• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಶ್ತಿನ ಸಿಪಾಯಿ ನನ್ನಪ್ಪನ ಸೆನ್ಸ್ ಆಫ್ ಹ್ಯೂಮರ್ರು

By ಶ್ರೀನಾಥ್ ಭಲ್ಲೆ
|

ಜೂನ್ ಹದಿನೆಂಟು 2017 'ತಂದೆಯ ದಿನ'. ಕೆಲವರು ತಂದೆಯ ದಿನ ಎಂದರೆ ಹಲವರು ಇದು ವಿಶ್ವವೇ ಆಚರಿಸಿಸುವುದರಿಂದ 'ತಂದೆಯರ ದಿನ' ಎನ್ನುತ್ತಾರೆ. ಇರಲಿ ಬಿಡಿ ಜಗಕೆ ತಂದ ತಂದೆಯನ್ನು, ಜಗದ ತಂದೆಯನ್ನು ಒಟ್ಟಿಗೆ ನೆನೆದರಾಯ್ತು. ತಂದೆಯ ನಿಸ್ವಾರ್ಥ ಸೇವೆಯನ್ನು ನೆನಪಿಸಿಕೊಳ್ಳುವ ದಿನ. ಆತನ ಜೊತೆಗೆ ಇದ್ದವರು ತಂದೆಯೊಂದಿಗೆ ಸಂಭ್ರಮ ಆಚರಿಸಿಕೊಳ್ಳುವ ದಿನ. ಇದ್ದೂ ದೂರವಿದ್ದವರು ತಂದೆಗೆ ಕರೆ ಮಾಡಿ ತಮ್ಮ ಪ್ರೀತಿಯನ್ನು ತೋರುವ ದಿನ. ಇಲ್ಲದವರು ನೆನೆವ ದಿನ. ನನ್ನ ಪ್ರಕಾರ ತಂದೆ ಇಲ್ಲದವರು 'ನೆನೆವ' ದಿನ ಅಲ್ಲ ಯಾಕೆ ಅಂದರೆ ಮರೆತಿದ್ದರೆ ತಾನೇ ನೆನಪಿಸಿಕೊಳ್ಳುವುದು!

ನೀವು ಈ ಯಾವುದೇ ಗುಂಪಿಗೆ ಸೇರಿರಲಿ, ಒಂದು ನಿಮಿಷ ನಿಮ್ಮ ಕಣ್ಣು ಮುಚ್ಚಿ ಅಪ್ಪನನ್ನು ನೆನೆಯಿರಿ. ಅಪ್ಪನ ಬಗೆಗಿನ ನಿಮ್ಮ ನೆನಪನ್ನು ಆವಾಹನೆ ಮಾಡಿಕೊಳ್ಳಿ. ಆತನ ಜೊತೆಗಿನ ನೆನಪಿನ ದೋಣಿಯಲ್ಲಿ ಸಾಗುತ್ತಿದ್ದಂತೆಯೇ ನನ್ನ ಅನುಭವಗಳನ್ನು ಕಣ್ಣುಬಿಟ್ಟು ಓದಿ. ಎಷ್ಟೋ ಅನುಭವಗಳು ಒಂದೇ ರೀತಿಯಾಗಿದ್ದರೂ ಇರಬಹುದು ಅಲ್ಲವೇ? ಎಷ್ಟೇ ಆಗಲಿ ಅಪ್ಪ ಅಪ್ಪಾನೇ ತಾನೇ?

ಅಪ್ಪನ ಛಲ ನೋಡಿದ್ರೆ ನಾನು ಸಾಯಬಾರ್ದು ಅನ್ಸತ್ತೆ!

