ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಪೂಜಾ ವಸ್ತ್ರಾಕರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನು ಅಪಹಾಸ್ಯ ಮಾಡುವ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
'ವಸೂಲಿ ಟೈಟಾನ್ಸ್' ಎನ್ನುವ ಶೀರ್ಷಿಕೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ತಂಡದಂತೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ಜಾರಿ ನಿರ್ದೇಶನಾಲಯ (ಇ.ಡಿ) ಎಂದು ಹೆಚ್ಚುವರಿ ಶೀರ್ಷಿಕೆ ನೀಡಿದ್ದಾರೆ.

ಅವರ ಇನ್‌ಸ್ಟಾಗ್ರಾಂ ಪೋಸ್ಟ್ ವ್ಯಾಪಕವಾಗಿ ವೈರಲ್ ಆದ ಬಳಿಕ, ಪೂಜಾ ವಸ್ತ್ರಾಕರ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆಯೇ ಅಥವಾ ಬೇರೆ ಏನಾದರೂ ತಪ್ಪಾಗಿದೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಅವರು ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಸಖತ್ ವೈರಲ್ ಆದ ಪೋಸ್ಟ್
ಪೂಜಾ ವಸ್ತ್ರಾಕರ್ ಅವರ ಪೋಸ್ಟ್ ವ್ಯಾಪಕ ವೈರಲ್ ಆಗಿದೆ. ಅವರ ಪೋಸ್ಟ್‌ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಪೂಜಾ ಅವರ ಪೋಸ್ಟ್‌ಗೆ ಕಿಡಿ ಕಾರಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಮಾತ್ರವಲ್ಲದೆ, ಎಕ್ಸ್‌ನಲ್ಲಿ ಕೂಡ ವ್ಯಾಪಕ ವೈರಲ್ ಆಗಿದ್ದು, ಪೂಜಾ ವಸ್ತ್ರಾಕರ್ ಅವರ ಹೆಸರು ಟ್ರೆಂಡಿಂಗ್‌ನಲ್ಲಿದೆ.
ಕ್ಷಮೆ ಕೇಳಿದ ವಸ್ತ್ರಾಕರ್
ಪೋಸ್ಟ್ ಡಿಲೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪೂಜಾ ವಸ್ತ್ರಾಕರ್ ಕ್ಷಮೆ ಯಾಚಿಸಿದ್ದಾರೆ. ನನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಆಕ್ಷೇಪಾರ್ಹ ಚಿತ್ರವೊಂದು ಪೋಸ್ಟ್ ಆಗಿದೆ. ನನ್ನ ಗಮನಕ್ಕೆ ಬಾರದೆ ಈ ರೀತಿ ಅವಘಡ ಸಂಭವಿಸಿದೆ. ನಮ್ಮ ಪ್ರಧಾನಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ನನ್ನಿಂದ ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಪೂಜಾ ವಸ್ತ್ರಾಕರ್ ಮಧ್ಯಪ್ರದೇಶದ ಬಿಸ್ಲಾಪುರದಲ್ಲಿ ಜನಿಸಿದರು. ಭಾರತ ತಂಡಕ್ಕಾಗಿ ಆಡುವ ಅವರು, ಆಲ್‌ರೌಂಡರ್ ಆಗಿದ್ದಾರೆ. ಭಾರತಕ್ಕಾಗಿ 3 ಟೆಸ್ಟ್, 30 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುತ್ತಾರೆ. 2023ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗುವಲ್ಲಿ ಪೂಜಾ ವಸ್ತ್ರಾಕರ್ ಅವರ ಪಾತ್ರ ಪ್ರಮುಖವಾಗಿತ್ತು.
ವಸ್ತ್ರಾಕರ್ ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಂಡಕ್ಕಾಗಿ ಕೊಡುಗೆ ನೀಡುತ್ತಿದ್ದು, ಭವಿಷ್ಯದ ಭರವಸೆಯ ಆಲ್‌ರೌಂಡರ್ ಎಂದೇ ಪರಿಗಣಿಸಲಾಗಿದೆ. ಅವರು ಮಹಿಳಾ ಬಿಗ್ ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2024ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅವರು ಕೇವಲ 55 ರನ್ ಗಳಿಸಿದ್ದಾರೆ, 2 ವಿಕೆಟ್ ಮಾತ್ರ ಪಡೆದರು, ಅವರಿಂದ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಪಂದ್ಯಾವಳಿಯಿಂದಲೇ ಹೊರಬಿದ್ದಿತು.












Click it and Unblock the Notifications