ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
ಮೈಸೂರು: ಬಿಸಿಲಿನ ತಾಪದ ನಡುವೆಯೂ ಕಳೆದ ಒಂದೂವರೆ ತಿಂಗಳಿನಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದು, ಬುಧವಾರ ಸಂಜೆಯಿಂದಲೇ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಇನ್ನೇನಿದ್ದರೂ ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸಲಿದ್ದಾರೆ.
ಬುಧವಾರ ಸಂಜೆ 5ರಿಂದಲೇ ಸೆಕ್ಷನ್ 144 ಜಾರಿಯಾಗಲಿದೆ. ಜತೆಗೆ ಬಹಿರಂಗ ಪ್ರಚಾರಕ್ಕೂ ತೆರೆ ಬೀಳಲಿದೆ. ಅಭ್ಯರ್ಥಿ ಸೇರಿ ಕೇವಲ 5 ಮಂದಿಯಷ್ಟೆ ಮನೆಮನೆ ಪ್ರಚಾರ ನಡೆಸಬಹುದು. ಐದಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ. ಏಪ್ರಿಲ್ 24ರಂದು ಸಂಜೆ 5 ಗಂಟೆ ಬಳಿಕ ಸಭೆ, ಸಮಾರಂಭ, ಉತ್ಸವ, ರ್‍ಯಾಲಿ ಹಾಗೂ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ.

ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇದೆ. ಹೀಗಾಗಿ ಮತದಾರರ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತುಗಳು ಜೋರಾಗಲಿವೆ. ರಾಜಕೀಯ ಭಾಷಣ, ಆರೋಪ-ಪ್ರತ್ಯಾರೋಪಗಳಿಗೂ ಅವಕಾಶಗಳಿಲ್ಲ. ಮದ್ಯದಂಗಡಿಗಳು ಸಹ ಸಂಪೂರ್ಣ ಬಂದ್ ಆಗಲಿವೆ. ಏಪ್ರಿಲ್ 24ರ ಸಂಜೆ 5ರಿಂದ ಏಪ್ರಿಲ್ 26ರ ಮಧ್ಯರಾತ್ರಿ 12ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
63 ವಿಶೇಷ ಮತಗಟ್ಟೆ ಸ್ಥಾಪನೆ
ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಮತಗಟ್ಟೆಗಳಿಗೆ ಮತದಾರರನ್ನು ಆಕರ್ಷಿಸುವ 40 ಸಖಿ ಬೂತ್‌ಗಳು ಇರಲಿವೆ. ಇದರ ಜತೆಗೆ 2 ಸಾಂಪ್ರದಾಯಿಕ ಮತಗಟ್ಟೆ, 8 ದಿವ್ಯಾಂಗ ಮತಗಟ್ಟೆ, 8 ಯುವ ಮತದಾರರ ಬೂತ್‌ಗಳು ಹಾಗೂ 7 ವಿಷಯಾಧರಿತ ಬೂತ್ ತೆರೆಯಲಾಗುತ್ತಿದೆ ಎಂದರು.
ಎಲ್ಲ 2202 ಮತಗಟ್ಟೆಗಳಲ್ಲೂ ಈ ಬಾರಿ ಸಿಸಿ ಕಣ್ಗಾವಲು ಇರಲಿದೆ. ಜತೆಗೆ 2202 ಮತಗಟ್ಟೆಗಳ ಪೈಕಿ 435 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, 41 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. 495 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಮತ್ತು ಮತಗಟ್ಟೆಯಿಂದ ಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ ಹಾಗೂ ಸಿಬ್ಬಂದಿಯನ್ನು ಕರೆದೊಯ್ಯಲು 473 ಕೆಎಸ್‌ಆರ್‌ಟಿ ಬಸ್‌ಗಳು, 33 ಜೀಪ್ ಹಾಗೂ 79 ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಒಟ್ಟು 105 ಎಫ್‌ಐಆರ್ ದಾಖಲಾಗಿದೆ ಎಂದರು












Click it and Unblock the Notifications