'ನಮ್ಮಪ್ಪ' ಅರ್ಥಾತ್ ನಾವು ಕರೆವಂತೆ 'ಅಣ್ಣ' ಒಬ್ಬ ಶಿಸ್ತಿನ ಸಿಪಾಯಿ. ಹತ್ತು ಪೈಸೆ ಕೊಟ್ಟವರಿಗೆ ಮಾತು ಕೊಟ್ಟ ಮೇಲೆ ಮತ್ತೊಬ್ಬರು ನೂರು ರೂಪಾಯಿ ಕೊಟ್ಟರೂ ಆ ಮೊದಲಿನವರಿಗೆ ಕೊಟ್ಟ ಮಾತಿನಿಂದ ದೂರ ಹೋಗುತ್ತಿರಲಿಲ್ಲ. ಬಿಳಿ ಪಂಚೆ ಬಿಳಿ ಷರಟು ಪ್ರಿಯ. ಪದರಂಗ ಬಿಡಿಸುವುದರಲ್ಲಿ ನಿಸ್ಸೀಮ. ಕೇರಂ ಬೋರ್ಡ್ ಆಡುವುದರಲ್ಲಿ ಸೂಪರ್. ಬಟ್ಟೆಬರೆ ಒಪ್ಪ ಓರಣವಾಗಿ ಇಟ್ಟುಕೊಳ್ಳುವಿಕೆ, ಆಯಾದಿನದ ಆಯ-ವ್ಯಯದ ಲೆಕ್ಕ, ರಸೀತಿಗಳನ್ನು ಚೊಕ್ಕವಾಗಿ ಶೇಖರಿಸುವುದು, ಸಮಯವನ್ನು ವ್ಯರ್ಥ ಮಾಡದಿರುವುದು, ಕಡಿಮೆ ನಿದ್ದೆ, ಸದ್ದಿನಿಂದ ದೂರ, ಬರಹಗಾರ, ಹಾಡುಗಾರ. ಐದು ಮಕ್ಕಳು ಮತ್ತು ಪತ್ನಿಯ ಬೇಕುಬೇಡಗಳನ್ನೂ ಏಕಹಸ್ತದ ಸಂಪಾದನೆಯಿಂದ ತೂಗಿಸಿಕೊಂಡೂ ಏನೆಲ್ಲಾ ಸಾಧನೆ ಮಾಡಿದ್ದೆಯೆಲ್ಲಾ ತಂದೆಯೇ, ಇವೆಲ್ಲ ಹೇಗೆ?

ನಮ್ಮಮ್ಮ ಹಂಚಿಕೊಂಡ ಒಂದು ಘಟನೆ. ಅಂದೂ ಎಲ್ಲ ರಾತ್ರಿಗಳಂತೆ ಅಮ್ಮ ನೆಮ್ಮದಿಯಿಂದ ನಿದ್ರಿಸುತ್ತಿದ್ದ ಸಮಯ. ಬೆಳಗಿನ ಎರಡು ಘಂಟೆ ಮೂವತ್ತು ನಿಮಿಷ. ನೀರವತೆಯೇ ತಾಂಡವವಾಡುತ್ತಿರುವ ವೇಳೆಯಲ್ಲಿ ಇದ್ದಕ್ಕಿದ್ದ ಹಾಗೆ ಒಂದು ಸೀಳು ದನಿ. ಧಿಗ್ಗನೆ ಎದ್ದ ಅಮ್ಮನಿಗೆ ಮೊದಲು ಲೈಟ್ ಹಾಕಿರುವುದು ತಿಳಿಯಿತು. ನಂತರ ಕಂಡಿದ್ದು ಬೀರು ತೆರೆದು ನಿಂತಿದ್ದ ಅಪ್ಪ. ಗೋದ್ರೇಜ್ ಬೀರುವಿನದ್ದೇ ಆ ಸೀಳು ದನಿ ಅಂತ ಆಗ ಅರಿವಾಯಿತು. ಏನೂ ಅರ್ಥವಾಗದೆ ಏನಾಯ್ತು ಎಂದಾಗ ಅಪ್ಪ ಹೇಳಿದ್ದು "ನಿದ್ದೆ ಬರಲಿಲ್ಲ, ಮಡಿಸಿಟ್ಟಿದ್ದ ಪಂಚೆಗಳನ್ನ ಬೀರುವಿನಲ್ಲಿ ಇಡ್ತಿದ್ದೆ" ಅಂದರಂತೆ! ಅಮ್ಮ ಏನ್ ಹೇಳಬೇಕು ಅಂತ ತಿಳೀದೆ ಸುಮ್ಮನಾದರು. ಈ ಪರಿಯ 'ಒಪ್ಪ'ವೇ?

ಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ

ಅದೊಂದು ರಾತ್ರಿ. ಮೊಬೈಲ್ ಬಿಡಿ, ಫೋನ್ ಕೂಡ ಇರಲಿಲ್ಲ ನಮ್ಮ ಮನೆಯಲ್ಲಿ. ಸುಮಾರು ಒಂದು ಘಂಟೆ ಸಮಯದಲ್ಲಿ ಕಾಲಿಂಗ್ ಬೆಲ್ ಸದ್ದು. ಮನೆಮಂದಿಗೆಲ್ಲ ಎಚ್ಚರವಾಯ್ತು. ಕಿಟಕಿಯಲ್ಲಿ ಯಾರು ಎಂದು ನೋಡಿ ಬಾಗಿಲು ತೆರೆದ ಅಪ್ಪನಿಗೆ ಸಿಕ್ಕ ಸುದ್ದಿ ಅವರಣ್ಣ (ಅಂದರೆ ನಮ್ಮ ದೊಡ್ಡಪ್ಪ) ತೀರಿಹೋದರೆಂದು. ಮಧ್ಯಪ್ರದೇಶದಲ್ಲಿನ ಒಂದು ಊರಿನಲ್ಲಿ ಇದ್ದ ದೊಡ್ಡಪ್ಪ ತೀರಿಕೊಂಡಿದ್ದರು. ತಕ್ಷಣ ಎದ್ದು ಹೋಗುವುದು ಅಸಾಧ್ಯದ ಮಾತು. ಇನ್ನೆಂದೂ ನೋಡಲಾರೆ ಎಂಬ ಅರಿವು ಮೂಡುತ್ತಿದ್ದಂತೆಯೇ ತೀವ್ರವಾದ ನೋವು ಅನುಭವಿಸಿದ್ದು ಅವರ ಮುಖದಲ್ಲಿ ಎದ್ದು ಕಂಡಿತ್ತು. ಅಣ್ಣ ಎಂದೂ ಕಣ್ಣೀರು ಹಾಕಿದ್ದು ನೋಡಿರಲಿಲ್ಲ, ಅಂದೂ ನೋಡಲಿಲ್ಲ ಬಿಡಿ. ಸ್ವಲ್ಪವೇ ಸಮಯದ ನಂತರ ಸುದ್ದಿ ತಂದವರ ಜೊತೆ 'ಓದಿದ್ದೇನು, ಎಲ್ಲಿ ಕೆಲಸ ಮಾಡುತ್ತಿರೋದು' ಇತ್ಯಾದಿ ಪ್ರಶ್ನೆಗಳನ್ನು ಮಾಡುತ್ತಾ ಕೂತರು. ಇದೇನಿದು? ಈ ಪ್ರಶ್ನೆಗಳನ್ನು ಕೇಳುವ ಸಮಯವಾ ಇದು ಎನ್ನುವಂತೆ ಮನಸ್ಸಿನಲ್ಲಿ ಮೂಡಿದ್ದು ನಿಜ. ಆದರೆ ತಮ್ಮ ದುಃಖವನ್ನು ಅಡಿಗಿಸುವ ಯತ್ನದಲ್ಲಿ ಇದ್ದರು ಎಂದು ಅಂದು ಅರ್ಥ ಆಗಲಿಲ್ಲ.

