ಜಲ ಜೀವನ್ ಮಿಷನ್ ಯೋಜನೆ ವ್ಯರ್ಥ: ಈ ವೃದ್ದೆಗೆ ಕಣ್ಣೀರೇ ಗತಿ
ಬೆಂಗಳೂರು, ಏಪ್ರಿಲ್, 18: ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದ ಗುಂಗಿನಲ್ಲಿ ಮುಳುಗಿದ್ದಾರೆ. ಇನ್ನು ಹಲವೆಡೆ ಈಗಾಗಲೇ ಪ್ರಚಾರದ ವೇಳೆ ತಮ್ಮ ಸಮಸ್ಯೆಗಳನ್ನು ಈಡೇರಿಸಿದರೆ ಮಾತ್ರ ಮತದಾನ ಮಾಡುತ್ತೇವೆ, ಇಲ್ಲಂದ್ರೆ ಮತದಾನ ಬಹಿಸ್ಕರಿಸುವುದಾಗಿಯೂ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ ಉದಾಹರಣೆಗಳಿವೆ. ಹಾಗೆಯೇ ಶಾನುಭೋಗನಹಳ್ಳಿಯಲ್ಲೊಬ್ಬ ಮಹಿಳೆ ನರೇಂದ್ರ ಮೋದಿಯವರ ಪ್ರಮುಖ ಕಾರ್ಯಕ್ರಮ ಜಲ ಜೀವನ್ ಮಿಷನ್ ಬಗ್ಗೆ ಅಸಮಾಧನ ಹೊರಹಾಕಿದ ಘಟನೆ ಇದೀಗ ನಡೆದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಮುಖ ಯೋಜನೆಯಾದ ಜಲ ಜೀವನ್ ಮಿಷನ್ ಅಡಿಯಲ್ಲಿ ಸರ್ಕಾರವು ಗ್ರಾಮದಲ್ಲಿ ನಲ್ಲಿಗಳನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಿದ್ದು, ಬಹುತೇಕ ಹಳ್ಳಿಗಳಲ್ಲಿ ಜನರು ಅವುಗಳನ್ನು ಮೋದಿ ನಲ್ಲಿ ಅಂತಲೇ ಕರೆಯುತ್ತಾರೆ.

ಇನ್ನು ಇದೀಗ ಮಳೆಯಿಲ್ಲದೆ, ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅಷ್ಟೇ ಅಲ್ಲದೆ, ಬಹತೇಕ ಭಾಗಗಳಲ್ಲಿ ಬೋರ್‌ವೆಲ್‌ಗಳಲ್ಲೂ ನೀರು ಇಲ್ಲದಂತಾಗಿದೆ. ಎಷ್ಟೋ ಹಳ್ಳಿಗಳಲ್ಲಿ ಇಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಇನ್ನು ಈ ಹಿಂದೆಯೇ ನೀರಿದ್ದಾಗಲೇ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಹಳ್ಳಿಗಳಲ್ಲಿ ಮನೆಗಳಿಗೆ ನಲ್ಲಿ ಅಳವಡಿಕೆ ಮಾಡಲಾಗಿತ್ತು. ಆದರೆ ನೀರು ಮಾತ್ರ ಬರುತ್ತಿರಲಿಲ್ಲ. ಇನ್ನು ಇದೀಗ ಮಳೆ ಕೊರತೆ ಎದುರಾಗಿದ್ದು, ಮಳೆಯಿಲ್ಲದೆ ನೀರೆಲ್ಲಿ ಬರುತ್ತದೆ ಎನ್ನುವ ಆಕ್ರೋಶಗಳು ಕೂಡ ಭುಗಿಲೆದ್ದಿವೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಗಡಿ ಸಮೀಪದ ಶಾನುಭೋಗನಹಳ್ಳಿ ಎಂಬ ಪುಟ್ಟ ಗ್ರಾಮವು 160ಕ್ಕೂ ಹೆಚ್ಚು ಮನೆಗಳನ್ನು ಹೊಂದಿದ್ದು, ಇಲ್ಲಿ 700 ಜನರಿದ್ದಾರೆ. ಆದರೆ ಇಂತಹ ಯೋಜನೆ ಜಾರಿಯದ್ದರೂ ಕೂಡ ಈ ಹಳ್ಳಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎನ್ನುವ ಆರೋಪಗಳ ಕೇಳಿಬಂದಿವೆ.
