ಮೇ 18ರಿಂದ ಮೂರು ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭ: ದೇವನಹಳ್ಳಿ, ಘಾಟಿ ಸುಬ್ರಮಣ್ಯ ಪ್ರಯಾಣಿಕರಿಗೆ ಅನುಕೂಲ
ಬೆಂಗಳೂರು: ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಮಿತವ್ಯಯದ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಾ ಬಂದಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ), ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆಯನ್ನು ಪುರಸ್ಕರಿಸಿ ಮೇ 18ರಿಂದ ಜಾರಿಗೆ ಬರುವಂತೆ ಮೂರು ನೂತನ ಬಸ್ ಮಾರ್ಗಗಳನ್ನು ಪರಿಚಯಿಸುತ್ತಿದೆ. ವಿಜಯಪುರ, ಘಾಟಿ ಸುಬ್ರಮಣ್ಯ ಕ್ಷೇತ್ರ ಹಾಗೂ ನಂದಿ ಕ್ರಾಸ್ ಭಾಗದ ಪ್ರಯಾಣಿಕರಿಗೆ ಈ ಹೊಸ ಬಸ್ ಸೇವೆಗಳು ಭಾರಿ ಅನುಕೂಲ ಕಲ್ಪಿಸಲಿವೆ. ಹೊಸ ಮಾರ್ಗಗಳು ಮತ್ತು ಬಸ್‌ಗಳ ಸಂಪೂರ್ಣ ವಿವರ ಇಲ್ಲಿದೆ.
ಪ್ರಯಾಣಿಕರ ದೈನಂದಿನ ಅನುಕೂಲಕ್ಕಾಗಿ ಬಿಎಂಟಿಸಿಯು ಮೂರು ನೂತನ ಮಾರ್ಗಗಳಲ್ಲಿ ಹೊಸ ಬಸ್ ಸೇವೆಗಳನ್ನು ಪರಿಚಯಿಸುತ್ತಿದೆ. ಈ ಹೊಸ ಮಾರ್ಗಗಳು ದೇವನಹಳ್ಳಿ, ವಿಜಯಪುರ, ದೊಡ್ಡಬಳ್ಳಾಪುರ ಮತ್ತು ಘಾಟಿ ಸುಬ್ರಮಣ್ಯ ಭಾಗದ ಸಾರ್ವಜನಿಕರಿಗೆ ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ಭಾರಿ ನೆರವಾಗಲಿವೆ.

ಮೆಜೆಸ್ಟಿಕ್‌ನಿಂದ ವಿಜಯಪುರ ಮಾರ್ಗ
ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ವಿಜಯಪುರಕ್ಕೆ ಹೆಬ್ಬಾಳ, ಯಲಹಂಕ ಮತ್ತು ದೇವನಹಳ್ಳಿ ಮಾರ್ಗವಾಗಿ ಸೀಮಿತ ನಿಲುಗಡೆಗಳನ್ನು ಹೊಂದಿರುವ 'EX-298ಎಂಪಿ' ಎಕ್ಸ್‌ಪ್ರೆಸ್ ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು 8 ಬಸ್ಸುಗಳು ಕಾರ್ಯಾಚರಣೆ ನಡೆಸಲಿದ್ದು, ದಿನಕ್ಕೆ 47 ಟ್ರಿಪ್ಸ್ ಪೂರೈಸಲಿವೆ. ಮೆಜೆಸ್ಟಿಕ್‌ನಿಂದ ಬೆಳಗ್ಗೆ 06:20ಕ್ಕೆ ಮೊದಲ ಬಸ್ ಹೊರಡಲಿದ್ದು, ರಾತ್ರಿ 09:30ರವರೆಗೆ ವಿವಿಧ ಅವಧಿಗಳಲ್ಲಿ ಲಭ್ಯವಿರಲಿದೆ. ಅದೇ ರೀತಿ ವಿಜಯಪುರದಿಂದ ಬೆಳಗ್ಗೆ 06:10ರಿಂದ ರಾತ್ರಿ 09:00ರವರೆಗೆ ಸಾರ್ವಜನಿಕರಿಗೆ ಬಸ್ ಸೌಲಭ್ಯ ಸಿಗಲಿದೆ.