ಬೆಂಗಳೂರಿನವರಿಗೆ ನೀರಿನ ತೊಂದರೆ ಬಗ್ಗೆ ಹೊಸದಾಗಿ ಹೇಳೋದೇನಿದೆ. ಒಮ್ಮೆ ರಾತ್ರಿ ಹನ್ನೆರಡಕ್ಕೆ ನೀರು ಬಂದರೆ ಒಂದೆರಡು ದಿನ ಬಿಟ್ಟು ಮುಂಜಾನೆ ಮೂರಕ್ಕೆ. ಹೊತ್ತಿಲ್ಲ ಗೊತ್ತಿಲ್ಲ ಅಂತಾರಲ್ಲ ಹಾಗೆ. ಅಡುಗೆಮನೆಯಲ್ಲಿ ನಲ್ಲಿಯನ್ನು ತಿರುಗಿಸಿ ಕೆಳಗೆ ಸ್ಟೀಲ್ ಬಕೆಟ್ ಇಡುತ್ತಿದ್ದೆವು. ಪೈಪಿನಲ್ಲಿರೋ ಗಾಳಿಯನ್ನು ಊದಿಕೊಂಡು ಹೊರಗೆ ಬರುವ ತೆಳ್ಳನೆಯ ನೀರು ಬೀಳುವ ಸದ್ದಿಗೆ ಅಪ್ಪ ಎದ್ದಾಗ ನಾನು ಏಳುತ್ತಿದ್ದೆ. ಮನೆ ಮುಂದಿನ ಮೆಟ್ಟಿಲ ಮೇಲೆ ಅಪ್ಪ ನನಗೆ ಕಾವಲು. ಮನೆಯ ಹೊರಗಿನ ತಗ್ಗಿನಲ್ಲಿದ್ದ ನಲ್ಲಿಯಲ್ಲಿ ನೀರು ಹಿಡಿದುಕೊಂಡು ಮನೆ ಒಳಗೆ ನೀರು ತುಂಬಿಸುವ ಕೆಲಸ ನನ್ನದು. ಸಾವಧಾನವಾಗಿ ನೀರು ತುಂಬುವ ಸಮಯದಲ್ಲಿ ಏನೇನೋ ಮಾತುಗಳನ್ನು ಆಡಿದ್ದೇವೆ. ಹಲವಾರು ವಿಚಾರಗಳನ್ನು ಕಲಿತಿದ್ದೇನೆ. ಇಂಥದ್ದೇ ಒಂದು ಹಗಲಿನಲ್ಲಿ 'ಅಮ್ಮನಿಗೆ ನೋವು ಕೊಡದೇ ಇರೋ ಹಾಗೆ ನೋಡ್ಕೋ. ತಡ್ಕೊಳ್ಳೋ ಶಕ್ತಿ ಅವಳಿಗಿಲ್ಲ" ಅಂದಿದ್ದರು. ಯಾವ ವಿಚಾರಕ್ಕೆ ಈ ರೀತಿ ಹೇಳಿದ್ದರು ಎಂದು ಈಗಲೂ ನೆನಪಿಲ್ಲ.

ಅಪ್ಪ ನೀನೆ ನನ್ನ ಹೀರೋ: ಹ್ಯಾಪಿ ಫಾದರ್ಸ್ ಡೇ

ಲೆಕ್ಕ, ಖರ್ಚು ಎಂಬೆಲ್ಲ ವಿಚಾರಗಳಲ್ಲಿ ಬಹಳ ಕಟ್ಟುನಿಟ್ಟು. ಕೆಲವೊಮ್ಮೆ ಅತಿ ಎನಿಸುವಷ್ಟು. ಮೆಣಸಿನಪುಡಿ, ಹುಳಿಪುಡಿಗಳನ್ನು ಕುಟ್ಟಿ ಪುಡಿ ಮಾಡೋದು ಕಷ್ಟ ಎನಿಸಿ ಮಿಕ್ಸಿ ಖರೀದಿಗೆಂದು ಅಪ್ಪ-ಅಮ್ಮ ಅಂಗಡಿಗೆ ಹೋಗಿದ್ದರು. ರಾತ್ರಿ ವಾಪಸ್ ಬಂದಾಗ ಬರಿಗೈ. ನಮಗೆಲ್ಲ ಭಯಂಕರ ನಿರಾಸೆ. ಮಿಕ್ಸಿಯ ಬೆಲೆ ತಾವು ಅಂದುಕೊಂಡಿದ್ದಕ್ಕಿಂತ ನೂರು ರೂಪಾಯಿ ಹೆಚ್ಚು ಆಯಿತೆಂದು 'ಬೇಡ' ಎನಿಸಿ ವಾಪಸ್ ಬಂದಿದ್ದರು. ಆಮೇಲೆ ಮತ್ತೆ ಮಿಕ್ಸಿ ನಮ್ಮ ಮನೆಗೆ ಬರಲು ಒಂದು ತಿಂಗಳೇ ಹಿಡಿಯಿತು. ಖರ್ಚಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಾರ್ಡ್ ಉಜ್ಜಿ ಮುಂದೆ ಸಾಗೋ ದಿನಗಳಲ್ಲಿ ಇಂಥಾ ವಿಚಾರಗಳನ್ನು ಕೇಳಲೇ ಸೊಗಸು.

