Corona: 57 ಸಾವಿರದ ಗಡಿ ದಾಟಿದ ‘ಕೊರೊನಾ’ ಸಕ್ರಿಯ ಪ್ರಕರಣ
ನವದೆಹಲಿ: ಕೊರೊನಾ ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಕೋವಿಡ್-19 ಬಿರುಗಾಳಿಗೆ ದೇಶ ಮತ್ತೊಮ್ಮೆ ತತ್ತರಿಸುತ್ತಿದೆ. ಅದರಲ್ಲೂ ಕೇರಳ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ (Covid) ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ಒಂದೇ ದಿನ ದೆಹಲಿಯಲ್ಲಿ 1396 ಪ್ರಕರಣಗಳು ಪತ್ತೆಯಾಗಿದ್ದರೆ, ಮತ್ತೊಂದು ಕಡೆ ಕೇರಳದಲ್ಲಿ ಬರೋಬ್ಬರಿ 3,076 ಕೇಸ್ ಪತ್ತೆಯಾಗಿವೆ.
ಭಾರತದಲ್ಲಿ 24 ಗಂಟೆಯಲ್ಲಿ 10,093 ಕೊರೊನಾ ಪ್ರಕರಣಗಳು ಕನ್ಫರ್ಮ್ ಆಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 57 ಸಾವಿರದ ಗಡಿ ದಾಟಿಬಿಟ್ಟಿದೆ. ಹೀಗೆ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನದಲ್ಲಿ ಇದ್ದರೆ, 2ನೇ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇದೆ. ಹಾಗೇ ಮತ್ತೊಂದು ಕಡೆ ಮಹಾರಾಷ್ಟ್ರದಲ್ಲೂ ಕೊರೊನಾ ತನ್ನ ಉಗ್ರ ರೂಪ ತೋರುತ್ತಿದ್ದು, ಕಳೆದ 24 ಗಂಟೆಯಲ್ಲಿ 660 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. ಸದ್ಯದ ಬೆಳವಣಿಗೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಮುಂದಿನ ಪರಿಸ್ಥಿತಿ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಬಂದರು ನಗರಿ ಮುಂಬೈನಲ್ಲಿ ಭೀತಿ
ವಾಣಿಜ್ಯ ನಗರಿ ಮುಂಬೈ ಕೂಡ ಆತಂಕದ ಅಲೆಯಲ್ಲಿ ಮುಳುಗಿದೆ. ಕಳೆದ 24 ಗಂಟೆಗಳಲ್ಲಿ 182 ಪ್ರಕರಣಗಳು ದೃಢವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗುವ ಆತಂಕವಿದ್ದು, ಕೊರೊನಾ ಹಿಡಿತಕ್ಕೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹೀಗಾಗಿಯೇ ಮಾಸ್ಕ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಮುಂಬೈ ಮತ್ತಿತರ ನಗರಗಳಲ್ಲಿ ಜಾರಿಗೊಳಿಸಲಾಗಿದೆ. ಆದರೂ ಕೊರೊನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ.
ಭಾರತದಲ್ಲಿ ಕೋವಿಡ್ 19ಅಂಕಿ ಅಂಶ#covid_19 #coronavirus #COVID19india pic.twitter.com/3uV9aGUfO2
— oneindiakannada (@OneindiaKannada) April 17, 2023
ರಾಷ್ಟ್ರ ರಾಜಧಾನಿಗೂ ಭಯ
ಒಂದು ಕಡೆ ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಸುನಾಮಿಯಂತೆ ಅಪ್ಪಳಿಸಿದ್ದರೆ, ಮತ್ತೊಂದು ಕಡೆ ರಾಷ್ಟ್ರ ರಾಜಧಾನಿ ದೆಹಲಿ ಕೂಡ ಕೊರೊನಾ ಕೂಪದಲ್ಲಿ ಬೀಳುತ್ತಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಒಟ್ಟು 1396 ಕೊರೊನಾ ಪ್ರಕರಣಗಳು ದೃಢವಾಗಿ ಪಾಸಿಟಿವಿಟಿ ರೇಟ್ ಕೂಡ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಇನ್ನು ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಕೇಜ್ರಿವಾಲ್ ಸರ್ಕಾರ ಚಿಂತನೆ ನಡೆಸಿದೆ.

ಕರ್ನಾಟಕದಲ್ಲೂ ಆತಂಕ ತೀವ್ರ
ಕರ್ನಾಟಕದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಯಲ್ಲಿ ಒಟ್ಟು 377 ಕೊರೊನಾ ಕೇಸ್ ಕನ್ಫರ್ಮ್ ಆಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇಷ್ಟೆಲ್ಲದರ ನಡುವೆ ಕರ್ನಾಟಕದಲ್ಲಿ ಚುನಾವಣೆ ಬೇರೆ ಇದ್ದು, ಮುಂಬರುವ ದಿನಗಳಲ್ಲಿ ಜನರು ಗುಂಪುಗೂಡುವ ಸಾಧ್ಯತೆ ಹೆಚ್ಚು. ಹೀಗಾಗಿ ಕೊರೊನಾ ಕಂಟ್ರೋಲ್ ಮಾಡುವುದೇ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.
2ನೇ ಡೋಸ್ ಪಡೆಯದವರ ಬಗ್ಗೆ ಆತಂಕ
ಕರ್ನಾಟಕದಲ್ಲಿ ಸುಮಾರು 14.3 ಲಕ್ಷ ಜನ 2ನೇ ಡೋಸ್ ಲಸಿಕೆ ಪಡೆದಿಲ್ಲ ಎಂಬ ವರದಿ ಬಹಿರಂಗವಾಗಿದೆ. ಈ ಕಾರಣಗಳಿಂದಲೇ ಕೊರೊನಾ ಭೀತಿ ಮತ್ತೆ ಹೆಚ್ಚಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇದಿಷ್ಟೂ ಒಂದೆಡೆಯಾದರೆ ಇನ್ನೊಂದು ಕಡೆ ಕೊರೊನಾ 4ನೇ ಅಲೆ ಅತ್ಯಂತ ತೀವ್ರವಾಗಿ ಹರಡುತ್ತಿದೆ. ಇದೇ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕೆಲವರು ಮುಗಿಬೀಳುತ್ತಿದ್ದಾರೆ. ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚುತ್ತಿರುವುದು ಚಿಂತೆ ಹೆಚ್ಚಿಸಿದೆ.

ಅಷ್ಟಕ್ಕೂ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ, ಎಲ್ಲವೂ ಮಾಮೂಲಿಯಾಗುವ ಹೊತ್ತಲ್ಲೇ ಮತ್ತೊಮ್ಮೆ ಭಾರತೀಯರಿಗೆ ಬಿಗ್ ಶಾಕ್ ಸಿಕ್ಕಿದೆ. ದೇಶದಲ್ಲಿ ಕೊರೊನಾ 4ನೇ ಅಲೆ ಅಪ್ಪಳಿಸುವುದು ಬಹುತೇಕ ಪಕ್ಕಾ. ಮುಂದಿನ ಒಂದು ವಾರದಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಪ್ರತಿಯೊಂದು ರಾಜ್ಯವೂ ಈ ಕುರಿತು ಎಚ್ಚರಿಕೆ ವಹಿಸುವಂತೆ ತಜ್ಞರು ತಿಳಿಸಿದ್ದಾರೆ. ಮತ್ತೊಂದು ಕಡೆ ಕೊರೊನಾ ರೂಪಾಂತರಿ ಕಟ್ಟಿಹಾಕಲು ಪ್ರಯತ್ನಗಳು ಸಾಗಿದೆ.












Click it and Unblock the Notifications