ಘಾಟಿ ಸುಬ್ರಮಣ್ಯ ಮಾರ್ಗ
ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಮಣ್ಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗಾಗಿ ಮೆಜೆಸ್ಟಿಕ್‌ನಿಂದ '285-ಎಂವಿ' ಮಾರ್ಗದ ಬಸ್ಸುಗಳನ್ನು ಪರಿಚಯಿಸಲಾಗುತ್ತಿದೆ. ಈ ಬಸ್ಸುಗಳು ಹೆಬ್ಬಾಳ, ಯಲಹಂಕ ಎನ್.ಇ.ಎಸ್ ಮತ್ತು ದೊಡ್ಡಬಳ್ಳಾಪುರ ಮಾರ್ಗವಾಗಿ ಘಾಟಿ ಸುಬ್ರಮಣ್ಯ ದೇವಸ್ಥಾನವನ್ನು ತಲುಪಲಿವೆ. ಈ ಸೇವೆಗಾಗಿ ಸಂಸ್ಥೆಯು 5 ಬಸ್ಸುಗಳನ್ನು ನಿಯೋಜಿಸಿದ್ದು, ದಿನಕ್ಕೆ 18 ಟ್ರಿಪ್‌ಗಳನ್ನು ಇವು ನಡೆಸಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 05:00, 05:35, 06:35, 08:00, 08:50 ಹಾಗೂ ಮಧ್ಯಾಹ್ನ ಮತ್ತು ಸಂಜೆಯ ವೇಳೆಯಲ್ಲಿ ಬಸ್‌ಗಳು ಹೊರಡಲಿವೆ. ಘಾಟಿ ಸುಬ್ರಮಣ್ಯ ಕ್ಷೇತ್ರದಿಂದ ಮರಳಿ ಬೆಂಗಳೂರಿಗೆ ಬರಲು ಬೆಳಗ್ಗೆ 05:45ರಿಂದ ರಾತ್ರಿ 07:45ರವರೆಗೆ ನಿಯಮಿತ ಸಮಯದ ಬಸ್ಸುಗಳು ಲಭ್ಯವಿರುತ್ತವೆ.
ದೇವನಹಳ್ಳಿ-ನಂದಿ ಕ್ರಾಸ್
ದೇವನಹಳ್ಳಿಯಿಂದ ನಂದಿ ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ '298-ಎಂಡಬ್ಲ್ಯೂ' ಮಾರ್ಗದ ಹೊಸ ಬಸ್ ಸೇವೆ ಚಾಲನೆಗೆ ಬರಲಿದೆ. ಈ ಬಸ್ಸುಗಳು ಆವತಿ ಮತ್ತು ವೆಂಕಟಗಿರಿ ಕೋಟೆ ಮಾರ್ಗವಾಗಿ ಸಂಚರಿಸಲಿವೆ. ಈ ಗ್ರಾಮೀಣ ಹಾಗೂ ಉಪನಗರ ಭಾಗದ ಸಂಪರ್ಕಕ್ಕಾಗಿ 3 ಬಸ್ಸುಗಳನ್ನು ಬಳಸಲಾಗುತ್ತಿದ್ದು, ಇವು ದಿನವಿಡೀ ಒಟ್ಟು 60 ಸುತ್ತುವಳಿಗಳನ್ನು ನಡೆಸುವ ಮೂಲಕ ಪ್ರಯಾಣಿಕರಿಗೆ ಸದಾ ಲಭ್ಯವಿರಲಿವೆ. ದೇವನಹಳ್ಳಿಯಿಂದ ಬೆಳಗ್ಗೆ 06:40ರಿಂದ ರಾತ್ರಿ 07:55ರವರೆಗೆ ಹಾಗೂ ನಂದಿ ಕ್ರಾಸ್‌ನಿಂದ ಬೆಳಗ್ಗೆ 07:20ರಿಂದ ರಾತ್ರಿ 08:35ರವರೆಗೆ ಪ್ರತಿ ಅರ್ಧ ಗಂಟೆಯ ಆಸುಪಾಸಿನಲ್ಲಿ ಸಾರ್ವಜನಿಕರು ಈ ಬಸ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.
ಈ ನೂತನ ಮಾರ್ಗಗಳ ಪರಿಚಯದಿಂದಾಗಿ ಕಚೇರಿ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅತ್ಯಂತ ಮಿತವ್ಯಯದ ಮತ್ತು ಆರಾಮದಾಯಕ ಪ್ರಯಾಣಕ್ಕೆ ದಾರಿಯಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.













Click it and Unblock the Notifications