ಕೊರೊನಾ ಕಂಟಕ: ಭಾರತೀಯರಿಗೆ ಅಂತೂ ಸಿಕ್ಕ ಸಿಹಿಸುದ್ದಿ!
ನವದೆಹಲಿ: ದೇಶದಲ್ಲಿ ದಿಢೀರ್ ಕೊರೊನಾ (Corona) ಹಾವಳಿ ಹೆಚ್ಚಾಗಿ ಆತಂಕ ಹೆಚ್ಚಾದ ಬೆನ್ನಲ್ಲೇ ಭಾರತೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಹ ವರದಿ ಇಂದು ಹೊರಬಿದ್ದಿದೆ. ಇನ್ನೇನು ಕೊರೊನಾ (Covid) ಕಂಟಕ ತೊಲಗಿ, ಹೊಸ ಮನ್ವಂತರ ಆರಂಭವಾಯ್ತು ಎನ್ನುವಷ್ಟರಲ್ಲೇ ಮತ್ತೆ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದವು. ಈಗ ಮತ್ತೆ ಸಿಹಿಸುದ್ದಿ ಸಿಕ್ಕಿದೆ.
ಕಳೆದ ವಾರ ತಜ್ಞರ ಊಹೆಗೂ ಸಿಗದಷ್ಟು ವೇಗವಾಗಿ ಕೊರೊನಾ ಪ್ರಕರಣ ಏರಿಕೆಯಾಗಿದ್ದವು. ದಿಢೀರ್ ಸಕ್ರಿಯ ಪ್ರಕರಣಗಳ ಸಂಖ್ಯೆ 30 ಸಾವಿರದ ಗಡಿ ದಾಟಿ ಭಾರಿ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಕೇಂದ್ರ ಸರ್ಕಾರ ಕೂಡ ಎಚ್ಚೆತ್ತುಕೊಂಡು, ರಾಜ್ಯಗಳ ಜೊತೆ ವಿವಿಧ ಹಂತಗಳಲ್ಲಿ ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿತ್ತು. ಇದೀಗ ಒಂದಷ್ಟು ರಿಲೀಫ್ ಸಿಗುವ ಸುದ್ದಿ ಹೊರಬಿದ್ದಿದ್ದು, ಇಂದು ಬಿಡುಗಡೆ ಆಗಿರುವ ಕೊರೊನಾ ಪ್ರಕರಣಗಳ ವರದಿಯಲ್ಲಿ ಒಂದಷ್ಟು ಕುಸಿತ ಉಂಟಾಗಿದೆ.

24 ಗಂಟೆಗಳಲ್ಲಿ 5,675 ಕೇಸ್
ಕಳೆದ ವಾರ ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿದ್ದ ರೀತಿ ನೋಡಿದರೆ, ದೇಶಾದ್ಯಂತ ಮತ್ತೆ ಆತಂಕದ ವಾತಾವರಣ ನಿರ್ಮಾಣ ಆಗುವ ಭಯ ಎದುರಾಗಿತ್ತು. ಆದರೆ ಕಳೆದ 24 ಗಂಟೆಗಳ ಕೊರೊನಾ ವರದಿ ಭಾರತೀಯರಿಗೆ ರಿಲೀಫ್ ನೀಡಿದೆ. 24 ಗಂಟೆಗಳಲ್ಲಿ 5,675 ಕೊರೊನಾ ಕೇಸ್ ಕನ್ಫರ್ಮ್ ಆಗಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಕೊರೊನಾ ಸೋಂಕು ಹರಡುತ್ತಿರುವ ಪ್ರಮಾಣದಲ್ಲಿ ಭಾರಿ ಇಳಿಕೆ ಆಗಿದೆ. ಈ ಮೂಲಕ ಮತ್ತೊಂದು ಅಲೆಯಲ್ಲಿ ಸಿಲುಕುವುದು ಬಹುತೇಕ ತಪ್ಪಿದಂತಾಗಿದೆ.
ರಾಜ್ಯಗಳಿಗೆ ಕೇಂದ್ರದ ಸಂದೇಶ
ದೇಶದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದೇ ಬಿಟ್ಟಿದೆ ಅಂತಾ ನಿಟ್ಟುಸಿರು ಬಿಡುವುದರ ಒಳಗೆ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿದೆ. ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆದಿದ್ದರೂ ಕೊರೊನಾ ರೂಪಾಂತರಿಯಾಗಿ ಕಾಟ ಕೊಡುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿ, ಸೋಂಕು ನಿಯಂತ್ರಣಕ್ಕೆ ಸಿದ್ಧತೆ ಆರಂಭಿಸುವಂತೆ ತಿಳಿಸಿದೆ. ಅದರಂತೆ ಈಗಾಗಲೇ ದೇಶದ ಬಹುತೇಕ ರಾಜ್ಯಗಳ ಆಸ್ಪತ್ರೆಗಳಲ್ಲಿ ಸಿದ್ಧತೆ ಪರಿಶೀಲನೆ ನಡೆದಿದೆ.

