Congress Women Candidates: ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಮಗಳು, ಸೊಸೆ: ಏನಿದು ಲೆಕ್ಕಾಚಾರ?
ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕರ್ನಾಟಕದ 17 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಈ ಹಿಂದೆ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿತ್ತು.
ಈಗ ಪ್ರಕಟಗೊಂಡಿರುವ 17 ಕ್ಷೇತ್ರಗಳ ಪೈಕಿ ದಾವಣಗೆರೆಯಿಂದ ಸಚಿವ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್, ಬಾಗಲಕೋಟೆಯಿಂದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ, ಬೆಂಗಳೂರು ದಕ್ಷಿಣದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ಉತ್ತರ ಕನ್ನಡದಿಂದ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳಕರ್ ಅವರ ಪತ್ನಿ ಡಾ.ಅಂಜಲಿ ನಿಂಬಾಳಕರ್, ಚಿಕ್ಕೋಡಿಯಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ಸುದೀರ್ಘ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್ ಸುಮಾರು ಹೊಸ ಮುಖಗಳಿಗೆ ಮಣೆ ಹಾಕಿದ್ದು ಅದರಲ್ಲೂ ವಿಶೇಷವಾಗಿ ರಾಜಕೀಯ ಗಣ್ಯರ ಮಗಳು, ಸೋಸೆ, ಪತ್ನಿಗೆ ಟಿಕೆಟ್ ಘೋಷಿಸಿರುವುದು ಭಾರೀ ಕುತೂಹಲ ಮೂಡಿಸಿದೆ. ಹಿಂದೆ ಕೊಂಚ ರಾಜಕೀಯದಲ್ಲಿ ಗುರುತಿಸಿಕೊಂಡ ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ ಹಾಕಿದರೂ ಈ ಬಾರಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬಿದ್ದಿಲ್ಲ. ಸಾಕಷ್ಟು ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಐದು ಮಹಿಳಾ ಮಣಿಗಳಿಗೆ ಟಿಕೆಟ್ ಘೋಷಿಸಿದೆ. ಹಾಗಾದರೆ ಈ ಅಭ್ಯರ್ಥಿಗಳ ವಿವರ ತಿಳಿಯೋಣ.

ದಾವಣಗೆರೆ: ಡಾ.ಪ್ರಭಾ ಮಲ್ಲಿಕಾರ್ಜುನ್
ಕಾಂಗ್ರೆಸ್‌ಗೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ, ಡಾ ಪ್ರಭಾ (47 ವರ್ಷ) ವೃತ್ತಿಯಲ್ಲಿ ದಂತ ವೈದ್ಯ. ಪ್ರತಿ ಚುನಾವಣೆಯಲ್ಲಿ ಪತಿ ಮತ್ತು ಮಾವ ಶಾಮನೂರು ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿ. ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆಯಾಗಿದ್ದು, ಎಸ್ ಎಸ್,ಕೇರ್ ಟ್ರಸ್ಟ್‌ನ ಲೈವ್‌ಟ್ರಸ್ಟಿಯಾಗಿ ಉಚಿತ ಡಯಾಲಿಸಿಸ್ ಸೇವೆ. ಸ್ತನ ಕ್ಯಾನ್ಸರ್ ಕುರಿತು ಜಾಗೃತಿ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯ, ತಾಯಂದಿರು ಮತ್ತು ಮಕ್ಕಳಲ್ಲು ಸುಧಾರಿತ ಘೋಷಣೆ ಮತ್ತು ವಿದ್ಯಾರ್ಥಿ ವೇತನ, ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಗಮನ ಸೆಳೆದಿದ್ದಾರೆ.

ಬಾಗಲಕೋಟೆ: ಸಂಯುಕ್ತಾ ಪಾಟೀಲ
ಮೂಲತ: ವಿಜಯಪುರ ಜಿಲ್ಲೆಯ ಸಂಯುಕ್ತಾ ಪಾಟೀಲ 30 ವರ್ಷದವರಾಗಿದ್ದು, ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿಯಾಗಿದ್ದಾರೆ. ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದು, ತಂದೆಯ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕಿ, ವಿಜಯಪುರ ಜಿಲ್ಲಾ ಕೋಳಿ ಸಾಕಾಣೆ, ಮಾರುಕಟ್ಟೆ ಸಂಘದ ಅಧ್ಯಕ್ಷೆ, ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಬೆಂಗಳೂರು ದಕ್ಷಿಣ: ಸೌಮ್ಯಾ ರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ 2018ರಿಂದ 23ರವರೆಗೆ ಜಯನಗರ ಕ್ಷೇತ್ರದ ಶಾಸಕಿಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿ.ಕೆ.ರಾಮಮೂರ್ತಿ ವಿರುದ್ಧ ಕೇವಲ 16 ಮತಗಳ ಅಂತರದಿಂದ ಪರಾಭವಗೊಂಡರು. ಸದ್ಯ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಇವರು ವಿದೇಶದಲ್ಲಿ ವ್ಯಾಸಾಂಗ ಮಾಡಿದ್ದು, ನ್ಯೂಯಾರ್ಕ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪರಿಸರ ಸಂಬಂಧಿ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಉತ್ತರ ಕನ್ನಡ: ಡಾ.ಅಂಜಲಿ ನಿಂಬಾಳಕರ್
48 ವರ್ಷದ ಡಾ. ಅಂಜಲಿ ಮಹಾರಾಷ್ಟ್ರ ಮೂಲದವರು. ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ ಚವ್ವಾಣ ಸಂಭಂಧಿಯಾಗಿದ್ದು. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳಕರ್ ಅವರ ಪತ್ನಿ. 2013ರಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಬಂಡಾಯವಾಗಿ ಸ್ಪರ್ಧಿಸಿ 17,686 ಮತ ಪಡೆದು ಸೋತರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಶಾಸಕರಾದರು. 2023ರಲ್ಲಿ ಸೋತಿದ್ದಾರೆ. ಸಚಿವ ಸತೀಶ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ.

ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ
ಸತೀಶ್ ಶುಗರ್ಸ್, ಬೆಳಗಾವಿ ಶುಗರ್ಸ್ ಸೇರಿದಂತೆ ಒಂಬತ್ತು ಸಂಸ್ಥೆಗಳಲ್ಲಿ ನಿರ್ದೇಶಕಿಯಾಗಿರುವ 27 ವರ್ಷದ ಪ್ರಿಯಾಂಕಾ ಜಾರಕಿಹೊಳಿ ಎಂಬಿಎ ಪದವೀಧರೆಯಾಗಿದ್ದಾರೆ. ತಂದೆ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಹಾಗೂ ರಾಜ್ಯದ ಪ್ರಭಾವಿ ಸಚಿವರು. ಇವರ ಚಿಕ್ಕಪ್ಪ ದೊಡ್ಡಪ್ಪ ಎಲ್ಲರೂ ರಾಜಕೀಯದಲ್ಲಿ ಪ್ರಭಾವಿಗಳು. ಜಾರಕಿಹೊಳಿ ಕುಟುಂಬದಿಂದ ರಾಜಕೀಯ ಪ್ರವೇಶಿಸಿದ ಮೊದಲ ಯುವತಿ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ತಂದೆ ಸತೀಶ್ ಜಾರಕಿಹೊಳಿ ಪರ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪ್ರಚಾರದ ಮೂಲಕ ರಾಜಕೀಯಕ್ಕೆ ಹೆಜ್ಜೆ ಹಾಕಿದ್ದರು.












Click it and Unblock the Notifications