"ಕಳೆದ ವರ್ಷ ಕೆಲವರು ಬಂದು ಈ ನಲ್ಲಿಗಳನ್ನು ಅಳವಡಿಸಿದರು, ಆದರೆ ಅಂದಿನಿಂದ ನಮಗೆ ನೀರು ಬಂದಿಲ್ಲ. ಎರಡು ದಿನಕ್ಕೊಮ್ಮೆ ನೀರು ಸಿಗುತ್ತದೆ, ಅದೂ ಒಂದು ಗಂಟೆ ಮಾತ್ರ. ಅಷ್ಟರೊಳಗೆ ನಾವು ನಮ್ಮ ಮಡಕೆ ಮತ್ತು ಪಾತ್ರೆಗಳನ್ನು ತುಂಬಿಸಬೇಕಾಗುತ್ತದೆ. ಇಲ್ಲ ಅಂದರೆ ನೀರಿಗೆ ಪರದಾಡಬೇಕಾಗುತ್ತದೆ. ಇನ್ನು ಇದೀಗ ಮಳೆಯಿಲ್ಲದೆ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಗ್ರಾಮದಲ್ಲಿ ನೀರಿನ ಮೂಲಗಳು ಬತ್ತಿ ಹೋಗಿವೆ" ಎಂದು ಶಾನುಭೋಗನಹಳ್ಳಿಯಲ್ಲಿ 60 ವರ್ಷದ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ ಅಂತಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಳಿಕ ಸ್ಥಳೀಯ ಅಧಿಕಾರಿಗಳು ನಿಮ್ಮ ಮನೆ ಮುಂದೆ ನಲ್ಲಿ ಅಳವಡಿಸಿ, ಪ್ರತಿದಿನ ನೀರು ಸರಬರಾಜು ಮಾಡುವ ಭರವಸೆ ನೀಡಿದಾಗ ಸ್ವಲ್ಪ ಮಟ್ಟಿಗೆ ಸಂತಸವಾಯಿತು. ಆದರೆ ಇದುವರೆಗೂ ನಲ್ಲಿಯಿಂದ ಒಂದು ಹನಿ ನೀರು ಬಂದಿಲ್ಲ, ಅವರು ಕೊಟ್ಟ ಭರವಸೆ ಸುಳ್ಳಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ.
ಶಾನುಭೋಗನಹಳ್ಳಿ ಸಮೀಪದ ಇತರ ಗ್ರಾಮಗಳ ಜನರು ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ನಲ್ಲಿ ನೀರನ್ನು ಒದಗಿಸುವ ಈ ಉಪಕ್ರಮವನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (DDWS) ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಜಾರಿಗೊಳಿಸಿದೆ.
2024ರ ವೇಳೆಗೆ ದೇಶದಾದ್ಯಂತ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವ ಗುರಿ ಹೊಂದಲಾಗಿತ್ತು. ಆದರೆ, ಯೋಜನೆ ಅನುಷ್ಠಾನದಲ್ಲಿ ನಿಧಾನಗತಿಯ ಪ್ರಗತಿಗೆ ಕೇಂದ್ರವು ರಾಜ್ಯ ಸರ್ಕಾರವನ್ನು ದೂಷಿಸುತ್ತದೆ. ಇದು ಜನರಿಗೆ ನೀರು ಸಿಗದಿರಲು ಪ್ರಮುಖ ಕಾರಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಶಾನುಭೋಗನಹಳ್ಳಿಯು ತಿಪ್ಪಗೊಂಡನಹಳ್ಳಿ ಜಲಾಶಯದಿಂದ ತುಂಬಾ ಸಮೀಪದಲ್ಲಿದೆ. ಅಲ್ಲಿಂದ ಬೆಂಗಳೂರಿನ ಹೆಚ್ಚಿನ ಭಾಗಗಳಿಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಈ ಬಾರಿ ಮಳೆಯ ಕೊರತೆ ಹಿನ್ನೆಲೆ ಜಲಾಶಯಕ್ಕೆ ನೀರಿನ ಹರಿವು ಕಡಿಮೆಯಾಗಿದೆ. ಜಲಾಶಯ ಬತ್ತಿ ಹೋಗಿದ್ದು, ಗ್ರಾಮದ ಬೋರ್‌ವೆಲ್‌ಗಳಲ್ಲಿ ಕೂಡ ನೀರು ಬರಂತಾಗಿದೆ ಎನ್ನುವುದು ಅಧಿಕಾರಿಗಳ ಹೇಳಿಕೆಯಾಗಿದೆ.
ಇನ್ನು ಶಾನುಭೋಗನಹಳ್ಳಿಯ ರೈತ ರಂಗಪ್ಪ ಮಾತನಾಡಿ, ನಮ್ಮ ಗ್ರಾಮದಲ್ಲಿ 7 ವರ್ಷಗಳಿಂದಲೂ ಸರಿಯಾಗಿ ಮಳೆಯಾಗುತ್ತಿಲ್ಲ. ಈ ಹಿಂದೆ ನಾವು ಬಾವಿಗಳನ್ನು ಅಗೆದರೆ ಕೆಲವೇ ಅಡಿಗಳಲ್ಲಿ ಸುಲಭವಾಗಿ ನೀರು ಸಿಗುತ್ತಿತ್ತು. ಆದರೆ ಈಗ ನೀರು ಪಡೆಯಲು ಸುಮಾರು 700 ಅಡಿ ಕೊರೆಯಬೇಕಾದ ಪರಿಸ್ಥಿತಿ ಎದುರಾಗಿದ್ದು, ನೀರಿಗಾಗಿ ನಾವು ಈಗ ಬೋರ್‌ವೆಲ್‌ಗಳನ್ನು ಅವಲಂಬಿಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ತಾವು ಮಾಡಿದ ಯೋಜನೆಯೇ ಉಪಯೋಗಕ್ಕೆ ಬಾರದಾಂತಾಗಿದ್ದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎನ್ನುವ ಆರೋಪಗಳು ಜೋರಾಗಿ ಕೇಳಿಬರುತ್ತಿವೆ.












Click it and Unblock the Notifications