Koppal Accident: ಕೊಪ್ಪಳ ಅಪಘಾತದಲ್ಲಿ ಆರು ಮಂದಿ ದುರ್ಮರಣ; ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆ ಬಿದ್ದ ಪರಿಣಾಮ, ಚಿಕ್ಕ ಮಕ್ಕಳು ಸೇರಿದಂತೆ ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ. ಈ ಭೀಕರ ಅಪಘಾತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ದುರ್ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಳ್ಳಾರಿ ಸಂಸದರಾದ ತುಕಾರಾಂ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಘಟನೆಯ ಸಂಪೂರ್ಣ ಮಾಹಿತಿ ಮತ್ತು ಸದ್ಯದ ಪರಿಸ್ಥಿತಿಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಅತ್ಯಂತ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಅನಿರೀಕ್ಷಿತ ಸಾವುಗಳು ಅವರ ಕುಟುಂಬಗಳನ್ನು ಮತ್ತಷ್ಟು ಆರ್ಥಿಕ ಹಾಗೂ ಸಾಮಾಜಿಕ ಕಷ್ಟಕ್ಕೆ ದೂಡುವುದರಿಂದ, ಸರ್ಕಾರದ ವತಿಯಿಂದ ಮಾನವೀಯತೆಯ ನೆಲೆಯಲ್ಲಿ ಮೃತರ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರ ಧನವನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ.

ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಆರು ಮಂದಿ ದುರಂತ ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ದುರ್ಘಟನೆಯ ಬಗ್ಗೆ ಸಂಸದರಾದ ತುಕಾರಾಂ ಅವರೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡಿದ್ದೇನೆ. ಮೃತರೆಲ್ಲರೂ ಬಡ ಕುಟುಂಬಕ್ಕೆ ಸೇರಿದವರು, ಈ ಸಾವುಗಳು ಅವರ ಕುಟುಂಬದವರನ್ನು ಮತ್ತಷ್ಟು ಕಷ್ಟಕ್ಕೆ ನೂಕುವ ಹಿನ್ನೆಲೆಯಲ್ಲಿ, ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಘಟನೆ ಸಂಭವಿಸಿದ್ದೇಗೆ?
ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ವಿವಿಧ ಗ್ರಾಮಗಳ ಒಂದೇ ಕುಟುಂಬದ ಸಂಬಂಧಿಕರು ಸೇರಿದಂತೆ ಒಟ್ಟು 19 ಜನರು ಟ್ರ್ಯಾಕ್ಟರ್‌ನಲ್ಲಿ ಹುಲಿಗೆಮ್ಮ ದೇವಿ ಜಾತ್ರೆಗೆ ಹೊರಟಿದ್ದರು. ಟ್ರ್ಯಾಕ್ಟರ್ ತುಂಗಭದ್ರಾ ಸೇತುವೆಯ ಸಮೀಪ ತಲುಪಿದಾಗ, ಹಿಂಬದಿಯಿಂದ ಬಂದ ವೇಗವಾಗಿ ಚಲಿಸುತ್ತಿದ್ದ ಟ್ಯಾಂಕರ್ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಟ್ರ್ಯಾಕ್ಟರ್ ಸುಮಾರು 15 ಅಡಿ ಆಳದ ಸೇತುವೆಯ ಕೆಳಗಿನ ಗುಂಡಿಗೆ ಉರುಳಿ ಬಿದ್ದಿದೆ.
ಮೃತರ ವಿವರ
ಈ ಭೀಕರ ಅಪಘಾತದಲ್ಲಿ ಆರು ಜನರು ಘಟನಾ ಸ್ಥಳದಲ್ಲಿಯೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಗೌರಮ್ಮ, ಗೀತಾ, ಮಹಾಂತೇಶ, ಮಂಜಮ್ಮ, ಕೆಂಚಪ್ಪ, ಭರತ್, ಮಾಯಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಎಂಟು ಜನರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಮತ್ತು ನಾಲ್ವರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಹುಲಿಗೆಮ್ಮ ದೇವಿ ಜಾತ್ರೆಗೆ ತೆರಳುತ್ತಿದ್ದ ಭಕ್ತರು ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಘಟನೆಯಾಗಿದೆ.












Click it and Unblock the Notifications