ವೃತ್ತಿಯಲ್ಲಿ ಡಿಸೈನ್ ಇಂಜಿನಿಯರ್ ಆಗಿದ್ದು ದಾಸ ಸಾಹಿತ್ಯ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೆಲವೊಮ್ಮೆ ಎಷ್ಟರ ಮಟ್ಟಿಗೆ ತಲ್ಲೀನರಾಗಿರುತ್ತಿದ್ದರು ಎಂದರೆ ದಾಸರ ಹೀಗೆ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಹೊರಟಾರೂ ಜಾಗ್ರತೆ ಎಂದು ಹತ್ತಿರದವರು ರೇಗಿಸುತ್ತಿದ್ದರು.

ಎಚ್.ಎ.ಎಲ್'ನಿಂದ ರಿಟೈರ್ ಆದ ಮೇಲೆ ವಿಶ್ರಾಂತಿಯ ಬದಲು ಇನ್ನೂ ಹೆಚ್ಚು ಬಿಜಿ ಆದರೂ. ಆ ದಿನಗಳ ಒಂದು ಸ್ವಾರಸ್ಯಕರ ಘಟನೆ ಹೀಗಿದೆ. ಒಮ್ಮೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಕತ್ತಲಾಗಿತ್ತು. ಮನೆ ಮುಂದೆ ನಿಂತು ಗಾಡಿ ಆಫ್ ಮಾಡಿ ಹೆಲ್ಮೆಟ್ ತೆಗೆದು ಒಮ್ಮೆ ತಲೆ ಇದೆಯಾ ನೋಡಿಕೊಂಡು ಮನೆಯ ಪಕ್ಕದ ಸಣ್ಣ ಗರಾಜ್'ಗೆ ಸೇರಿಸಿ ಮನೆ ಒಳಗೆ ಕಾಲಿರಿಸಿದೆ. ಮನೆಯಲ್ಲಿ ಅಪ್ಪ-ಅಮ್ಮನನ್ನು ಬಿಟ್ಟು ಬೇರಾರು ಇರಲಿಲ್ಲ. ಸಾಮಾನ್ಯವಾಗಿ ಏನೋ ಓದುತ್ತಾ ಕುಳಿತಿರುವ ಅಮ್ಮ ಸುಮ್ಮನೆ ಕೂತಿದ್ದರು. ಏನಾದರೂ ಬರೆಯುತ್ತಾ ಬಿಜಿ ಇರುವ ಅಪ್ಪ ಸುಮ್ಮನೆ ಕೂತಿದ್ದರು. ಅಲ್ಲೊಂದು ರೀತಿಯ ಮೌನ ಮನೆ ಮಾಡಿತ್ತು.

ಅಪ್ಪನ್ನ ಒಂದೇ ದಿನ ನೆನೆಯುವ ದೊಡ್ಡು ಸ್ಟುಪಿಡ್ಡುಗಳು!

