MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್‌ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ
MS Dhoni: ಭಾರತ ತಂಡವು ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ ತಲುಪಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಂಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಸಮಿಫೈನಲ್ ಪಂದ್ಯದ ವೇಳೆ ಸಾಕ್ಷಿ ಸಿಂಗ್ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದ್ದು, ಇದಕ್ಕೆ ಪತಿ ಧೋನಿ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಗುರುವಾರ ಮುಂಬೈನಲ್ಲಿ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 7 ರನ್ ಗಳ ಜಯ ಸಾಧಿಸಿತು. ಇಂಗ್ಲೆಂಡ್ ತಂಡದ ಪರ ಜಾಕೋಬ್ ಬೆಥೆಲ್ ಭರ್ಜರಿ 105 ರನ್ ಬಾರಿಸಿದರೂ ಭಾರತ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಸಿಡಿಸಿದ 89 ರನ್‌ಗಳೇ ಆಸರೆಯಾದವು. ಇದರಿಂದ ಭಾರತ 253 ಬೃಹತ್ ಮೊತ್ತವನ್ನು ಪೇರಿಸಿತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ದಾಖಲೆಯ ರನ್ ಚೇಸ್ ಮಾಡುವ ಹಾದಿಯಲ್ಲಿದ್ದರೂ ಸಹ, ಅಂತಿಮವಾಗಿ 246 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಪತ್ನಿಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ
ಈ ಪಂದ್ಯವನ್ನು ವೀಕ್ಷಣೆ ಮಾಡಲು ಎಂ.ಎಸ್.ಧೋನಿ ಹಾಗೂ ಪತ್ನಿ ಸಾಕ್ಷಿ ಸಿಂಗ್ ಬಂದಿದ್ದರು. ಪಂದ್ಯದ ಕೊನೆಯ ಓವರ್‌ಗಳಲ್ಲಿ ಇಂಗ್ಲೆಂಡ್ ತಂಡವು ಒತ್ತಡಲ್ಲಿದ್ದು, ಈ ವೇಳೆ ಬೂಮ್ರಾ ಮಾಡಿದ ಬೌಲಿಂಗ್‌ನಲ್ಲಿ ವಿಕೆಟ್ ಬಿತ್ತೆಂದು ಭಾವಿಸಿದ ಧೋನಿ ಪತ್ನಿ ಸಾಕ್ಷಿ ಸಂಭ್ರಮದಿಂದ ಕುಣಿದಾಡುತ್ತಿದ್ದರು. ಇದನ್ನು ಕಂಡು ನಸುನಕ್ಕ ಧೋನಿ, ಸುಮ್ಮನೆ "ಬೈಠ್ ಜಾವೋ (ಕುಳಿತುಕೋ)" ಎಂದು ಹೇಳಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಭರ್ಜರಿ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್
ಭಾರತವು ಈ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸುವ ಮೂಲಕ ಭಾರತವು 2026ರ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಅವರು ಪ್ರಮುಖ ಕಾರಣರಾಗಿದ್ದರು.
ಇದೀಗ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧವೂ 89 ರನ್ ಬಾರಿಸುವ ಮೂಲಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ಗೆಲುವಿನೊಂದಿಗೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಾಲಿ ಚಾಂಪಿಯನ್ ಆಗಿ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳ ಬಗ್ಗೆ ಮಾತನಾಡಿದ ಸಂಜು, "ನಾನು ಎರಡು ಶತಕಗಳನ್ನು ಮಿಸ್ ಮಾಡಿಕೊಂಡೆ ಎಂದು ಭಾವಿಸುವುದಿಲ್ಲ. 97 ಮತ್ತು 89 ರನ್ ಗಳಿಸಿದ್ದೇನೆ. ಇದು ಅತ್ಯಂತ ದೊಡ್ಡ ವಿಷಯ," ಎಂದು ಹೇಳಿದರು.
'ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು'
ಭಾನುವಾರ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಮ್ಮ ಮೊದಲ ವಿಶ್ವಕಪ್ ಫೈನಲ್ ಆಡಲಿದ್ದಾರೆ. "ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಬಹಳ ಸಮಯದಿಂದ ಈ ಫಾರ್ಮ್ಯಾಟ್‌ನಲ್ಲಿ ಆಡುತ್ತಿದ್ದೇನೆ. ನಾನು ಸುಮಾರು ಟಿ20 ಪಂದ್ಯಗಳನ್ನು ಆಡಿದ್ದೇನೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಒಂದರಿಂದ ಆರನೇ ಸ್ಥಾನದವರೆಗೆ ಎಲ್ಲಾ ಕಡೆ ಆಡಿದ ಅನುಭವ ನನಗಿದೆ. ನಾನು ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ ನಾಯಕತ್ವವನ್ನೂ ವಹಿಸಿದ್ದೇನೆ. ಹಾಗಾಗಿ, ಒಂದು ತಂಡಕ್ಕೆ ಆ ಸಮಯದಲ್ಲಿ ಏನು ಅಗತ್ಯವಿದೆ ಮತ್ತು ಈ ಪಂದ್ಯದ 11ರ ಬಳಗದಲ್ಲಿ ನನ್ನ ನಿಖರವಾದ ಪಾತ್ರವೇನು ಎಂಬ ಅನುಭವ ನನಗಿದೆ. ಆ ಸ್ಪಷ್ಟತೆಯು ಖಂಡಿತವಾಗಿಯೂ ನಾನು ಬಯಸಿದ ರೀತಿಯಲ್ಲಿ ರನ್ ಗಳಿಸಲು ಸಹಾಯ ಮಾಡುತ್ತದೆ," ಎಂದು ಅವರು ಹೇಳಿದರು.
ಭಾರತ ಎಷ್ಟು ಬಾರಿ ಫೈನಲ್ ಪ್ರವೇಶಿಸಿದೆ?
* 2007: ಭಾರತ ಚಾಂಪಿಯನ್ (ಧೋನಿ ನಾಯಕತ್ವದಲ್ಲಿ).
* 2014: ರನ್ನರ್-ಅಪ್ (ಶ್ರೀಲಂಕಾ ವಿರುದ್ಧ ಸೋಲು).
* 2024: ಚಾಂಪಿಯನ್ (ರೋಹಿತ್ ಶರ್ಮಾ ನಾಯಕತ್ವದಲ್ಲಿ).
* 2026: ಈಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿದೆ.












Click it and Unblock the Notifications