ಅಪ್ಪನ್ನ ಒಂದೇ ದಿನ ನೆನೆಯುವ ದೊಡ್ಡು ಸ್ಟುಪಿಡ್ಡುಗಳು!

By: ಶಮ್ಮಿ ಸಂಜೀವ್
Subscribe to Oneindia Kannada

ಮತ್ತೊಂದು ಅಪ್ಪಂದಿರ ದಿನ ಬಂದಾಯಿತು. ನಿಜಕ್ಕೂ ಹೇಳಿ, ನಿಮ್ಮಲ್ಲಿ ಎಷ್ಟು ಜನ ಈ ಅಪ್ಪಂದಿರ ದಿನವನ್ನ ಆಚರಿಸ್ತೀರಿ? ಅಷ್ಟಕ್ಕೂ ಅಪ್ಪನ್ನ ನೆನಸ್ಕೊಳ್ಳಕ್ಕೆ ಒಂದು ದಿನ ಅಂತ ಬೇಕಾ? ಅಷ್ಟು ದೂರದ ಸಂಬಂಧವೇ ಅದು? ಮರೆಯಕ್ಕೆ?

ಇಡೀ ದಿನಾ ಇಂದು ಫಾಧರ್ಸ್ ಡೇ ಅಂತ ಕೂಗಿ ಕೂಗಿ ತಲೆ ತಿನ್ನೋ ರೇಡಿಯೊ ಜಾಕಿಗಳು, ಅದರ ಹೆಸರಲ್ಲೇ ಒಂದಷ್ಟು ದುಡ್ಡು ಪೀಕುವ ಅಂಗಡಿ, ಮಾಲುಗಳು, ಅಪ್ಪನ ದಿನಕ್ಕಾಗಿ ಅಮ್ಮನ ಹತ್ತಿರ ದುಡ್ಡು ಕೀಳುವ ಮಕ್ಕಳು!

ಸುಮ್ಮನೇ ಕೂತು ಅಪ್ಪ ಅಂತ ಯೋಚನೆ ಮಾಡಿದ್ರೆ ಸೋನೆ ಮಳೆಗಿಂತ ದೊಡ್ಡ ನೆನಪಿನ ಮಳೆ ಸುರಿದೀತು ಅಲ್ಲವೇ? ಅಪ್ಪ ಅಂದ್ರೆ ಕಾಫೀ ತರ, ಚಳಿಗೆ ರಗ್ಗು, ಬಿಸಿಲಿಗೆ ತಂಪು ತಂಪು ಮರದ ನೆರಳು, ನಮ್ಮೆಲ್ಲಾ ಸಮಸ್ಯೆಗಳಿಗೆ ಅವನು ನಗುವ ನಗುವೇ ಉತ್ತರ! ಇಂತಾ ಅಪ್ಪನ್ನ ಒಂದೇ ದಿನ ಅಂತ ನೆನೆಯೋದು ಹೇಗೆ? ದೊಡ್ಡ ಸ್ಟುಪಿಡ್ಡುಗಳು ನಾವೆಲ್ಲಾ ಅಲ್ಲವೇ? [ಬೆಚ್ಚುವಂತೆ ಮಾಡುತ್ತಿದ್ದ ಅಪ್ಪನ ಬೆಚ್ಚನೆಯ ಪ್ರೀತಿಗೆ ನಮನ]

Why are we celebrating Father's Day? How stupid!

ಮನೆಯ ಅಂಗಳದಿ ನೆಟ್ಟ ಪುಟ್ಟ ಚಿಕ್ಕು ಗಿಡಕೆ
ಅವನ ಕಂಗಳ ಆರೈಕೆ
ಅವನ ಹೆಸರ ಹೇಳುವುದು
ತೋಟದ ತೆಂಗು ಅಡಿಕೆ

ಹೃದಯವೋ ಮಳೆ ಹನಿಸುವ
ಕರಿ ಮೋಡ
ಅವ ಅಳುವುದಿಲ್ಲ ಎದೆಯೊಳಗೆ
ನೂರಳಲಿದ್ದರೂ ಕೂಡ

ಅವನ ಪುಟ್ಟ ಹೃದಯದಲ್ಲಿ
ನಮಗಿಹುದು ದೊಡ್ಡ ಜಾಗ
ಅವನ ಸಂತಸಗಳಲ್ಲಿ ನಮದೇ
ಬಲು ದೊಡ್ಡ ಭಾಗ [ಅಪ್ಪನಿಗೆ ಬೇಕಿರುವುದು ಒಂದು ಹಿಡಿ ಪ್ರೀತಿಯಷ್ಟೆ!]

ಆತ ಜೀವದಾತ, ತನ್ನ ಬೆರಳು ನೀಡಿ
ನಡೆಯಲು ಕಲಿಸಿದವ
ತನ್ನ ನನಸಾಗದ ಕನಸುಗಳ
ನಮ್ಮಲ್ಲಿ ಕಂಡವ

ಬದುಕು ಕಲಿಸಿದ ಪಾಠ
ನೋವು ನಲಿವಿನ ಊಟ
ಕಹಿಯ ಉಂಡವ ಆತ
ಸಿಹಿಯ ಬೆಳೆದವ ಆತ

ಹಸಿರ ಉಸಿರಲಿ ಬದುಕ
ಬೆಳೆಸಿದವ
ಅವನ ಇನ್ನೇನು ಕರೆಯಲಾದೀತು
ಅಪ್ಪಾ ಅಂತಲ್ಲದೆ

ಅವನೆ ನಮಗೆ ದಾರಿ ದೀಪ
ಬಾಳ ಹಾದಿಗೆ
ಅವನ ಮಾತೆ ವೇದವಾಕ್ಯ
ನಮ್ಮ ಪಾಲಿಗೆ

ಕಣ್ಣೆದುರಿರುವ ಕಾರಣ ಮೂರ್ತಿ
ಅವನೆ ನಮ್ಮ ಬಾಳ ಸ್ಫೂರ್ತಿ [ಅಪ್ಪನ ದಿನ ವಿಶೇಷ : ಸೀದಾ ಸಾದಾ ನನ್ನ ದಾದಾ]