ಹಲವೆಡೆ ಮಾಸ್ಕ್ ಕಡ್ಡಾಯ
ಕೊರೊನಾ ಹಾವಳಿ ಬಗ್ಗೆ ಕಳೆದ ವಾರ ಕೇಂದ್ರ ಸರ್ಕಾರ ಸಭೆ ನಡೆಸಿ ನಡೆಸಿದ್ದ ತಕ್ಷಣ ಕೊರೊನಾ ಸಂಖ್ಯೆ ಏರಿಕೆ ಕಂಡಿದ್ದ ರಾಜ್ಯಗಳಲ್ಲಿ ಕಠಿಣ ಕ್ರಮ ಜಾರಿಗೆ ತರಲಾಗಿತ್ತು. ಈ ಪೈಕಿ ಈಗಾಗಲೇ ಹಲವು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದೆ. ಪುದುಚೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಹರ್ಯಾಣ, ಕೇರಳ, ಉತ್ತರ ಪ್ರದೇಶ, ದೆಹಲಿ, ಮುಂಬೈ ಹಾಗೂ ರಾಜಸ್ಥಾನದಲ್ಲಿ ಈವರೆಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ವ್ಯಾಕ್ಸಿನ್‌ಗೆ ಹೆಚ್ಚಿದ ಡಿಮ್ಯಾಂಡ್
ಒಂದು ಕಡೆ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ವ್ಯಾಕ್ಸಿನ್ ಪಡೆಯಲು ಡಿಮ್ಯಾಂಡ್ ಕೂಡ ಹೆಚ್ಚಾಗುತ್ತಿದೆ. ಈಗಾಗಲೇ ಬಿಹಾರ ಸಿಎಂ ನಿತೀಶ್ ಕುಮಾರ್ ನೇರವಾಗಿ ಕೇಂದ್ರ ಸರ್ಕಾರಕ್ಕೆ ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಇದರ ಜೊತೆಗೆ ಹಲವು ರಾಜ್ಯಗಳು ಇದೇ ರೀತಿಯ ಬೇಡಿಕೆ ಇಟ್ಟಿವೆ.

ಒಟ್ಟಾರೆ ದೇಶದಲ್ಲಿ ಮತ್ತೊಮ್ಮೆ ಕೊರೊನಾ ಕರಿನೆರಳು ಆವರಿಸಿದೆ. ಕೇಂದ್ರ ಸರ್ಕಾರ ಈಗಾಗಲೇ ದೇಶದ ಎಲ್ಲಾ ರಾಜ್ಯಗಳ ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ ನಡೆಸಲು ಸೂಚಿಸಿದೆ. ಇನ್ನೊಂದೆಡೆ ಅಗತ್ಯಬಿದ್ದರೆ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಗಳಿಗೂ ಈ ಬಗ್ಗೆ ಸೂಕ್ತ ಸಂದೇಶ ರವಾನಿಸಲಾಗಿದ್ದು, ಆಕ್ಸಿಜೆನ್ ಪೂರೈಕೆಗೂ ವ್ಯವಸ್ಥೆ ಸಜ್ಜಾಗಿದೆ. ಆದರೆ ಇದೀಗ ಒಂದಿಷ್ಟು ರಿಲ್ಯಾಕ್ಸ್ ನೀಡುವ ಸುದ್ದಿ ಹೊರಬಿದ್ದು, ಕೊರೊನಾ ಏರಿಕೆಯ ಪ್ರಮಾಣಕ್ಕೆ ಸ್ವಲ್ಪ ಬ್ರೇಕ್ ಬಿದ್ದಂತಾಗಿದೆ.












Click it and Unblock the Notifications