ಮತ್ತೊಮ್ಮೆ ‘ಕೊರೊನಾ’ ಕೂಪದಲ್ಲಿ ನರಳುವುದು ಗ್ಯಾರಂಟಿ?
ನವದೆಹಲಿ: ಕೊರೊನಾ ಸುಳಿಗಾಳಿಯಂತೆ ಬೆಂಬಿಡದೆ ಭಾರತೀಯರನ್ನ ಕಾಡುತ್ತಿದೆ. ಕೊರೊನಾ (Covid) ಅಬ್ಬರಕ್ಕೆ ಭಾರತೀಯರು ನಲುಗಿದ್ದಾರೆ. ಕೊರೊನಾ 4ನೇ ಅಲೆ ಬಲೆಯಲ್ಲಿ ಭಾರತ ಸಿಲುಕುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ಮತ್ತೊಮ್ಮೆ ಆತಂಕದ ಛಾಯೆ ಮೂಡುವಂತೆ ಮಾಡಿದೆ. ಅದರಲ್ಲೂ ನೆರೆಯ ಮಹಾರಾಷ್ಟ್ರದ ಪರಿಸ್ಥಿತಿ ದಿನದಿನಕ್ಕೂ ಬಿಗಡಾಯಿಸುತ್ತಿದೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 11,109 ಕೊರೊನಾ ಪ್ರಕರಣಗಳು ಕನ್ಫರ್ಮ್ ಆಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ತಲುಪಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 1152 ಕೇಸ್ ಪಕ್ಕಾ ಆಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಹಿಂದಿನ 3 ಅಲೆಗಳಲ್ಲಿ ಆಗಿದ್ದ ಎಡವಟ್ಟು ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಹಾಗೇ ಕೊರೊನಾ ಲಸಿಕೆ ಕೊರತೆ ಎದುರಾಗಿರುವ ಬೆನ್ನಲ್ಲೇ ನೇರವಾಗಿ ವ್ಯಾಕ್ಸಿನ್ ಖರೀದಿಗೂ ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.

ಮುಂಬೈ ಮಹಾನಗರದಲ್ಲಿ ಆತಂಕ
ವಾಣಿಜ್ಯ ನಗರಿ ಮುಂಬೈ ಕೂಡ ಆತಂಕದ ಅಲೆಯಲ್ಲಿ ಮುಳುಗಿದೆ. ಕಳೆದ 24 ಗಂಟೆಗಳಲ್ಲಿ 284 ಪ್ರಕರಣಗಳು ದೃಢವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ಕೇಸ್ ಸಂಖ್ಯೆ 11 ಲಕ್ಷದ 60 ಸಾವಿರದ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗುವ ಆತಂಕವಿದ್ದು, ಕೊರೊನಾ ಹಿಡಿತಕ್ಕೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹೀಗಾಗಿಯೇ ಮಾಸ್ಕ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಮುಂಬೈ ಮತ್ತಿತರ ನಗರಗಳಲ್ಲಿ ಜಾರಿಗೊಳಿಸಲಾಗಿದೆ.
ರಾಷ್ಟ್ರ ರಾಜಧಾನಿಗೂ ಭಯ
ಒಂದು ಕಡೆ ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಸುನಾಮಿಯಂತೆ ಅಪ್ಪಳಿಸಿದ್ದರೆ, ಮತ್ತೊಂದು ಕಡೆ ರಾಷ್ಟ್ರ ರಾಜಧಾನಿ ದೆಹಲಿ ಕೂಡ ಕೊರೊನಾ ಕೂಪದಲ್ಲಿ ಬೀಳುತ್ತಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಒಟ್ಟು 1527 ಕೊರೊನಾ ಪ್ರಕರಣಗಳು ದೃಢವಾಗಿ ಪಾಸಿಟಿವಿಟಿ ರೇಟ್ ಶೇಕಡಾ 27ರ ಗಡಿ ದಾಟಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಕುರಿತು ಮಾಹಿತಿ ನೀಡುತ್ತಾ, ಕೇಸ್ ಹೆಚ್ಚಳವಾಗುತ್ತಿದ್ದರೂ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಶಾಲೆಗಳಿಗೆ ಹೊಸ ನಿಯಮ?
ಇನ್ನು ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಕೇಜ್ರಿವಾಲ್ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿದ್ದ ದೆಹಲಿ ಶಿಕ್ಷಣ ಸಚಿವೆ ಅತಿಶಿ, ಕೆಲ ದಿನಗಳಲ್ಲಿ ಶಾಲೆಗಳಿಗೆ ಹೊಸ ಕೊರೊನಾ ಗೈಡ್‌ಲೈನ್ ನೀಡಲಿದ್ದೇವೆ ಎಂದು ತಿಳಿಸಿದ್ದರು. ದೆಹಲಿಯಲ್ಲಿ ಈಗಾಗಲೇ ನಿತ್ಯ 1500 ಕೇಸ್‌ಗಳ ಗಡಿ ದಾಟಿ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಜೊತೆಗೆ ಪಾಸಿಟಿವಿಟಿ ರೇಟ್ ನಿನ್ನೆ ಶೇ. 23ರಷ್ಟಿದ್ದು, ಈಗ ದಿಢೀರ್ ಶೇ. 27ನ್ನು ತಲುಪಿದೆ.
ಮುಂದಿನ 10 ದಿನ ಕಠಿಣ!
ಅಷ್ಟಕ್ಕೂ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ, ಎಲ್ಲವೂ ಮಾಮೂಲಿಯಾಗುವ ಹೊತ್ತಲ್ಲೇ ಮತ್ತೊಮ್ಮೆ ಭಾರತೀಯರಿಗೆ ಬಿಗ್ ಶಾಕ್ ಸಿಕ್ಕಿದೆ. ದೇಶದಲ್ಲಿ ಕೊರೊನಾ 4ನೇ ಅಲೆ ಅಪ್ಪಳಿಸುವುದು ಬಹುತೇಕ ಪಕ್ಕಾ. ಮುಂದಿನ 10 ದಿನಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಪ್ರತಿಯೊಂದು ರಾಜ್ಯವೂ ಈ ಕುರಿತು ಎಚ್ಚರಿಕೆ ವಹಿಸುವಂತೆ ತಜ್ಞರು ತಿಳಿಸಿದ್ದಾರೆ. ಮತ್ತೊಂದು ಕಡೆ ಕೊರೊನಾ ರೂಪಾಂತರಿ ಕಟ್ಟಿಹಾಕಲು ಪ್ರಯತ್ನಗಳು ಸಾಗಿದೆ. ಇದರ ಜೊತೆಗೆ ಜಿ-20 ರಾಷ್ಟ್ರಗಳ ಮಹತ್ವದ ಸಭೆ ಕೂಡ ಭಾರತದಲ್ಲೇ ನಡೆಯಲಿದ್ದು, ಕೊರೊನಾ ಹೆಮ್ಮಾರಿಯನ್ನು ಆದಷ್ಟು ಬೇಗ ಕಟ್ಟಿಹಾಕಬೇಕಿದೆ.












Click it and Unblock the Notifications