ಹೆಂಡತಿ-ಮಾವನ ಮೇಲೆ ಮಚ್ಚು ಹಿಡಿದು ಎಗರಾಡಿದ ಬೆಂಗಳೂರು PSI; ಸಿಎಂ 'ನಮ್ ಪೊಲೀಸರು ಬೆಸ್ಟ್ ಅಂದಿದ್ದು ಇದೇನಾ' ಎಂದ ಪಬ್ಲಿಕ್
ಮೊನ್ನೆಯಷ್ಟೇ ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಪೊಲೀಸ್ ಇಲಾಖೆಯನ್ನ ಕೊಂಡಾಡಿದ್ದರು. ಅಪರಾಧ ನಿಯಂತ್ರಣ ಸೇರಿ ಕರ್ತವ್ಯದಲ್ಲಿ ನಮ್ ಪೊಲೀಸರು ದೇಶದಲ್ಲೇ ಬೆಸ್ಟ್ ಎಂದು ಬೆನ್ನುತಟ್ಟಿದ್ರು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲೇ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ತನ್ನ ಪತ್ನಿಯೇ ಗಂಭೀರ ಆರೋಪಗಳನ್ನು ಮಾಡಿ ಠಾಣೆ ಮೆಟ್ಟಿಲೇರಿದ್ದಾರೆ. ಹೌದು, ವರದಕ್ಷಿಣೆ ಕಿರುಕುಳದಂತಹ ಅಪರಾಧಗಳನ್ನು ತಡೆಯಬೇಕಾದ ಪೊಲೀಸ್ ಅಧಿಕಾರಿಯೇ ಅದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ (PSI) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಅಧಿಕಾರಿ ವಿರುದ್ಧ ಅವರ ಪತ್ನಿಯೇ ಗಂಭೀರ ಆರೋಪಗಳನ್ನು ಮಾಡಿದ್ದು, ಪೊಲೀಸ್ ಇಲಾಖೆ ತಲೆತಗ್ಗಿಸುವಂತಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಾವನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲು ಪಿಎಸ್‌ಐ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾಲದಲ್ಲಿ ವೈರಲ್ ಕೂಡ ಆಗಿದೆ.
ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ಪಿಎಸ್‌ಐ ಬೈರಪ್ಪ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವಕೀಲರಾಗಿರುವ ಅವರ ಪತ್ನಿ ಗೀತಾ, ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ, ಮನೆಯಲ್ಲಿ ಹಿಂಸೆ, ಪ್ರಾಣ ಬೆದರಿಕೆ ಹಾಗೂ ಪರಸ್ತ್ರೀಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG&IGP) ದೂರು ನೀಡಲು ಪತ್ನಿ ಸಜ್ಜಾಗಿದ್ದಾರೆ.

₹50 ಲಕ್ಷ ವರದಕ್ಷಿಣೆಗೆ ಬೇಡಿಕೆ
ದೂರುದಾರರಾದ ಗೀತಾ ಅವರ ಪ್ರಕಾರ, ಇವರಿಬ್ಬರ ವಿವಾಹವಾಗಿ ಐದು ವರ್ಷಗಳಾಗಿದ್ದು, ಮೂರು ವರ್ಷದ ಹೆಣ್ಣು ಮಗುವಿದೆ. ಮದುವೆಯ ಆರಂಭದ ದಿನಗಳಲ್ಲಿ ಸಂಸಾರ ಸುಗಮವಾಗಿಯೇ ಸಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಿಎಸ್‌ಐ ಬೈರಪ್ಪ ತವರು ಮನೆಯಿಂದ ₹50 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸಲು ಆರಂಭಿಸಿದ್ದಲ್ಲದೆ, ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಜುಲೈ 12ರಂದು ಕೌಟುಂಬಿಕ ಕಲಹ ಬಗೆಹರಿಸಲು ಗೀತಾ ಅವರ ತಂದೆ ಮನೆಗೆ ಬಂದಿದ್ದಾಗ, ಪಿಎಸ್‌ಐ ಬೈರಪ್ಪ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸ್ಥಳೀಯ ರೌಡಿಗಳ ಮೂಲಕ ತಮಗೆ ಬೆದರಿಕೆ ಹಾಕಿಸಿದ್ದಾರೆ ಎಂದೂ ಪತ್ನಿ ದೂರಿದ್ದಾರೆ.
