SWR: ರೈಲ್ವೆ ಪ್ರಯಾಣಿಕರ ಪ್ರಯಾಣ ಮತ್ತಷ್ಟು ಸೇಫ್: ಯಾವೆಲ್ಲ ಭದ್ರತೆ ಹೆಚ್ಚಿಸಲಾಗಿದೆ, ತಿಳಿಯಿರಿ
ಹುಬ್ಬಳ್ಳಿ, ಮಾರ್ಚ್ 24: ಕಡಿಮೆ ದರ ಪ್ರಯಾಣ ಸೇವೆ ಎಂದರೆ ಅದು ರೈಲು ಪ್ರಯಾಣ. ಆದರೆ ಇಲ್ಲಿ ಅದೆಷ್ಟು ಸೇಫ್ ಎಂಬ ವಿಚಾರ ಹಲವರಲ್ಲಿರುತ್ತದೆ. ಇಂತಹ ಭಾವನೆ ದೂರ ಮಾಡಲು ಅದರಲ್ಲಿ ಮಹಿಳಾ ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ನೈಋತ್ಯ ರೈಲ್ವೆ ವಲಯವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರ ಪೂರ್ಣ ಮಾಹಿತಿ ಇಲ್ಲಿದೆ.
ನೈಋತ್ಯ ರೈಲ್ವೆ ವಲಯವು ತನ್ನ ವ್ಯಾಪ್ತಿಯ ಮಹಿಳೆಯರು ಸೇರಿದಂತೆ ಎಲ್ಲ ವಿಧದ ಪ್ರಯಾಣಿಕರಿಗೆ ಹೆಚ್ಚು ಭದ್ರತೆ ಒದಗಿಸಲು ಮುಂದಾಗಿದೆ. ಅದಕ್ಕಾಗಿ ಆರ್ ಪಿಎಫ್ ಮತ್ತು ಸರ್ಕಾರಿ ರೈಲ್ವೆ ಪೊಲೀಸರನ್ನು ಒಳಗೊಂಡ ರೈಲು ಬೆಂಗಾವಲುಗಳ ತಂಡಗಳನ್ನು ಭದ್ರತೆಗಾಗಿ ನಿಯೋಜಿಸಿದೆ. ಇವರು ಮಹಿಳಾ ಪ್ರಯಾಣಿಕರ ಮೇಲೆ ನಿಗಾ ಇಡಲಿದ್ದಾರೆ.

ನೈಋತ್ಯ ರೈಲ್ವೆಯಿಂದ ನಿತ್ಯ 202 ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತವೆ. ಇದರಲ್ಲಿ 35-40 ರೈಲುಗಳನ್ನು ಆರ್‌ಪಿಎಫ್ ಪಡೆಯು ಬೆಂಗಾವಲು ಮಾಡುತ್ತದೆ ಮತ್ತು 69-70 ರೈಲುಗಳನ್ನು ಜಿಆರ್‌ಪಿ ಪಡೆಯು ಬೆಂಗಾವಲು ಮಾಡುತ್ತದೆ. ನಿತ್ಯ ಶೇಕಡಾ 50ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬೆಂಗಾವಲು ಪಡೆ ಕಾರ್ಯನಿರ್ವಹಿಸುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
228 ನಿಲ್ದಾಣ, 2700 ಸಿಸಿಟಿವಿ ಅಳವಡಿಕೆ
ಭದ್ರತೆಯನ್ನು ಹೆಚ್ಚಿಸಲು ನೈಋತ್ಯ ರೈಲ್ವೆಯ ನಿಲ್ದಾಣಗಳಲ್ಲಿ 835 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ 228 ನಿಲ್ದಾಣಗಳಲ್ಲಿ ಅಂದಾಜು 2,700 ಸಿಸಿಟಿವಿ ಕ್ಯಾಮೆರಾಗಳ ಅಳವಡಿಸುವ ಯೋಜನೆ ಇದೆ.
ಇನ್ನೂ ಯಾವುದೇ ರೈಲ್ವೆಯಲ್ಲಿ ಹಿಳೆಯರಿಗೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುವ ಯಾವುದೇ ಅನಧಿಕೃತ ಪುರುಷರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಮಹಿಳೆಯರು ಕಾಯ್ದಿರಿಸಿದ ಬೋಗಿಗಳಲ್ಲಿ ಪುರುಷ ಪ್ರಯಾಣಿಕರ ಪ್ರಕರಣಗಳು 2022ರಲ್ಲಿ 88 ಪ್ರಕರಣಗಳು ದಾಖಲಾಗಿದ್ದವು.

