• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉದ್ಯೋಗಸ್ಥ ಮಹಿಳೆಯರಿಗೆ ಜಗಳಗಂಟಿ ಪಟ್ಟ!

By * ರೂಪ ಎಸ್.
|

ಎಲ್ಲರೂ ಜೊತೆಸೇರಿ ನಗುತ್ತಿರುವಾಗ ಮಧ್ಯೆ ಬಂದು ಎಲ್ಲರ ಮೇಲೂ ರೇಗುವ ಶಾಂಭವಿ ಟೀಚರ್, ಮುಕ್ತ - ಮುಕ್ತ ಧಾರವಾಹಿಯಲ್ಲಿ ಮಾತ್ರ ಕಾಣಿಸುತ್ತಾಳೆ ಅಂದುಕೊಂಡಿದ್ದೀರ? ಊಹಂ ಇಲ್ಲ. ಆಕೆ ಅಲ್ಲೆಲ್ಲೊ ನಿಮ್ಮ ಕಚೇರಿಯಲ್ಲಿ ನೆರೆ ಮನೆಯ ಗೆಳತಿಯಲ್ಲಿಯೂ ಇರಬಹುದು. ನಿಮ್ಮೊಳಗೂ ಇರಬಹುದು. ಮಗು ಬಂದು ಆಟಕ್ಕೆ ಬಾರಮ್ಮ ಎಂದು ಕರೆದರೆ ಸಿಡುಕು, ಕಚೇರಿಯಲ್ಲಿ ಯಾರೋ ಲಘುವಾಗಿ ಮಾತಾಡಿದರೆ ಮೂಗಿನ ತುದಿಗೇರುವ ಸಿಟ್ಟು. ಕೆಲಸದ ಮಧ್ಯೆ ಫೋನ್ ಕರೆ ಬಂದರೆ ಉತ್ತರಿಸುವಾಗಲೂ ಮುಖವೆಲ್ಲ ಗಂಟು...

ಇದ್ಯಾಕೆ ಹಿಗೆ? ಮೃದೂಣಿ ಕುಸುಮಾದಪಿ ಎಂದ ಕವಿವಾಣಿಯ ಮತ್ತರ್ಧವೇ ಸತ್ಯವಾಗಿ ವಜ್ರದಂತೆ ಕಠಿಣವಾಗುತ್ತಿದ್ದಾಳ ಅವಳು? ಬರಿಯ ಕೆಲಸದ ಒತ್ತಡ ಮಾತ್ರ ಇದಕ್ಕೆ ಕಾರಣವೆ? ಸ್ತ್ರೀಯ ವ್ಯಕ್ತಿತ್ವ ವಿಕಸನದ ಲಕ್ಷಣವೆ? ಅಥವಾ ಪುರುಷರ ದೌರ್ಜನ್ಯದ ತಡೆಗೆ ಆಕೆ ಕಂಡುಕೊಂಡ ಮಾರ್ಗವೇ? ಕೆಲ್ಸಕ್ಕೆ ಹೋಗೋ ಹೆಣ್ಣು ಮಕ್ಕಳು 'ಜೋರು' ಅನ್ನೋ ತಪ್ಪಭಿಪ್ರಾಯ ಇರೋದೇನೋ ನಿಜ. ಈ ಹೇಳಿಕೆಗೂ ಇಂತಹ ಉದ್ಯೋಗಸ್ಥ ಮಹಿಳೆಯರು ಸಿಡುಕೋದಕ್ಕೂ ಸರಿಹೋಯ್ತು ಅಂತೀರಾ?

