ಮುಂದಿನ 10 ದಿನದಲ್ಲಿ ದೇಶಕ್ಕೆ ಕೊರೊನಾ ಗಂಡಾಂತರ?
ನವದೆಹಲಿ: ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ, ಎಲ್ಲವೂ ಮಾಮೂಲಿಯಾಗುವ ಹೊತ್ತಲ್ಲೇ ಮತ್ತೊಮ್ಮೆ ಭಾರತೀಯರಿಗೆ ಬಿಗ್ ಶಾಕ್ ಸಿಕ್ಕಿದೆ. ದೇಶದಲ್ಲಿ ಕೊರೊನಾ (Corona) 4ನೇ ಅಲೆ ಅಪ್ಪಳಿಸುವುದು ಬಹುತೇಕ ಪಕ್ಕಾ. ಮುಂದಿನ 10-12 ದಿನಗಳಲ್ಲಿ ಭಾರತದಲ್ಲಿ ಕೋವಿಡ್ (Covid) ಪ್ರಕರಣಗಳು ಭಾರಿ ಏರಿಕೆ ಕಾಣುವ ಸಾಧ್ಯತೆ ಇದ್ದು, ಕೇಂದ್ರದಿಂದ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ದಿಢೀರ್ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿ ಆತಂಕ ಮೂಡಿತ್ತು. ಆದರೆ ನಿನ್ನೆ ಒಂದಷ್ಟು ನೆಮ್ಮದಿ ತರಬಹುದಾದ ವರದಿ ಸಿಕ್ಕಿದ್ದರೂ, ಮತ್ತೆ ಈಗ ಶಾಕ್ ಸಿಕ್ಕಿದೆ. ಇಂದು ಒಂದೇ ದಿನ 7,830 ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 40 ಸಾವಿರದ ಗಡಿ ದಾಟಿದೆ. ಇದರ ಜೊತೆಗೆ 223 ದಿನಗಳಲ್ಲೇ ಅತಿಹೆಚ್ಚು ಪ್ರಕರಣಗಳನ್ನು ಭಾರತ ದಾಖಲಿಸುವಂತಾಗಿದೆ. ಮತ್ತೊಂದು ಅಲೆಯ ಆತಂಕದಲ್ಲೇ ಕೊರೊನಾ ಪರಿಸ್ಥಿತಿ ನಿರ್ವಹಣೆಗೆ ಪೂರ್ವ ಸಿದ್ಧತೆಗಳು ಸಾಗಿವೆ.

