ಅಪ್ಪನ ದಿನ ವಿಶೇಷ : ಸೀದಾ ಸಾದಾ ನನ್ನ ದಾದಾ
ನಮ್ಮ ಊರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಎಂಬ ಗ್ರಾಮ. ಅಲ್ಲಿ ಗಾಂಧೀಜಿ ಕೂಡ ಅಡಿಯಿಟ್ಟು, ಆಡಿನ ಹಾಲು ಕುಡಿದು, ಶೇಂಗಾ ತಿಂದು, ಕೆಲಹೊತ್ತು ವಿಶ್ರಾಂತಿಸಿದ ನಂದಗಡ ನಾಯಿಕರ ಮನೆತನ ಬಲು ದೊಡ್ಡದು. ಒಂದಾನೊಂದು ಕಾಲದಲ್ಲಿ ಆಸ್ತಿಯೂ ಸಾಕಷ್ಟಿತ್ತು. ತಿನ್ನಲು-ಉಣ್ಣಲು, ಆಳು-ಕಾಳುಗಳಿಗೆ ಕೊರತೆ ಇಲ್ಲದಿದ್ದರೂ ನಮ್ಮ ಅಜ್ಜ, ನಮ್ಮ ಅಪ್ಪ ಸೇರಿದಂತೆ ಯಾರಿಗೂ ಓದಲು 2 ರು.ಯನ್ನೂ ಕೊಡದಿದ್ದ ಕಾಲದಲ್ಲಿ, ಅವರಿವರಿಂದ ಇಸಿದುಕೊಂಡು ಹಾಗೂಹೀಗೂ ಏಳನೇ ಕ್ಲಾಸ್ ಪಾಸು ಮಾಡಿ, ಕೆಲಸ ಸಿಗುವವರೆಗೆ ಮನೆಗೆ ಬರುವುದಿಲ್ಲ ಎಂದು ಮನೆಬಿಟ್ಟು ಓಡಿ ಹೋಗಿ, ಎಲ್ಲೋ ಕೆಲಸ ಹಿಡಿದು, ತಮ್ಮಂದಿರು ಅಕ್ಕತಂಗಿಯರನ್ನು ಓದಿಸಿ, ಸಾಕಿ ಸಲುಹಿ, ಮದುವೆಯನ್ನೂ ಮಾಡಿದ ಕಥಾನಕವಿದೆಯಲ್ಲ ಅದು ಒಂದು ಕಾದಂಬರಿಗೆ ಸಮಾನ.
ನಾವು ಅಣ್ಣತಮ್ಮಂದಿರು ಅವರನ್ನು ದಾದಾ ಅಂತಲೇ ಕರೆಯುತ್ತೇವೆ. ದಾದಾ ಅಂದರೆ ಮರಾಠಿಯಲ್ಲಿ ಅಣ್ಣ ಅಂತ ಅರ್ಥ. ಮರಾಠಿ ಪ್ರಭಾವ ಜಾಸ್ತಿ, ಏನು ಮಾಡುವುದು? ಜನುಮದಲ್ಲೇ ಇನ್ ಶರ್ಟ್ ಮಾಡಿಲ್ಲ, ಸೂಟು ಹೊಲಿಸಿಲ್ಲ, ಮಳೆಗಾಲದ ಪ್ಲಾಸ್ಟಿಕ್ ಬೂಟು ಹೊರತುಪಡಿಸಿದರೆ ಬೇರೆ ಶೂಸ್ ಕೊಂಡಿಲ್ಲ, ಐಷಾರಾಮಿ ಜೀವನ ಏನು ಎಂಬುದೇ ಗೊತ್ತಿಲ್ಲದ ಸೀದಾ ಸಾದಾ ಮನುಷ್ಯ ನಮ್ಮ ದಾದಾ.
ಆದರೆ, ಹೆಂಡತಿ ಮಕ್ಕಳನ್ನು ಹೊರತುಪಡಿಸಿದರೆ ಅತಿಯಾಗಿ ಇಷ್ಟಪಟ್ಟಿದ್ದು ತಂಬಾಕು. ಒಂದಾನೊಂದು ಕಾಲದಲ್ಲಿ ಸಿಗರೇಟು ಸೇದುತ್ತಿದ್ದರಂತೆ, ಮದುವೆಯಾದ ಮೇಲೆ ಅಮ್ಮನ ಬಲವಂತದ ಮೇಲೆ ಸುಟ್ಟು ಬೂದಿಯಾಗುವ ಸಿಗರೇಟು ಹಿಡಿದಿಲ್ಲ. ಆದರೆ, ಅಮ್ಮ ಎಷ್ಟೇ ಐಡಿಯಾಗಳನ್ನು ಮಾಡಿದರೂ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ಬಿಡಿಸಲು ಸಾಧ್ಯವಾಗಿಲ್ಲ. ಮೊದಲಿನಷ್ಟಿಲ್ಲದಿದ್ದರೂ, ಆಗಾಗ, ನಾವ್ಯಾರೂ ಹತ್ತಿರದಲ್ಲಿ ಇಲ್ಲದಾಗ, ಹಳೆ ಗೆಳೆಯರು ಬಲವಂತ ಮಾಡಿದಾಗ ತಂಬಾಕಿಗೆ ಹಳೆಯ ಸಂಗಾತಿ ಸಿಕ್ಕಂತಾಗುತ್ತದೆ. [ಅಪ್ಪನಿಗೆ ಬೇಕಿರುವುದು ಒಂದು ಹಿಡಿ ಪ್ರೀತಿಯಷ್ಟೆ!]

ನಾವು ಚಿಕ್ಕವರಿದ್ದಾಗ ಮಾತ್ರ ದಾದಾ ತಂಬಾಕು ಸೇವನೆ ಮಾಡುವುದು ನಮಗೆ ಬಲು ಇಷ್ಟವಾಗುತ್ತಿತ್ತು. ಏನಪ್ಪಾ ಇಂಥಾ ಮಕ್ಕಳು ಅಂದ್ಕೋಬೇಡಿ. ಕವಳ ಬಾಯಲ್ಲಿ ತುಂಬಿಕೊಂಡಾಗ ನಮ್ಮ ಎಲ್ಲಾ ಡಿಮ್ಯಾಂಡುಗಳು ಸ್ಯಾಂಕ್ಷನ್ ಆಗುತ್ತಿದ್ದವು. ಪೆಪ್ಪರ್ ಮಿಠಾಯಿ, ಕೇಕು, ಐಸ್ ಕ್ಯಾಂಡಿ ಇವೇ ನಮ್ಮ ಡಿಮ್ಯಾಂಡುಗಳು. ಬಾಯಿತುಂಬ ತಂಬಾಕು ರಸ ತುಂಬಿದ್ದರಿಂದ ಮಾತಾಡಲಿಕ್ಕೆ ಆಗದೆಯೆ ನಾವು ಕೇಳಿದ್ದಕ್ಕೆಲ್ಲ ಹುಂಹುಂ ಎನ್ನುತ್ತಿದ್ದರು. ಬೈಯಲು ಆಗುತ್ತಿರಲಿಲ್ಲವಾದ್ದರಿಂದ ಕೇಳಿದ್ದೆಲ್ಲ ಸಿಗುತ್ತಿತ್ತು (ಆಫ್ ಕೋರ್ಸ್, ಬೈಯುತ್ತಿದ್ದುದು ಕೂಡ ಕಡಿಮೆ). ನಮಗೆ ಚೆಲ್ಲಾಟ, ಅಮ್ಮನಿಗೆ ಪ್ರಾಣ ಸಂಕಟ!
ಅಮ್ಮ ನಮ್ಮನ್ನಷ್ಟೇ ಬಿಟ್ಟು ಊರಿಗೆ ಹೋದಾಗಲಂತೂ ನಮಗೆ ಅನುಕ್ಷಣವೂ ಹಬ್ಬ. ಸಖತ್ತಾಗಿ ಚಪಾತಿ ಮಾಡುತ್ತಿದ್ದರು. ಧಾರವಾಡದಲ್ಲಿ ಗಂಡು ಮಕ್ಕಳ ಟ್ರೈನಿಂಗ್ ಹೈಸ್ಕೂಲಿಗೆ ಹೋಗುವಾಗ ಐದು ಪೈಸೆ ಜೇಬು ಸೇರುತ್ತಿತ್ತು. ಐದು ಪೈಸೆಗೆ ಐದು ನಿಂಬೆಹುಳಿ ಪೆಪ್ಪರ್ ಮಿಂಟು ಅಥವಾ ಒಂದು ಕಂಬರಗಟ್ಟ ಅಥವಾ ಒಂದು ಐಸ್ ಕ್ಯಾಂಡಿ ಅಥವಾ ಒಂದು ಪೇರಲಕಾಯಿ... ಹತ್ತು ಪೈಸೆ ಸಿಕ್ಕರಂತೂ ಜೇಬಲ್ಲಿ ಹಾಕಿದ ಕೈ ಹೊರಗೆ ತೆಗೆಯುತ್ತಲೇ ಇರಲಿಲ್ಲ. ಆಗಾಗ ಮುಟ್ಟಿ ನೋಡಿಕೊಳ್ಳದಿದ್ದರೆ ಸಮಾಧಾನವೇ ಇರುತ್ತಿರಲಿಲ್ಲ.
ಯಾವುದನ್ನೂ ಅತಿಯಾಗಿ ಆಸೆಪಟ್ಟವರಲ್ಲ. ಮಕ್ಕಳು ಓದಿ ಡಾಕ್ಟರಾಗಬೇಕು, ಇಂಜಿಯರಾಗಬೇಕು ಅಂತೆಲ್ಲ ದುಂಬಾಲು ಬಿದ್ದವರಲ್ಲ. ಸಿಕ್ಕಾಪಟ್ಟೆ ದುಡ್ಡು ಮಾಡಬೇಕೆಂದು ಅಪೇಕ್ಷೆಪಟ್ಟವರೂ ಅಲ್ಲ. ಊಟ, ತಿಂಡಿ, ಆಸೆ, ಆಕಾಂಕ್ಷೆ ಎಲ್ಲದರಲ್ಲೂ ಹಿತಮಿತ. ಇದೇ ಅವರ ಉತ್ತಮ ಆರೋಗ್ಯದ ಗುಟ್ಟು. ಶಾಂತಿ, ನೆಮ್ಮದಿ, ಸಹೃದಯತೆಯೇ ಅವರ ದೊಡ್ಡ ಆಸ್ತಿ. ಅವರು ಗಳಿಸಿಕೊಂಡ ಇನ್ನೊಂದು ಬಹುದೊಡ್ಡ ಆಸ್ತಿಯೆಂದರೆ ಬಂಧುಬಳಗ. ಬಳಗದಲ್ಲಿ ಯಾವುದೇ ಸಮಾರಂಭಗಳಿರಲಿ ಅಲ್ಲಿ ಅಪ್ಪ ಇಲ್ಲದಿದ್ದರೆ ಯಾವುದೂ ಕಾರ್ಯಗಳು ಮುಂದುವರಿಯುವುದಿಲ್ಲ.
ಅಪ್ಪನ ಚಿತ್ರಣ ಒಂದು ಪುಟಗಳಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಅಪ್ಪನ ದಿನವಾಗಲಿ, ಅಮ್ಮನ ದಿನವಾಗಲಿ, ಯಾರದೇ ಹುಟ್ಟುಹಬ್ಬಗಳಾಗಲಿ ಧೂಂಧಾಂ ಅಂತ ಆಚರಿಸಿದ್ದೇ ಇಲ್ಲ. ಅಮ್ಮನ ದಿನದಂದು ಅಮ್ಮನಿಗೆ ವಿಶ್ ಮಾಡುವುದು, ಅಪ್ಪನ ದಿನದಂದು ಅಪ್ಪನಿಗೆ ಅಭಿನಂದನೆ ಸಲ್ಲಿಸುವುದು ಯಾವತ್ತೂ ಮಾಡಿಲ್ಲ. ಏಕೆಂದರೆ, ಪ್ರತಿದಿನವೂ ನಮಗೆ ಅಮ್ಮನ ದಿನ ಮತ್ತು ಅಪ್ಪನ ದಿನವೆ. ಅವರು ಕೂಡ ಯಾವುದೇ ಸಂದರ್ಭದಲ್ಲಿ ಮಕ್ಕಳ ಮೇಲೆ ಅತಿಯಾದ ಪ್ರೀತಿ ತೋರಿದ್ದಾಗಲಿ ಇಲ್ಲವೇ ಇಲ್ಲ. ಒಂದೇ ರೀತಿ, ಥೇಟ್ ಅಪ್ಪನಂತೆ. [ಬೆಚ್ಚುವಂತೆ ಮಾಡುತ್ತಿದ್ದ ಅಪ್ಪನ ಬೆಚ್ಚನೆಯ ಪ್ರೀತಿಗೆ ನಮನ]












Click it and Unblock the Notifications