ಹೌದು, ಉದ್ಯೋಗಸ್ಥ ಮಹಿಳೆಯರು ಜಗಳ ಹೂಡೋ ಸ್ವಭಾವಕ್ಕೆ ಕ್ರಮೇಣ ಪಕ್ಕಾಗುತ್ತಿದ್ದಾರೆ ಅನ್ನುತ್ತವೆ ಅಧ್ಯಯನಗಳು. ಮನೆ ಉದ್ಯೋಗಳೆರಡನ್ನೂ ಸಮತೂಕದಲ್ಲಿ ನಡೆಸುತ್ತಾ ಮಾಡಬೇಕಾದ ದೊಂಬರಾಟವೇ ಅನೇಕರ ಈ ಮಾನಸಿಕ ಸ್ಥಿತ್ಯಂತರಕ್ಕೆ ಕಾರಣ. ಇದೇ ಒತ್ತಡದಲ್ಲಿ ಮನಸ್ಸು ಕ್ಷಣಕಾಲಕ್ಕೆ ವಿವೇಚನೆ ಕಳಕೊಂಡು ರೇಗಿಬಿಟ್ಟರೆ ಸಾಕು 'ಜಗಳಗಂಟಿ' ಎಂಬ ಹಣೆಪಟ್ಟಿ ಅಂಟಿಸಿಕೊಂಡುಬಿಡುತ್ತದೆ.

ಈ ಸಿಡುಕುತನ ಮೂಡುವುದಕ್ಕೂ ಒಬ್ಬೊಬ್ಬರಿಗೆ ಒಂದೊಂದು ನೆಪವುಂಟು. ವರ್ಷಗಳಿಂದ ಅದುಮಿಟ್ಟ ಆಕಾಂಕ್ಷೆಗಳೇ ಈ ಸ್ಪೋಟಕ್ಕೆ ಕಾರಣ ಎನ್ನುತ್ತಾರೆ ಮನಃಶಾಸ್ತ್ರಜ್ಙರು. ಇಂದಿನ ಹೆಣ್ಣಿನ ದ್ವಂದ್ವವೆಂದರೆ, ಒಂದೆಡೆ ಆಕೆ ಆಧುನಿಕಳಾಗಿ ಹೊರಪ್ರಪಂಚದಲ್ಲಿ ದುಡಿಯಬೇಕು, ಮನೆಯನ್ನು ನಿಭಾಯಿಸಬಲ್ಲ ಸಮರ್ಥೆ ಅನ್ನಿಸಿಕೊಳ್ಳಬೇಕು. ಅದೇ ವೇಳೆ ಕೌಟುಂಬಿಕವಾಗಿ ಮಾತ್ರ ಈಕೆಯನ್ನೂ ಸಾಂಪ್ರದಾಯಿಕಳಾಗಿಯೇ ಇರಬೇಕು. ಮನೆಯ ಜವಾಬ್ದಾರಿಗಳನ್ನು ಇಂಚೂ ತಪ್ಪದಂತೆ ನೆರವೇರಿಸಬೇಕು. ಇದರಲ್ಲಿ ಕೊಂಚ ಗೆರೆದಾಟಿದರೂ ಆಕೆಯತ್ತ ಬೆರಳುಗಳು ಚಾಚುತ್ತವೆ. ಎಲ್ಲ ಆಸೆ ಆಕಾಂಕ್ಷೆಗಳನ್ನೂ ಹೂತಿಟ್ಟು ಎಷ್ಟು ವರ್ಷವೆಂದು ಕೆಲಸ ಮಾಡಲಾದೀತು? ಆಕೆ ಜಗಳಗಂಟಿಯಾಗುವುದು ಈಗ.