ಅಮ್ಮನ ಪ್ರಶ್ನೆ 'ಆ ಹುಡುಗಿ ಯಾರು?' ಎಂಥಾ ಪ್ರಶ್ನೆ. ಹೆದರಿಕೆ ಆಯ್ತು! ಈಗಿನ ಏಳನೇ ತರಗತಿಯ ಮಕ್ಕಳೂ ಸಹಿಸದ ಪ್ರಶ್ನೆ ಆದರೆ ನನಗೆ ಮಾತ್ರ ಒಮ್ಮೆ ಯೋಚಿಸುವಂತೆ ಆಯಿತು. ಯಾವ ಏಳು ಸುತ್ತಿನ ಮಲ್ಲಿಗೆಯ ರಾಜಕುಮಾರಿ ನನ್ ಬೈಕಿನ ಹಿಂದಿನ ಸೀಟಲ್ಲಿ ಕೂತಿದ್ದಳು? ಭಾರದ ಅರಿವೇ ಆಗಲಿಲ್ಲ? ಅದು ಸರೀ, ಆ ಹುಡುಗಿ ಎಲ್ಲಿ? ಅಲ್ಲೀ ಇಲ್ಲೀ ನೋಡಿದೆ, ಎಲ್ಲೂ ಕಾಣಲಿಲ್ಲ. ಕೊನೆಗೆ "ಯಾವ ಹುಡುಗಿ?" ಅಂದೆ.

ವಿಷಯ ಇಷ್ಟು. ಎಲ್ಲಿಗೋ ಹೋಗಿದ್ದ ಅಪ್ಪ ಬಸ್ಸಿನಲ್ಲಿ ಬರುವಾಗ ನನ್ನನ್ನು ಮತ್ತು ನನ್ನ ಹಿಂದಿನ ಸೀಟಿನಲ್ಲಿ ಕೂತಿದ್ದ ಹೆಣ್ಣನ್ನೂ ನೋಡಿದ್ದರಂತೆ. ಮನೆಗೆ ಬಂದವರೇ ಅಮ್ಮನ ಎದುರು ಹೇಳಿಕೊಂಡು ನಾನು ಬರುವವರೆಗೂ ಕಾದಿದ್ದು ಅಮ್ಮನ ಮುಖಾಂತರ ತಮ್ಮ ಟೆನ್ಷನ್ ಅನ್ನು ಹೊರಗೆ ಚೆಲ್ಲಿದ್ದರು. ಕೆಲಸಕ್ಕೆ ಅಂತ ಹೋದೋನು ಬೆಳಿಗ್ಗೆ ಹನ್ನೊಂದಕ್ಕೆ ಯಾರ ಜೊತೆಗೋ ಸುತ್ತುತ್ತಿದ್ದಾನೆ ಅಂತ ಅಮ್ಮನ ಆತಂಕ.

ಒಹೋ! ಇದು ವಿಷಯ. ಆನಂದ ರಾವ್ ಸರ್ಕಲ್'ನಲ್ಲಿ ಕೆಲಸ ಮಾಡೋ ನಾನು ನನ್ನ ಸಹೋದ್ಯೋಗಿಯೊಂದಿಗೆ ಜಯಮಹಲ್ ಆಫೀಸಿಗೆ ಮೀಟಿಂಗ್'ಗೆ ಹೋಗುತ್ತಿದ್ದೆವು ಅಷ್ಟೇ. ಆದರೂ ಧುತ್ತನೆ ಎದ್ದ ಇಂಥಾ ಪ್ರಶ್ನೆಗೆ ಉತ್ತರ ಹೇಳಲೇ ನಾಲಿಗೆ ತಡಬಡಾಯಿಸಿ "ಅಣ್ಣಾ, ಅವರು ಹುಡುಗಿ ಅಲ್ಲಾ" ಅಂದುಬಿಟ್ಟೆ! ನಮ್ಮಪ್ಪ "ಏನಪ್ಪಾ ಹಾಗಂದ್ರೆ?" ಅಂದರು. . . ಆಮೇಲೆ ನಾನು "ಅಣ್ಣಾ, ನಾನು ಹೇಳಿದ್ದು ಆಕೆ ಹುಡುಗಿ ಅಲ್ಲಾ ಅಂದರೆ ಅವರು ಮದುವೆಯಾಗಿರೋ ಹೆಣ್ಣು" ಅಂತ ಹೇಳಿದೆ.