ಹೆಣ್ಮಕ್ಕಳು, ಮಕ್ಕಳ ಸುರಕ್ಷತೆಗೆ ಆದ್ಯತೆ
ಈ 88 ಪ್ರಕರಣಗಳಿಂದ ಇಲಾಖೆಯು 18,450 ರೂಪಾಯಿಗಳ ದಂಡ ಸಂಗ್ರಹಿಸಲಾಗಿದೆ. ಇಂತದ್ದೆ ಪ್ರಕರಣಗಳು 2023ರಲ್ಲಿ 145 ದಾಖಲಾಗಿದ್ದು, ಅವುಗಳಿಂದ ರೈಲ್ವೆ ಇಲಾಖೆಗೆ 25,500 ರೂಪಾಯಿ ಹಣ ದಂಡದ ರೂಪದಲ್ಲಿ ಸಂಗ್ರಹವಾಗಿದೆ.
ಏಕಾಂಗಿ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವುದರ ಜೊತೆಗೆ, ಆಪರೇಷನ್ ನನ್ನೆ ಫರಿತ್ತೆ ಅಡಿ ರೈಲಿನಲ್ಲಿ ಪ್ರಯಾಣಿಸುವ ಅಪ್ರಾಪ್ತ ಮಕ್ಕಳ ಸುರಕ್ಷತೆಗೂ ಆದ್ಯತೆ ನೀಡುತ್ತದೆ. 2022 ರಲ್ಲಿ ಒಟ್ಟು 169 ಬಾಲಕಿಯರು ಮತ್ತು 709 ಬಾಲಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. 2023 ರಲ್ಲಿ 81 ಬಾಲಕಿಯರು ಮತ್ತು 325 ಬಾಲಕರನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಕೇಂದ್ರಗಳಿಗೆ ಹಸ್ತಾಂತರಿಸಲಾಗಿದೆ.
113 ಕಳ್ಳತನ ಪತ್ತೆ, ಚಿನ್ನಾಭರಣ ಜಪ್ತಿ
ಆರ್‌ಪಿಎಫ್ ತಂಡವು 2022ರಲ್ಲಿ 113 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಒಟ್ಟು 74,797 ರೂ.ಗಳ ಮೌಲ್ಯದ ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2023 ರಲ್ಲಿ 33 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದೆ ಮತ್ತು 2,81,599 ರೂ.ಗಳ ಮೌಲ್ಯದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.
ಹಾಲುಣಿಸುವ ತಾಯಂದಿರಿಗೆ ಸುರಕ್ಷಿತ ಮತ್ತು ಖಾಸಗಿ ಸ್ಥಳವನ್ನು ಒದಗಿಸಲು ಪ್ರಮುಖ ರೈಲು ನಿಲ್ದಾಣಗಳಲ್ಲಿ ನರ್ಸಿಂಗ್ ಪಾಡ್‌ಗಳನ್ನು ಸ್ಥಾಪಿಸಲಾಗಿದೆ. ನೈರ್ಮಲ್ಯದ ಮಹತ್ವ ತಿಳಿಸಲು ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್‌ಗಳನ್ನು ಮಹಿಳೆಯರ ಶೌಚಾಲಯಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಾಯುವ ಕೊಠಡಿಗಳ ಬಳಿ ಸ್ಥಾಪಿಸಲಾಗಿದೆ. ಇದೊಂದು ಮುಂಜಾಗ್ರತಾ ಕ್ರಮವಾಗಿ ಒಳ್ಳೆಯ ನಿರ್ಧಾರವಾಗಿದೆ.
ರೈಲ್ವೆ ಹಾಲಿ ಪ್ರಯಾಣಕ್ಕಿಂತಲೂ ಹೆಚ್ಚಿನ ಭದ್ರತೆ ಮುಂದಿನ ದಿನಗಳಲ್ಲಿ ಸಿಗಲಿದೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ನಿಶ್ಚಿಂತೆಯಿಂದ ನೈಋತ್ಯ ರೈಲ್ವೆಗಳಲ್ಲಿ ಸಂಚರಿಸಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications