Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ
ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ಎರಡು ವರ್ಷಗಳ ಬಳಿಕ ವಂದೇ ಭಾರತ್ ರೈಲಿನ ಬೋಗಿಗಳನ್ನು ಹೆಚ್ಚಳ ಮಾಡಿದೆ. ಅದರೊಂದಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹಾಲಿ ಮಾರ್ಗದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಇದು 42ನೇ ವಂದೇ ಭಾರತ್ ರೈಲಾಗಿದ್ದು, ಒಟ್ಟು 20 ಬೋಗಿಗಳೊಂದಿಗೆ ಸಂಪರ್ಕ ಸೇವೆ ಆರಂಭಿಸಲು ಸಜ್ಜಾಗಿದೆ. ಯಾವ ಮಾರ್ಗದಲ್ಲಿ ಈ ರೈಲು ಕಾರ್ಯಾಚರಣೆ ಮಾಡಲಿದೆ, ವೇಳಾಪಟ್ಟಿ ಇತರ ಪೂರ್ಣ ಮಾಹಿತಿ ಇಲ್ಲಿದೆ.
ಎರಡು ವರ್ಷಗಳ ನಂತರ ಭಾರತದ 42ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಆಸನ ಸಾಮರ್ಥ್ಯವನ್ನು ರೈಲ್ವೆ ಸಚಿವಾಲಯ ಹೆಚ್ಚಿಸಿದೆ. ಪಶ್ಚಿಮ ರೈಲ್ವೆ (WR) ವಲಯ ವ್ಯಾಪ್ತಿಯಲ್ಲಿ ಈ ರೈಲು ಸೇವೆ ಒದಗಿಸಲಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಇತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಬೋಗಿಗಳು ಹೆಚ್ಚಾಗುವ ನಿರೀಕ್ಷೆ ಇದೆ. ಈ ವಂದೇ ಭಾರತ್ ರೈಲಿನ ಮೂಲಕ ದೇಶದ ರೈಲ್ವೆ ಜಾಲದಲ್ಲಿ ಒಟ್ಟು 164 ವಂದೇ ಭಾರತ್ ರೈಲುಗಳು ಸೇವೆಗೆ ಲಭ್ಯವಿದ್ದಂತಾಗಿವೆ.

42ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾರ್ಗ, ವೇಳಾಪಟ್ಟಿ
ಸದರಿ ಲೋಕಾರ್ಪಣೆಗೊಂಡ 'ಅಹಮದಾಬಾದ್-ಮುಂಬೈ ಸೆಂಟ್ರಲ್-ಅಹಮದಾಬಾದ್ ವಂದೇ ಭಾರತ್' ರೈಲು (22962/22961) ಈ ಎರಡು ಪ್ರಮುಖ ನಗರಗಳ ಮಧ್ಯೆ ಸಂಚರಿಸುತ್ತದೆ. 2024 ರ ಮಾರ್ಚ್ 13 ರಂದು ವಾಣಿಜ್ಯ ಸೇವೆಗಳನ್ನು ಆರಂಭಿಸಿತ್ತು. ಇದಕ್ಕೂ ಮೊದಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2024 ಮಾರ್ಚ್ 12ರಂದು ಈ ಮಾರ್ಗದ ರೈಲಿಗೆ ಚಾಲನೆ ನೀಡಿದ್ದರು. ಇದೀಗ ಈ ರೈಲು ಹೆಚ್ಚುವರಿ ಬೋಗಿಗಳೊಂದಿಗೆ ಸಂಚಾರ ನಡೆಸಲಿದೆ. ಪ್ರಧಾನಿ ಹಸಿರು ನಿಶಾನೆ ತೋರಿಸುವ ಮೊದಲು ಈ ರೈಲು 16 ಕೋಚ್‌ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಅದಕ್ಕೀಗ 4 ಹೆಚ್ಚುವರಿ ಎಸಿ ಚೇರ್ ಕಾರ್ ಕೋಚ್‌ಗಳನ್ನು ಸೇರಿಸಲಾಗಿದೆ. ಈ ರೈಲಿನಲ್ಲಿ ಹೆಚ್ಚುವರಿಯಾಗಿ ಒಟ್ಟು 278 ಹೆಚ್ಚುವರಿ ಪ್ರಯಾಣಿಕರು ಸಂಚರಿಸಬಹುದಾಗಿದೆ.
ಯಾವಾಗಿನಿಂದ ಸಂಚಾರ?
ಭಾರತೀಯ ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮುಂಬೈ ಸೆಂಟ್ರಲ್ - ಅಹಮದಾಬಾದ್- ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22961/22962) ಒಟ್ಟು 20 ಕೋಚ್‌ಗಳೊಂದಿಗೆ ಮಾರ್ಚ್ 09 ರಿಂದ 31ರವರೆಗೆ ಸಂಚಾರ ನಡೆಸಲಿದೆ ಎಂದು ಸ್ಪಷ್ಟಪಡಿಸಿದೆ.
491 ಕಿಮೀ ದೂರ 5:40 ಗಂಟೆಯಲ್ಲಿ ಪ್ರಯಾಣ
ಅಹಮದಾಬಾದ್-ಮುಂಬೈ ಸೆಂಟ್ರಲ್ ವರೆಗೆ ಒಟ್ಟು 491 ಕಿಲೋ ಮೀಟರ್ ದೂರವಿದೆ. ಇಷ್ಟು ದೂರವನ್ನು ವಂದೇ ಭಾರತ್ ರೈಲು 5 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತದೆ. ಪ್ರತಿ ಭಾನುವಾರ ಬಿಟ್ಟು ವಾರದ ಎಲ್ಲಾ ದಿನಗಳಲ್ಲಿ ಈ ರೈಲಿನ ಸೇವೆ ಲಭ್ಯವಿದೆ. ಸದರಿ ಮಾರ್ಗದಲ್ಲಿ ವಡೋದರಾ, ಸೂರತ್, ವಾಪಿ ಮತ್ತು ಬೋರಿವಲಿ ಸೇರಿ ಒಟ್ಟು ನಾಲ್ಕು ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ರೈಲು ಇಲಾಖೆ ತಿಳಿಸಿದೆ.












Click it and Unblock the Notifications