಭಾರತೀಯರಿಗೆ ಬಿಗ್ ಶಾಕ್ ಸಿಕ್ಕಿದೆ. ದೇಶದಲ್ಲಿ ಕೊರೊನಾ 4ನೇ ಅಲೆ ಅಪ್ಪಳಿಸುವುದು ಬಹುತೇಕ ಪಕ್ಕಾ. ಮುಂದಿನ 10-12 ದಿನಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಪ್ರತಿಯೊಂದು ರಾಜ್ಯವೂ ಈ ಕುರಿತು ಎಚ್ಚರಿಕೆ ವಹಿಸುವಂತೆ ತಜ್ಞರು ತಿಳಿಸಿದ್ದಾರೆ. ಮತ್ತೊಂದು ಕಡೆ ಕೊರೊನಾ ರೂಪಾಂತರಿ ಕಟ್ಟಿಹಾಕಲು ಪ್ರಯತ್ನಗಳು ಸಾಗಿದ್ದು, ಏರ್ಪೋರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಪರೀಕ್ಷೆ ಹೆಚ್ಚು ಮಾಡಲಾಗಿದೆ.
ಮತ್ತೊಂದು ರೂಪಾಂತರಿ ಕಾಟ!
ಕಳೆದ ಕೆಲವು ದಿನದಿಂದ ತಜ್ಞರ ಊಹೆಗೂ ಸಿಗದಷ್ಟು ವೇಗವಾಗಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಚೀನಾದಲ್ಲೂ ಇದೇ ರೀತಿ ಭಯಾನಕ ರೀತಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿತ್ತು. ಭಾರತದಲ್ಲಿ ಹೆಮ್ಮಾರಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದೇ ಎಲ್ಲರೂ ನೆಮ್ಮದಿಯಾಗಿದ್ದರು. ಅದರಲ್ಲೂ ಭಾರತದಲ್ಲಿ ಬಹುತೇಕರಿಗೆ ಕೊರೊನಾ ಲಸಿಕೆ ಕೂಡ ನೀಡಲಾಗಿದೆ. ಇದೆಲ್ಲಾ ಕೊರೊನಾ ಕಂಟಕದಿಂದ ಮುಕ್ತವಾಗುವ ಧೈರ್ಯ ನೀಡಿತ್ತು. ಆದರೆ ಕೊರೊನಾ ವೈರಸ್ ರೂಪಾಂತರಗೊಂಡು 4ನೇ ಅಲೆ ರೂಪದಲ್ಲಿ ವಕ್ಕರಿಸುತ್ತಿದೆ.

ಆಸ್ಪತ್ರೆಗೆ ಸೇರುವವರು ಕಡಿಮೆ?
ಕೊರೊನಾ ಕಂಟಕ ಎದುರಾಗಿದ್ದರೂ ಈ ಬಾರಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಎನ್ನುತ್ತಿದ್ದಾರೆ ತಜ್ಞರು. ಜೊತೆಗೆ ಭಾರತದಲ್ಲಿ ಹೊಸ ಅಲೆಗೆ ಕಾರಣವಾಗಿರುವುದು Omicron ನ ಉಪ ರೂಪಾಂತರಿ ಎನ್ನಲಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದೆ. ಜೊತೆಗೆ ಹರ್ಯಾಣ, ಕೇರಳ, ಉತ್ತರ ಪ್ರದೇಶ, ದೆಹಲಿ, ಮುಂಬೈ ಹಾಗೂ ರಾಜಸ್ಥಾನದಲ್ಲಿ ಈವರೆಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.












Click it and Unblock the Notifications