ಮತ್ತೊಂದು ರೂಪಾಂತರಿ ಕಾಟ!
ಕಳೆದ ಕೆಲವು ದಿನದಿಂದ ತಜ್ಞರ ಊಹೆಗೂ ಸಿಗದಷ್ಟು ವೇಗವಾಗಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಚೀನಾದಲ್ಲೂ ಇದೇ ರೀತಿ ಭಯಾನಕ ರೀತಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿತ್ತು. ಭಾರತದಲ್ಲಿ ಹೆಮ್ಮಾರಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದೇ ಎಲ್ಲರೂ ನೆಮ್ಮದಿಯಾಗಿದ್ದರು. ಅದರಲ್ಲೂ ಭಾರತದಲ್ಲಿ ಬಹುತೇಕರಿಗೆ ಕೊರೊನಾ ಲಸಿಕೆ ಕೂಡ ನೀಡಲಾಗಿದೆ. ಇದೆಲ್ಲಾ ಕೊರೊನಾ ಕಂಟಕದಿಂದ ಮುಕ್ತವಾಗುವ ಧೈರ್ಯ ನೀಡಿತ್ತು. ಆದರೆ ಕೊರೊನಾ ವೈರಸ್ ರೂಪಾಂತರಗೊಂಡು 4ನೇ ಅಲೆ ರೂಪದಲ್ಲಿ ವಕ್ಕರಿಸುತ್ತಿದೆ.
ಆಸ್ಪತ್ರೆಗೆ ಸೇರುವವರು ಕಡಿಮೆ?
ಕೊರೊನಾ ಕಂಟಕ ಎದುರಾಗಿದ್ದರೂ ಈ ಬಾರಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಎನ್ನುತ್ತಿದ್ದಾರೆ ತಜ್ಞರು. ಜೊತೆಗೆ ಭಾರತದಲ್ಲಿ ಹೊಸ ಅಲೆಗೆ ಕಾರಣವಾಗಿರುವುದು Omicron ನ ಉಪ ರೂಪಾಂತರಿ ಎನ್ನಲಾಗಿದೆ. ಈ ಮೂಲಕ ಇಂದು ಭಾರತದಲ್ಲಿ ಒಟ್ಟು 7,830 ಕೊರೊನಾ ಪ್ರಕರಣಗಳು ಪತ್ತೆಯಾಗಿ, ಒಟ್ಟು ಪ್ರಕರಣಗಳ ಸಂಖ್ಯೆ 4,47,76,002ರ ಗಡಿ ದಾಟಿದೆ. ಆದರೆ ಮಂಗಳವಾರ 5,676 ಕೇಸ್‌ಗಳು ಪತ್ತೆಯಾಗುವ ಮೂಲಕ ಒಂದಷ್ಟು ರಿಲ್ಯಾಕ್ಸ್ ಸಿಕ್ಕಿತ್ತು. ಇದೀಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಲಕ್ಷಣ ಕಾಣಿಸುತ್ತಿದೆ.
ರಾಜ್ಯಗಳಿಗೆ ಕೇಂದ್ರದ ಸಂದೇಶ
ದೇಶದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದೇ ಬಿಟ್ಟಿದೆ ಅಂತಾ ನಿಟ್ಟುಸಿರು ಬಿಡುವುದರ ಒಳಗೆ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿದೆ. ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆದಿದ್ದರೂ ಕೊರೊನಾ ರೂಪಾಂತರಿಯಾಗಿ ಕಾಟ ಕೊಡುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿ, ಸೋಂಕು ನಿಯಂತ್ರಣಕ್ಕೆ ಸಿದ್ಧತೆ ಆರಂಭಿಸುವಂತೆ ತಿಳಿಸಿದೆ. ಎಷ್ಟೇ ಸಿದ್ಧತೆ ಮಾಡಿಕೊಂಡರೂ ಹೆಮ್ಮಾರಿಯ ಶಕ್ತಿ ಅರಿಯಲು ಆಗುತ್ತಿಲ್ಲ. ದಿಢೀರ್ ಸೋಂಕು ಕಮ್ಮಿಯಾಗಿ ಈಗ ಮತ್ತೆ ದಿಢೀರ್ ಪ್ರಕರಣಗಳು ಹೆಚ್ಚಾಗಿವೆ.

ಹಲವೆಡೆ ಮಾಸ್ಕ್ ಕಡ್ಡಾಯ
ಕೊರೊನಾ ಹಾವಳಿ ಬಗ್ಗೆ ಕಳೆದ ವಾರ ಕೇಂದ್ರ ಸರ್ಕಾರ ಸಭೆ ನಡೆಸಿ ನಡೆಸಿದ್ದ ತಕ್ಷಣ ಕೊರೊನಾ ಸಂಖ್ಯೆ ಏರಿಕೆ ಕಂಡಿದ್ದ ರಾಜ್ಯಗಳಲ್ಲಿ ಕಠಿಣ ಕ್ರಮ ಜಾರಿಗೆ ತರಲಾಗಿತ್ತು. ಈ ಪೈಕಿ ಈಗಾಗಲೇ ಹಲವು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದೆ. ಪುದುಚೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಹರ್ಯಾಣ, ಕೇರಳ, ಉತ್ತರ ಪ್ರದೇಶ, ದೆಹಲಿ, ಮುಂಬೈ ಹಾಗೂ ರಾಜಸ್ಥಾನದಲ್ಲಿ ಈವರೆಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಒಂದೆಡೆ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ವ್ಯಾಕ್ಸಿನ್ ಪಡೆಯಲು ಡಿಮ್ಯಾಂಡ್ ಕೂಡ ಹೆಚ್ಚಾಗುತ್ತಿದೆ. ಜನರು ಕೂಡ ಕೊರೊನಾ ಸೋಂಕಿನಿಂದ ರಕ್ಷಣೆಗೆ ವ್ಯಾಕ್ಸಿನ್ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಬಹುತೇಕ ಭಾರತೀಯರಿಗೆ ವ್ಯಾಕ್ಸಿನೇಷನ್ ಆಗಿರುವ ಹಿನ್ನೆಲೆಯಲ್ಲಿ ಕೊರೊನಾ ಅಪ್ಪಳಿಸಿದರೂ, ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಇರಲಿದೆ ಎನ್ನುತ್ತಿದ್ದಾರೆ ತಜ್ಞರು.












Click it and Unblock the Notifications