ನನ್ನಪ್ಪ ಕೃಷಿಕ, ಮೈಸೂರಿನಲ್ಲಿ ಸಂಸ್ಕೃತ ಆನರ್ಸ್ ಓದಿದವ, ಎಂದೂ ಅಕ್ಷರದ ಅಹಂ ಅನ್ನು ತಲೆಗೇರಿಸಿಕೊಳ್ಳದವ. ಅವನು ನನ್ನ ಕಿರುಬೆರಳು ಹಿಡಿದು ನಡೆಯಲು ಆಗದಷ್ಟು ಜವಾಬ್ದಾರಿ ನಾವು ಚಿಕ್ಕವರಿದ್ದಾಗ, ಅಮ್ಮ ತನ್ನ ಶಕ್ತಿಯೆಲ್ಲ ನಮಗಾಗಿ ಸೋರಿಕೊಂಡವಳು, ಅಪ್ಪ ತನ್ನ ಬದುಕನ್ನೆ ಅಜ್ಜ ಬಿಟ್ಟುಹೋದ ಜವಾಬ್ದಾರಿಗಳಿಗೆ ತೆತ್ತವ, ನಿಸ್ವಾರ್ಥ ಬದುಕು ಅವನಿಗೆ ಕೊಟ್ಟಿದ್ದೇನೂ ಇಲ್ಲವಾದರೂ ಇವತ್ತಿಗೂ ಆದರ್ಶಗಳನ್ನ ಬಿಟ್ಟುಕೊಡದ ಮಹಾನ್ ಹಟಗಾರ. ಅವನೆಂದರೆ ಭಯಕ್ಕೂ ಮೀರಿದ ಪ್ರೀತಿ.

ಅಪ್ಪನಿಗೆ ನಾವೇನು ಕೊಡಲಾದೀತು? ಅವ ನಮಗಿತ್ತ ಸುಖ, ಸುರಕ್ಷೆಗಳಿಗೆಲ್ಲಾ ನಾವು ಕೊಡಬಹುದಾದದ್ದೆಂದರೆ, ಅವನ ಇಳಿವಯಸ್ಸಲ್ಲಿ ಹೆಗಲಿಗೆ ಹೆಗಲು ಕೊಟ್ಟು ಅವನೊಂದಿಗೆ ಸ್ವಲ್ಪ ಸಮಯ ದಿನಾಲು ಕಳೆಯುವಂತಹದ್ದು. ಇದಕ್ಕೆ ಕಾನೂನೇಕೆ ಬೇಕು? ನಮಗೆ ನಾಚಿಕೆಯಾಗಬೇಕು.

ವೃದ್ಧಾಪ್ಯದಲ್ಲಿರುವ ಅದೆಷ್ಟೋ ಅಪ್ಪ ಅಮ್ಮಂದಿರು ಇಂದು ಬೀದಿಪಾಲಾಗಿದ್ದಾರೆ. ಕಾರಣ ಏನು ಗೊತ್ತೇ? ತಮ್ಮನ್ನು ಬೆಳೆಸಲು ತಮ್ಮ ಅಮೂಲ್ಯ ಸಮಯ ತೆಗಿದಿಟ್ಟ ಅಪ್ಪ ಅಮ್ಮನ್ನ ನೋಡಿಕೊಳ್ಳಲು ಮಕ್ಕಳಿಗೆ ಸಮಯವಿಲ್ಲ. ಹಾಗೂ ಕೆಲಸ ಮಾಡಲಾಗದ ಅವರ ಅಸಹಾಯಕತೆ.

ನಾವೆಲ್ಲರೂ ನಮ್ಮ ಪರಿಧಿಯಲ್ಲಿ ಈ ಘಟನೆಗಳು ನಡೆಯದಂತೆ ನೋಡಿಕೊಳ್ಳೋಣ, ನಮ್ಮ ನಾಗರಿಕತೆಯನ್ನ ಸರಿಯಾದ ಹಾದಿಯಲ್ಲಿ ನಡೆಸೋಣ. ಈ ನಮ್ಮ ಭಾರತೀಯ ಸಂಸ್ಕೃತಿ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳದಂತಿರಲು ಆದಷ್ಟು ಪ್ರಯತ್ನ ಮಾಡೋಣ. ಆಗ ನಮಗೆ ಈ ತಂದೆಯಂದಿರ ದಿನ- ತಾಯಿಯಂದಿರ ದಿನದ ಅವಶ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No doubt, many of us look at our father as hero, a celebrity and celebrate father's day everyday. Then why should we celebrate Father's Day, asks Shammi Sanjeev, poetess in Bengaluru. But, there are many fathers too, who should be cared.
Please Wait while comments are loading...