ಮನೆ ಮಕ್ಕಳು ಆರ್ಥಿಕ ವ್ಯವಹಾರವನ್ನೂ ನಿಭಾಯಿಸಿದರೆ ಸೂಪರ್ ವುಮೆನ್ ಎಂಬ ಹೆಗ್ಗಳಿಕೆ. ಆದರೆ ಇದಕ್ಕಾಗಿ ಸಹಿಸಿಕೊಳ್ಳುವ ಒತ್ತಡವೂ ಹೆಚ್ಚು ದಿನ ತಡೆಯುವಂಥದ್ದಲ್ಲ. ಪೂರಕವಾಗಿ ಮನೆಯವರ ಸಹಕಾರವೂ ಶೂನ್ಯವಾದರೆ ಕೇಳುವುದೇ ಬೇಡ. ಆಗಲೇ ಆಕೆಯ ಸಿಡುಕು ಆರಂಭ. ಕೃತಜ್ಙತೆಯಿಲ್ಲದೆ ದುಡಿಯುವ ದುಡಿಮೆಗೆ ತಾಳ್ಮೆ ಧೀರ್ಘ ಹಾದಿಯ ಸಾಂಗತ್ಯ ನೀಡುವುದಿಲ್ಲ. ಆಸೆಗಳು ನೂರಾರು, ಆರ್ಥಿಕ ಪರಿಸ್ಥಿತಿ ಮಾತ್ರ ಕೈಕಟ್ಟುವಂಥದ್ದು ಹೀಗಿರುವಾಗ ನಿರಾಶೆಯಾಗುವುದು ಸಹಜವೇ.

ಕರ್ತವ್ಯಚ್ಯುತಿಯನ್ನೇ ಎತ್ತಿ ಹೇಳಿದರೆ ಮುನಿಸು ಮೂಡದಿದ್ದೀತೆ ಅಂತಾರೆ ಉಪನ್ಯಾಸಕಿ ಎಸ್. ಚಂದ್ರ. ಅಲ್ಲದೆ ಹೆಣ್ಣು ಮಕ್ಕಳೂ ಪುರುಷರಂತೆ ಕೆಲಸವನ್ನು ಮನೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಎಲ್ಲವನ್ನೂ ಕಚೇರಿಯಲ್ಲಿ ಹೆಚ್ಚುತ್ತಿರುವ ಜವಬ್ದಾರಿ. ಈ ಮಧ್ಯೆ ಮೆನೋಪಾಸ್‌ನಂತಹ ಮನೋದೈಹಿಕ ಸಮಸ್ಯೆಗಳು ಆಕೆಯ ಮನದ ತಾಕಲಾಟವನ್ನು ಹೇಳುವುದೇ ಕಷ್ಟ. ಜೊತೆಗೊಂದು ಕೀಳರಿಮೆ ಮನದ ಮೂಲೆಯಲ್ಲಿ ಮೂಡಿಬಿಟ್ಟರಂತೂ.... ಇಂಥಾ ಸಂದರ್ಭದಲ್ಲಿ ಆಕೆ ಮೇಲೆ ಬಿದ್ದು ಜಗಳ ಹೂಡುವವಳಂತೆ ಕಂಡರೆ ಅಚ್ಚರಿಯೇನಿಲ್ಲ. ಇದು ಸಮಸ್ಯೆಯಂತೆ ಕಂಡರೂ ಕೆಲವೊಮ್ಮೆ ಆಧುನಿಕ ಸ್ತ್ರೀಯರ ಅಸ್ತ್ರವಾಗಿರುವುದೂ ಅಷ್ಟೇ ಸತ್ಯ.

