ಕರ್ಮ ರಿಟರ್ನ್ಸ್.. ಪಂಜಾಬ್ ಕಿಂಗ್ಸ್‌ಗೆ ಶಾಪವಾಯ್ತಾ 'ಆರ್‌ಸಿಬಿ 49 ಟ್ರೋಲ್', ನೆಟ್ಟಿಗರು ಹೇಳೋದೇನು?
RCB Vs PBKS IPL 2026: ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಸಾಮಾನ್ಯವಾಗಿ ಕೇಳಿಬರುತ್ತಿದ್ದ ಅದೃಷ್ಟದ ಕೊರತೆ ಈಗ ಪಂಜಾಬ್ ಕಿಂಗ್ಸ್‌ಗೆ ತಟ್ಟಿದಂತಿದೆ. ಗುರುವಾರ (ಮೇ 14) ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಹೀನಾಯ ಸೋಲು ಕಂಡಿತು. ಈ ಮೂಲಕ ಸತತ 5ನೇ ಸೋಲು ಕಂಡ ಪಂಜಾಬ್‌ಗೆ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಕ್ರಿಕೆಟ್ ಲೋಕದಲ್ಲಿ ಕರ್ಮ ಎಂಬುದು ಎಷ್ಟು ಶಕ್ತಿಯುತವಾದುದು ಎಂಬುದಕ್ಕೆ ಸದ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಥಿತಿಯೇ ಸಾಕ್ಷಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನೆಟ್ಟಿಗರ ಹಾಗೂ ಅಭಿಮಾನಿಗಳು ಹೇಳುತ್ತಿದ್ದಾರೆ. ಆರ್‌ಸಿಬಿ ತಂಡವು ಹಲವು ವರ್ಷಗಳ ಹಿಂದೆ ಹೀನಾಯ ಪ್ರದರ್ಶನ ತೋರಿತ್ತು. ಇದೇ ವಿಚಾರಕ್ಕೆ ಲೇವಡಿ ಮಾಡಿದ್ದ ಪಂಜಾಬ್ ತಂಡ ಈಗ ಸತತ ಐದು ಸೋಲುಗಳನ್ನು ಕಾಣುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ.

ಆರ್‌ಸಿಬಿ ಟ್ರೋಲ್ ಮಾಡಿದ್ದ ಪಂಜಾಬ್ ಅಭಿಮಾನಿಗಳು
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ದಾಖಲೆ ಆರ್‌ಸಿಬಿ ಹೆಸರಿನಲ್ಲಿದೆ. 2017ರ ಏಪ್ರಿಲ್ 23ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 49 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ಇದನ್ನೇ ದಾಳವಾಗಿಸಿಕೊಂಡ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಪೇಜ್‌ಗಳು ಹಲವು ಬಾರಿ ಆರ್‌ಸಿಬಿಯನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಇದೀಗ ಇದಕ್ಕೆ ತಕ್ಕ ತಿರುಗೇಟು ಕೊಡುವ ಕೆಲಸವನ್ನು ಆರ್‌ಸಿಬಿ ಅಭಿಮಾನಿಗಳು ಮಾಡುತ್ತಿದ್ದಾರೆ.
ಮುಂಬೈ ವಿರುದ್ಧ ಪಂಜಾಬ್ ಹೀನಾಯ ಸೋಲು
ಈ ಬಾರಿಯ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಸತತ ಐದು ಸೋಲು ಕಂಡಿದೆ. ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುವ ಮೂಲಕ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಸತತ ಐದನೇ ಸೋಲನ್ನು ಅನುಭವಿಸಿದೆ. ಈ ಸರಣಿ ಸೋಲು ತಂಡದ ಪ್ಲೇಆಫ್ ಕನಸಿಗೆ ಬಹುತೇಕ ಎಳ್ಳುನೀರು ಬಿಟ್ಟಿದೆ.
ಪಂದ್ಯದ ನಂತರ ಮಾತನಾಡಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, "ಈ ಸೋಲನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟ. ಇದೊಂದು ಕಹಿ ಗುಳಿಗೆಯಂತಿದೆ," ಎಂದು ಬೇಸರ ವ್ಯಕ್ತಪಡಿಸಿದರು. ಹೀಗೆ 200 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿದ್ದರೂ ಮುಂಬೈ ಬ್ಯಾಟರ್‌ಗಳ ಅಬ್ಬರದ ಮುಂದೆ ಪಂಜಾಬ್ ಬೌಲರ್‌ಗಳು ವಿಫಲರಾದರು.
