Shreyanka Patil: ಶ್ರೇಯಾಂಕಾ ಪಾಟೀಲ್‌ಗೆ ಹೂಮಳೆಯ ಸ್ವಾಗತ
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚು ಹರಿಸಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಆರ್ ಸಿಬಿ ತಂಡಕ್ಕೆ ಚೊಚ್ಚಲ ಕಪ್ ತಂದುಕೊಡುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಮಹಿಳಾ ಪ್ರೀಮಿಯರ್ ಬಳಿಕ ಮೊದಲ ಬಾರಿಗೆ ಸ್ವಗ್ರಾಮಕ್ಕೆ ಭೇಟಿ ನೀಡಿದ ಕನ್ನಡತಿಗೆ ಹೂಮಳೆಯ ಸ್ವಾಗತ ಸಿಕ್ಕಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಗ್ರಾಮದ ಕೋಳಕೂರ ಗ್ರಾಮಕ್ಕೆ ಶ್ರೇಯಾಂಕಾ ಪಾಟೀಲ್ ಭೇಟಿ ನೀಡಿದ್ದು, ಗ್ರಾಮಸ್ಥರು, ಅಭಿಮಾನಿಗಳು ಹೂಮಳೆಯ ಸ್ವಾಗತ ನೀಡಿದ್ದಾರೆ. ಗ್ರಾಮದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಶ್ರೇಯಾಂಕಾ ಅವರಿಗೆ ಗ್ರಾಮಸ್ಥರು ಸನ್ಮಾನ ಮಾಡಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೇಯಾಂಕಾ ಪಾಟೀಲ್, ಬಾಲ್ಯದಲ್ಲಿ ಗ್ರಾಮದಲ್ಲಿ ತಾವು ಕಳೆದ ದಿನಗಳನ್ನು ನೆನಪು ಮಾಡಿಕೊಂಡರು. ಶಾಲೆಗೆ ರಜೆ ಇದ್ದಾಗ ನನ್ನ ತಾತ ನನ್ನನ್ನು ಕೋಳಕೂರಗೆ ಕರೆದುಕೊಂಡು ಬರ್ತಿದ್ರು, ಈಗ ಮತ್ತೆ ಇಲ್ಲಿನ ಜನರನ್ನು ನೋಡಿ ಖುಷಿ ಆಯ್ತು ಎಂದು ಉತ್ತರ ಕರ್ನಾಟಕದ ಭಾಷೆಯಲ್ಲೇ ಮಾತನಾಡಿದರು.
ತೆರೆದ ವಾಹನದಲ್ಲಿ ಮೆರವಣಿಗೆ
ಊರಿಗೆ ಬಂದ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿಯನ್ನು ಗ್ರಾಮಸ್ಥರು ಸಂಭ್ರಮದಿಂದಲೇ ಬರಮಾಡಿಕೊಂಡರು. ತೆರೆದ ವಾಹನದಲ್ಲಿ ಶ್ರೇಯಾಂಕಾ ಪಾಟೀಲ್‌ರನ್ನು ಮೆರವಣಿಗೆ ಮಾಡಲಾಯಿತು, ಹಾದಿಯ ತುಂಬಾ ಯುವ ಆಟಗಾರ್ತಿಗೆ ಹೂಮಳೆ ಸುರಿಸುವ ಮೂಲಕ ಗ್ರಾಮಸ್ಥರು, ಅಭಿಮಾನಿಗಳು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಮಕ್ಕಳಿಗೆ ವಿಶೇಷ ಸಲಹೆ ನೀಡಿದ ಶ್ರೇಯಾಂಕಾ, ಯಾವ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರೂ, ಶಿಸ್ತು, ಶ್ರದ್ಧೆಯನ್ನು ಬಿಡಬೇಡಿ. ಶ್ರದ್ಧೆಯಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಶ್ರೇಯಾಂಕಾ ಪಾಟೀಲ್ ಅವರಿಗೆ ಕಲಬುರಗಿ ಜಿಲ್ಲಾಡಳಿತದಿಂದ ಕೂಡ ಸನ್ಮಾನ ಮಾಡಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ ಅಧಿಕಾರಿಗಳು ಜಿಲ್ಲೆಯ ಹೆಮ್ಮೆಯ ಆಟಗಾರ್ತಿಗೆ ಸನ್ಮಾನ ಮಾಡಿದರು.
ಲೋಕಸಭಾ ಚುನಾವಣೆ ಮುಂದಿರುವ ಕಾರಣ ಶ್ರೇಯಾಂಕಾ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪರ್ಪಲ್ ಕ್ಯಾಪ್ ವಿಜೇತ ಆಟಗಾರ್ತಿ
ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೇಯಾಂಕಾ ಪಾಟೀಲ್ 13 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಬೆರಳಿನ ಗಾಯಕ್ಕೆ ತುತ್ತಾಗಿರುವ ಅವರು ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಯಯಲ್ಲಿ ಭಾರತ ತಂಡಕ್ಕಾಗಿ ಆಡುವ ಸಾಧ್ಯತೆ ಇದೆ.












Click it and Unblock the Notifications