NEET-UG 2026: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಕಿಂಗ್‌ಪಿನ್ ಬಂಧನ; ಉಪನ್ಯಾಸಕನಿಂದಲೇ ಕೃತ್ಯ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್-ಯುಜಿ 2026' (NEET-UG 2026) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಮಹತ್ವದ ಯಶಸ್ಸು ಸಾಧಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲವಾಗಿದ್ದ ಮುಖ್ಯ ಸೂತ್ರಧಾರಿಯನ್ನು ಸಿಬಿಐ ಅಧಿಕಾರಿಗಳು ಪತ್ತೆಹಚ್ಚಿ ಬಂಧಿಸಿದ್ದಾರೆ.

ಉಪನ್ಯಾಸಕನೇ ಕಿಂಗ್‌ಪಿನ್

ತನಿಖೆಯ ಪ್ರಕಾರ ಬಂಧಿತ ಮುಖ್ಯ ಆರೋಪಿಯನ್ನು ಪಿ.ವಿ.ಕುಲಕರ್ಣಿ ಎಂದು ಗುರುತಿಸಲಾಗಿದೆ. ಈತ ಕೆಮಿಸ್ಟ್ರಿ (ರಸಾಯನಶಾಸ್ತ್ರ) ಉಪನ್ಯಾಸಕನಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ನೀಟ್ ಪರೀಕ್ಷಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದನು. ಈ ಜವಾಬ್ದಾರಿಯ ಕಾರಣದಿಂದಾಗಿಯೇ ಆತನಿಗೆ ಅಧಿಕೃತವಾಗಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನೋಡುವ ಮತ್ತು ಅವುಗಳನ್ನು ಪಡೆಯುವ ಅವಕಾಶ ಸಿಕ್ಕಿತ್ತು ಎಂದು ತಿಳಿದುಬಂದಿದೆ.

NEET UG 2026

ಮನೆಯಲ್ಲೇ ನಡೆದಿತ್ತು ಸೀಕ್ರೆಟ್ ಕೋಚಿಂಗ್ ಕ್ಲಾಸ್

2026ರ ಏಪ್ರಿಲ್ ಕೊನೆಯ ವಾರದಲ್ಲಿ, ಕುಲಕರ್ಣಿ ಮತ್ತೊಬ್ಬ ಆರೋಪಿ ಮನೀಷಾ ವಾಗ್ಮರೆ ಎಂಬಾಕೆಯ ಸಹಾಯದಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿದ್ದನು. ಮನೀಷಾ ವಾಗ್ಮರೆಯನ್ನು ಸಿಬಿಐ ಈಗಾಗಲೇ ಮೇ 14ರಂದು ಬಂಧಿಸಿದೆ. ಈ ಇಬ್ಬರೂ ಸೇರಿ ಪುಣೆಯಲ್ಲಿರುವ ಕುಲಕರ್ಣಿ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸಿದ್ದರು.

ಈ ಸೀಕ್ರೆಟ್ ಕ್ಲಾಸ್‌ಗಳಲ್ಲಿ ಕುಲಕರ್ಣಿ ನೀಟ್ ಪರೀಕ್ಷೆಯ ಪ್ರಶ್ನೆಗಳನ್ನು, ಅವುಗಳ ಆಪ್ಷನ್‌ಗಳು ಹಾಗೂ ಸರಿಯಾದ ಉತ್ತರಗಳ ಸಮೇತ ವಿದ್ಯಾರ್ಥಿಗಳಿಗೆ ಬರೆಸಿದ್ದನು. ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳಲ್ಲಿ ಕೈಬರಹದಲ್ಲಿ ಬರೆದುಕೊಂಡಿದ್ದ ಈ ಪ್ರಶ್ನೆಗಳು, ಮೇ 3ರಂದು ನಡೆದ NEET-UG ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಸಂಪೂರ್ಣವಾಗಿ (ನೂರಕ್ಕೆ ನೂರರಷ್ಟು) ತಾಳೆಯಾಗಿವೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಇಲ್ಲಿವರೆಗೆ 7 ಆರೋಪಿಗಳ ಬಂಧನ

ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೆ ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹ್ಲಿಯಾನಗರ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 7 ಆರೋಪಿಗಳನ್ನು ಬಂಧಿಸಿದೆ. ಇವರ ಪೈಕಿ ಐವರು ಆರೋಪಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನು ನಿನ್ನೆ ಬಂಧಿಸಲಾದ ಇಬ್ಬರು ಆರೋಪಿಗಳನ್ನು ಪುಣೆಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಟ್ರಾನ್ಸಿಟ್ ರಿಮಾಂಡ್ ಪಡೆದುಕೊಳ್ಳಲಾಗುತ್ತಿದೆ. ತದನಂತರ ಹೆಚ್ಚಿನ ಕಾನೂನು ಪ್ರಕ್ರಿಯೆಗಳಿಗಾಗಿ ಅವರನ್ನು ದೆಹಲಿಯ ನ್ಯಾಯಾಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಬೆನ್ನತ್ತಿರುವ ಸಿಬಿಐ ಅಧಿಕಾರಿಗಳು ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಡಿಜಿಟಲ್ ಪುರಾವೆಗಳ ವಿಧಿವಿಜ್ಞಾನ (Forensic) ಮತ್ತು ತಾಂತ್ರಿಕ ವಿಶ್ಲೇಷಣೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ, ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಸದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹ್ಲಿಯಾನಗರ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಬಂಧಿತ ಮುಖ್ಯ ಸೂತ್ರಧಾರಿ ಪಿ.ವಿ. ಕುಲಕರ್ಣಿ ಮೂಲತಃ ಲಾತೂರ್ ಜಿಲ್ಲೆಯವನಾಗಿದ್ದು, ಆತನನ್ನು ಸುದೀರ್ಘ ವಿಚಾರಣೆಯ ಬಳಿಕ ಪುಣೆಯಲ್ಲಿ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+