ಮುಂಬೈ ಇಂಡಿಯನ್ಸ್ ತಂಡದ ಯುವ ಬ್ಯಾಟರ್ ತಿಲಕ್ ವರ್ಮಾ ಅವರ ಅಜೇಯ 75 ರನ್‌ಗಳ ಅದ್ಭುತ ಆಟ ಪಂದ್ಯದ ಚಿತ್ರಣವನ್ನೇ ಬದಲಿಸಿತು. ತಿಲಕ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಅವರಿಗೆ ಸಾಥ್ ನೀಡಿದ ವಿಲ್ ಜಾಕ್ಸ್ ಅವರ ಆಕ್ರಮಣಕಾರಿ ಆಟದಿಂದಾಗಿ ಮುಂಬೈ ಗೆಲುವು ಸುಲಭವಾಯಿತು. ಈ ಬಗ್ಗೆ ಮಾತನಾಡಿದ ಅಯ್ಯರ್, "ನಾವು ತಿಲಕ್ ಅವರ ಆಟಕ್ಕೆ ಕ್ರೆಡಿಟ್ ನೀಡಲೇಬೇಕು. ಅವರು ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸಿದರು," ಎಂದು ಹೇಳಿದರು. ಇದೆಲ್ಲದರ ನಡುವೆ ಇದೀಗ ಪಂಜಾಬ್ ಕಿಂಗ್ಸ್ ಮಾಡಿದ ಟ್ರೋಲ್‌ಗೆ ಆರ್‌ಸಿಬಿ ಅಭಿಮಾನಿಗಳು ತಕ್ಕ ತಿರುಗೇಟು ನೀಡಿದ್ದಾರೆ.
ಪಂಜಾಬ್ ಟ್ರೋಲ್‌ಗೆ ಆರ್‌ಸಿಬಿ ಅಭಿಮಾನಿಗಳ ತಿರುಗೇಟು
ಪಂಜಾಬ್ ತಂಡದ ಈ ಸತತ ಸೋಲಿಗೆ ಆರ್‌ಸಿಬಿ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ "ಕರ್ಮ ರಿಟರ್ನ್ಸ್" ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಪಂಜಾಬ್‌ಗೆ ತಿರುಗೇಟು ನೀಡುತ್ತಿದ್ದಾರೆ. "ಅದಕ್ಕೆ ಹೇಳೋದು, ಯಾರನ್ನೂ ಅತಿಯಾಗಿ ಟ್ರೋಲ್ ಮಾಡಬಾರದು ಅಂತ," ಎಂದು ಹೇಳಿದ್ದಾರೆ. ಮತ್ತೊಬ್ಬರು "ನಮ್ಮ 49 ರನ್ ರೆಕಾರ್ಡ್ ನೋಡಿ ನಕ್ಕವರು ಇಂದು ಸತತ ಸೋಲು ಕಂಡು ಕಣ್ಣೀರು ಹಾಕುತ್ತಿದ್ದಾರೆ, ಇದೇ ವಿಧಿಯಾಟ," ಎಂದು ಕಾಲೆಳೆದಿದ್ದಾರೆ.
ಕುತೂಹಲಕಾರಿ ವಿಷಯವೆಂದರೆ ಪಂಜಾಬ್ ಕಿಂಗ್ಸ್ ತನ್ನ ಮುಂದಿನ ಪಂದ್ಯವನ್ನು ಆರ್‌ಸಿಬಿ ವಿರುದ್ಧವೇ ಆಡಬೇಕಿದೆ. ಈ ಪಂದ್ಯವು ಧರ್ಮಶಾಲದಲ್ಲಿ ನಡೆಯಲಿದೆ. ಪಂಜಾಬ್ ಈ ಸೋಲಿನ ಸರಣಿಯಿಂದ ಹೊರಬರುತ್ತದೆಯೇ ಅಥವಾ ಆರ್‌ಸಿಬಿ ಅಭಿಮಾನಿಗಳ ಈ ಟ್ರೋಲ್ ಸಮರ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಹೇಳುವುದಾದರೆ ಯಾರನ್ನೋ ಲೇವಡಿ ಮಾಡುವುದು ಸುಲಭ. ಆದರೆ ಅಂತಿಮವಾಗಿ ಮೈದಾನದಲ್ಲಿನ ಪ್ರದರ್ಶನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎನ್ನುವುದಕ್ಕೆ ಈ ಬೆಳವಣಿಗೆ ಉತ್ತಮ ಉದಾಹರಣೆಯಾಗಿದೆ.












Click it and Unblock the Notifications