ಉದ್ಯೋಗದಲ್ಲಿ ಪರಿಪೂರ್ಣತೆಯೇ ಮಾನದಂಡವಾಗಿರುವಾಗ ಆಕೆಯೂ ಇತರರಿಂದ ಕೆಲಸ ತೆಗೆಸಲು, ಮಾಡುವ ಉತ್ತಮ ಗುಣಮಟ್ಟದಿಂದ ಕೂಡಿರಲು ಆಕ್ರಮಣಕಾರಿ ಪ್ರವೃತ್ತಿಯನ್ನು ಉದ್ದೇಶಪೂರ್ವಕವಾಗಿಯೇ ಮೈಗೂಡಿಸಿಕೊಳ್ಳುತ್ತಾಳೆ. ಹಾದಿಯಲ್ಲೆಲ್ಲೋ ಕೀಟಲೆ ಮಾಡುವ ಹುಡುಗರನ್ನು ಲೆಕ್ಕಿಸದೆ ನಡೆಯಲು, ಬಸ್‌ನಲ್ಲಿ ಮೈಮೇಲೆ ಬೀಳುವ ಗಂಡಸಿಗೆ ಚುರುಕು ಮುಟ್ಟಿಸಲೂ ಈ ದೊಡ್ಡ ಗಂಟಲಿನ ಜಗಳಗಂಟಿತನ ನೆರವಾಗುವುದು ಸುಳ್ಳಲ್ಲ. ಕಷ್ಟದ ದುಡಿಮೆಯಿಂದ ಗಳಿಸುವ ಹೆಣ್ಣು ತನ್ನ ಪತಿ, ಕುಟುಂಬದವರಿಂದಲೂ ಅದೇ ರೀತಿಯ ದುಡಿಮೆ, ಬದ್ದತೆಯನ್ನು ಬಯಸುವುದು ನಿರೀಕ್ಷಿತ. ಆಕೆಯ ಈ ಬಯಕೆಯೇ ಉಳಿದವರಿಗೆ ಸಿಟ್ಟೆಂಬ ನುಂಗಲಾರದ ತುತ್ತಾಗುವುದು ಮಾತ್ರ ವಿಪರ್ಯಾಸ.

ಇಂದಿನ ಹೆಣ್ಣು ಮನೆ ಉದ್ಯೋಗಗಳ ಜಂಜಾಟಕ್ಕೆ ಇಳಿದಾಗಿದೆ. ಎಲ್ಲವನ್ನೂ ನಿಭಾಯಿಸಿ ಮುನ್ನುಗ್ಗಿದವರೇ ಈ ಜೀವನ ಹೋರಾಟದ ಆಖಾಡದಲ್ಲಿ ಉಳಿಯುವುದು ಚಾಲ್ಸ್ ಡಾರ್ವಿನಿನ್ನ ಸಿದ್ದಾಂತದಷ್ಟೇ ಸತ್ಯ. ಭಾವನೆಗಳನ್ನು ಆರೋಗ್ಯಕರವಾಗಿ ನಿಯಂತ್ರಿಸುವುದೂ ಈ ಹೋರಾಟದ ಒಂದು ಮಜಲು. ಸಾಧ್ಯವಾದಷ್ಟೂ ಕುಟುಂಬವರನ್ನೂ ತೊಡಗಿಸಿಕೊಂಡು ನೋವಿನ ಕ್ಷಣಗಳನ್ನು ಆಪ್ತ ಮನದ ಜೊತೆ ಹಂಚಿಕೊಂಡು ಆತ್ಮವಿಶ್ವಾಸದಿಂದ ಮನ್ನಡೆಯುವುದೇ ಇಲ್ಲಿ ಗೆಲುವಿನ ಸೂತ್ರ.

ಮಹಿಳೆಯರೂ ಸಿಡುಕಿದರೆ ಎಲ್ಲಾ ಮಹಿಳೆಯರೂ ಜಗಳಗಂಟಿಯರು ಎಂದು ಸಾರ್ವತ್ರಿಕ ಹೇಳಿಕೆ ನೀಡಿದರೆ ಅದು ಉಳಿದವರ ಮೂರ್ಖತನವಾದೀತು. ಭಾವನೆಗಳನ್ನು ಆರೋಗ್ಯಕರವಾಗಿ ನಿಯಂತ್ರಿಸುವುದೂ ಈ ಹೋರಾಟದ ಒಂದು ಮಜಲು, ಸಾದ್ಯವಾದಷ್ಟು ಕುಟುಂದವರನ್ನು ತೊಡಗಿಸಿಕೊಂಡು ನೋವಿನ ಕ್ಷಣಗಳನ್ನು ಆಪ್ತಮನದ ಜೊತೆ ಹಂಚಿಕೊಂಡು ಆತ್ಮ ವಿಶ್ವಾಸದಿಂದ ಮುನ್ನಡೆಯುವುದೇ ಇಲ್ಲಿ ಗೆಲುವಿನ ಸೂತ್ರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more