ಯುವತಿಯರಿಗೆ ಅಶ್ಲೀಲ ಸಂದೇಶ
ಪಿಎಸ್‌ಐ ಬೈರಪ್ಪ ಅವರು ಇನ್‌ಸ್ಟಾಗ್ರಾಮ್ ಮೂಲಕ ಹಲವು ಯುವತಿಯರೊಂದಿಗೆ ಸಂಪರ್ಕದಲ್ಲಿದ್ದು, ಮದುವೆಯಾಗುವುದಾಗಿ ನಂಬಿಸಿ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಗೀತಾ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ಹಾಗೂ ಡಿಜಿಟಲ್ ಪುರಾವೆಗಳು ತಮ್ಮ ಬಳಿ ಇದ್ದು, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಇದಲ್ಲದೆ ಈತ ಈ ಹಿಂದೆ ಉದ್ಯಮಿಯೊಬ್ಬರಿಂದ ₹50 ಲಕ್ಷ ಲಂಚ ಬೇಡಿದ ಆರೋಪದ ಮೇಲೆ ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದ ಎನ್ನಲಾಗಿದೆ.
ದೂರು ಪಡೆಯಲು ಪೊಲೀಸರ ನಕಾರ
ತಮಗೆ ಜೀವ ಬೆದರಿಕೆ ಇರುವುದರಿಂದ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಆರೋಪಿ ತಮ್ಮದೇ ಇಲಾಖೆಯ ಅಧಿಕಾರಿಯಾಗಿರುವ ಕಾರಣ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂಜರಿದಿದ್ದಾರೆ. ಕೇವಲ ಎನ್‌ಸಿಆರ್ (NCR) ದಾಖಲಿಸಿ ಕಳುಹಿಸಿದ್ದಾರೆ ಎಂದು ಗೀತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನ್ಯಾಯಕ್ಕಾಗಿ ಹಿರಿಯ ಅಧಿಕಾರಿಗಳ ಮೊರೆ ಹೋಗುತ್ತಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊನೆಗೂ ಬಂಧನ
ಈ ಹಿಂದೆ ಸಹೋದ್ಯೋಗಿ ಎಂಬ ಕಾರಣಕ್ಕೆ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂಜರಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಪ್ರಕರಣ ದೊಡ್ಡಮಟ್ಟದಲ್ಲಿ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೆಂಗೇರಿ ಠಾಣಾ ಪೊಲೀಸರು ಆರೋಪಿ ಪಿಎಸ್‌ಐ ಬೈರಪ್ಪನನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ. ವೃತ್ತಿಯಲ್ಲಿ ಶಿಸ್ತು ಕಾಪಾಡಬೇಕಿದ್ದ ಪೊಲೀಸ್ ಅಧಿಕಾರಿಯೇ ವರದಕ್ಷಿಣೆ ಕಿರುಕುಳ ನೀಡಿ, ಮಚ್ಚು ಹಿಡಿದು ಹೆಂಡತಿ-ಮಾವನಿಗೆ ಬೆದರಿಕೆ ಹಾಕಿ ಅರೆಸ್ಟ್ ಆಗಿರುವುದು ಪೊಲೀಸ್ ವಲಯದಲ್ಲಿ ತೀವ್ರ ಮುಖಭಂಗ ಉಂಟುಮಾಡಿದೆ. ವೃತ್ತಿಯಲ್ಲಿ ಶಿಸ್ತು ಕಾಪಾಡಬೇಕಿದ್ದ ಪೊಲೀಸ್ ಅಧಿಕಾರಿಯೇ ವರದಕ್ಷಿಣೆ ಕಿರುಕುಳ ನೀಡಿ, ಮಚ್ಚು ಹಿಡಿದು ಹೆಂಡತಿ-ಮಾವನಿಗೆ ಬೆದರಿಕೆ ಹಾಕಿ ಅರೆಸ್ಟ್ ಆಗಿರುವುದು ಪೊಲೀಸ್ ಇಲಾಖೆಗೆ ಮುಜುಗರ ಆದಂತಾಗಿದೆ. ಮನೆಯವರ ಮೇಲೇ ಈ ವರ್ತನೆ ತೋರುವ ಅಧಿಕಾರಿ ಇನ್ನು ಜನರಿಗೆ ಏನು ನ್ಯಾಯ ಕೊಡಿಸಲು ಸಾಧ್ಯ? ಎಂದು ಇಲಾಖೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.


Click it and Unblock the Notifications