ಅಪ್ಪನ ದಿನ ವಿಶೇಷ : ಸೀದಾ ಸಾದಾ ನನ್ನ ದಾದಾ

ಅಲ್ಲಿಯವರೆಗೆ ಸುಮ್ಮನಿದ್ದ ಅಪ್ಪ ನುಡಿದರು "ನೀನು ಒಂದು ಹುಡುಗಿ ಜೊತೆ ಎಲ್ಲೋ ಹೋಗ್ತಿದ್ದೀ ಅಂತ ನನ್ನ ಯೋಚನೆ ಅಲ್ಲ. ಆದರೆ ಆ ಹುಡುಗಿ ಅಷ್ಟು ದೊಡ್ಡದಾಗಿ ಇದ್ದಾಳೆ ನೀನು ಇಷ್ಟೇ ಇಷ್ಟಿದ್ದೀಯಾ. ಅವಳ ಮುಂದೆ ನೀನು ಕೂತಿದ್ದು ಮೊದಲು ನನಗೆ ಕಾಣಲೇ ಇಲ್ಲ. ಅದೇ ನನಗೆ ಯೋಚನೆ ಆಗಿತ್ತು" ಅನ್ನೋದೇ? ಇದು ನಮ್ಮಪ್ಪನ sense of humorಉ.

ಕೆರಳಿದ ಸಿಂಹ, ಮಾನಸ ಸರೋವರ ಅಂತೆಲ್ಲ ಎಷ್ಟೋ ಭಾನುವಾರ ಮಧ್ಯಾಹ್ನ ಅಪ್ಪನ ಜೊತೆಗೆ ಸಿನಿಮಾಕ್ಕೆ ಹೋಗಿದ್ದೀನಿ. ಎರಡು ಮನೆಗಳನ್ನು ಕಟ್ಟುವಾಗ, ಮದುವೆಗಳನ್ನು ಮಾಡಿದಾಗ ಅಪ್ಪನ ಕೆಲಸಗಳನ್ನು ಹತ್ತಿರದಿಂದ ಕಂಡಿದ್ದೇನೆ. ಜೀವನದ ಎಷ್ಟೋ ಏರಿಳಿತಗಳನ್ನು ಒಟ್ಟಿಗೆ ನೋಡಿದ್ದರೂ ಅವರು ಆಸ್ಪತ್ರೆಯಲ್ಲಿದ್ದಾಗ ಆ ಯಂತ್ರ ತೋರಿಸಿದ ಏರಿಳಿಯದೇ ನಿಂತ ಅಡ್ಡಗೆರೆಯನ್ನು ಕಂಡಿದ್ದು ನಾನು ಮಾತ್ರ.

ನಾನು ಹಾಡಿದಾಗ, ಬರೆದಾಗ, ಸ್ಟೇಜ್ ಹತ್ತಿದಾಗ, ಅಥವಾ sense of humor ಯಾವುದೇ ಆಗಲಿ, ನಾ ಇಟ್ಟಿರುವ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈಗಾಗಲೇ ನಮ್ಮಪ್ಪ ಆ ಹಾದಿಯಲ್ಲಿ ಹಾದು ಹೋಗಿಯಾಗಿದೆ. ರಕ್ತದಲ್ಲಿ ಬಂದಿರುವ ಗುಣಗಳನ್ನು ನಾನು ಪಾಲಿಸುತ್ತಿದ್ದೇನೆಯೇ ಹೊರತು ಇಲ್ಲಿ ನನದೇನಿಲ್ಲ. ನಿಜವಾದ ಮಲ್ಟಿ-ಟ್ಯಾಲೆಂಟ್ ಗುಣ ಇದ್ದದ್ದು ನಮ್ಮಪ್ಪನಲ್ಲಿ!

ತಾವು ಆ ಗುಣಗಳನ್ನು ಮೈಗೂಡಿಸಿ ನನಗೂ ಹಂಚಿದ ಅಪ್ಪನಿಗೆ ಧನ್ಯವಾದಗಳನ್ನು ಅರ್ಪಿಸುವ ಸಂದರ್ಭದಲ್ಲಿ ಅಪ್ಪನಾಗಿ ಕರ್ತವ್ಯ ನೆರವೇರಿಸಲು ಶಕ್ತಿ ನೀಡು ಎನ್ನಲೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Srinath Bhalle remembers his father on International Father's Day. He says, though his father was strict and never money kind of a person, his sense of humor was excellent. Moreover, why should we remember father, when we have not forgotten him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more