Liquor Party: ಸಿಎಂ ಗುಂಡು ಪಾರ್ಟಿ: ರಾಜಕಾರಣಿಗಳ ಜೊತೆ ಗುಂಡುಹಾಕಿಲ್ಲ ಎಂದರೆ ಪತ್ರಕರ್ತರೇ ಅಲ್ಲ: ದಿನೇಶ್ ಅಮಿನ್ ಮಟ್ಟು
Liquor Party: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರ್ಪಡಿಸಿದ್ದ ಬಜೆಟ್ ಪೂರ್ವ "ಗುಂಡು ಪಾರ್ಟಿ'' ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಬರಹ ಇಲ್ಲಿದೆ.
ಮುಖ್ಯಮಂತ್ರಿಗಳು ಏರ್ಪಡಿಸಿರುವ ಬಜೆಟ್ ಪೂರ್ವ "ಗುಂಡು ಪಾರ್ಟಿ'' ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ನಾನು ಐದು ವರ್ಷ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರನಾಗಿದ್ದೆ ಮತ್ತು ಆಗಲೂ ಈ ಬಜೆಟ್ ಪೂರ್ವ ಪಾರ್ಟಿ ನಡೆದಿತ್ತು ಎನ್ನುವ ಕಾರಣಕ್ಕಾಗಿ ನನ್ನ ಅಭಿಪ್ರಾಯವನ್ನು ಮುಂದಿಡುವುದು ಕರ್ತವ್ಯವೆಂದು ಭಾವಿಸಿದ್ದೇನೆ.

ರಾಜಕಾರಣಿಗಳ ಮತ್ತು ಪತ್ರಕರ್ತರ ನಡುವಿನ ಪಾರ್ಟಿಗಳ ಸಂಬಂಧ ಎರಡು ವೃತ್ತಿಗಳು ಶುರುವಾದ ದಿನದಿಂದಲೇ ಪ್ರಾರಂಭವಾಗಿರಬಹುದು. ಕುಡಿಯುವ ಅಭ್ಯಾಸ ಇರುವ ಯಾರಾದರೂ ಕಾರ್ಯನಿರತ ವರದಿಗಾರರು ಇಲ್ಲವೇ ಸಂಪಾದಕರು ಇಲ್ಲಿಯ ವರೆಗೆ ರಾಜಕಾರಣಿಗಳ ಜೊತೆ ಗುಂಡುಹಾಕಿಲ್ಲ ಎಂದು ಹೇಳಿದರೆ ಅಷ್ಟರ ಮಟ್ಟಿಗೆ ಅವರು ಪತ್ರಕರ್ತರೇ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ನಾನು ನೂರಾರು ರಾಜಕಾರಣಿಗಳ ಜೊತೆ ಗುಂಡುಹಾಕಿದ್ದೇನೆ. ಪತ್ರಕರ್ತನಾಗಿ ನಾನೇನಾದರೂ ಚೂರುಪಾರು ಯಶಸ್ಸನ್ನು ಕಂಡಿದ್ದರೆ ಅದಕ್ಕೆ ಈ ಗುಂಡು ಪಾರ್ಟಿಗಳು ಕೂಡಾ ಕಾರಣ ಎಂದು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ.
ಒಬ್ಬ ಪತ್ರಕರ್ತನಿಗೆ ಸುದ್ದಿಗಳು ಪತ್ರಿಕಾಗೋಷ್ಠಿಗಳಲ್ಲಿ ಸಿಗುತ್ತವೆ, ಸುದ್ದಿಯಾಚೆಗಿನ ಸತ್ಯಗಳು ಗೊತ್ತಾಗುವುದು ರಾಜಕಾರಣಿಗಳು ಜೊತೆಗಿನ ಊಟ-ತಿಂಡಿ-ತೀರ್ಥಗಳ ಪಾರ್ಟಿಗಳಲ್ಲಿ. ಗುಂಡು ಮನುಷ್ಯನನ್ನು ಸ್ವಲ್ಪ ಭಾವುಕನನ್ನಾಗಿಯೂ ಮತ್ತು ಸ್ವಲ್ಪ ಪ್ರಾಮಾಣಿಕನನ್ನಾಗಿಯೂ ಮಾಡುತ್ತದೆ. ಆ ಮೂಡಿನಲ್ಲಿ ಆತ ಹಳೆಯ ನೆನಪುಗಳನ್ನು ಅಗೆದು ಅಗೆದು ತೆಗೆದು ಹೊರ ಹಾಕುತ್ತಿರುತ್ತಾನೆ, ಅವುಗಳಲ್ಲಿ ಸತ್ಯಸಂಗತಿಗಳೂ ಇರುತ್ತವೆ. ಒಬ್ಬ ಕಸುಬುದಾರ ವರದಿಗಾರನಿಗೆ ಇವೆಲ್ಲ ಬಹಳ ಅಮೂಲ್ಯವಾದ ಮಾಹಿತಿಗಳು. ಚಹದ ಕಪ್ ಇಲ್ಲವೇ ನಿಂಬೆಹಣ್ಣಿನ ರಸದ ಗ್ಲಾಸ್ ಹಿಡ್ಕೊಂಡು ಎಷ್ಟು ಹೊತ್ತು ಮಾತನಾಡಬಹುದು? ಏನು ಮಾತನಾಡಬಹುದು?
ಮುಖ್ಯಮಂತ್ರಿ ಸಿದ್ದರಾಮಯ್ಯನವರೇನು ಈ ಪಾರ್ಟಿ ಶುರುಮಾಡಿದ್ದಲ್ಲ. ಮುಖ್ಯಮಂತ್ರಿ ದೇವರಾಜ ಅರಸು ಅವರು ಆಗಾಗ ಹಿರಿಯ ವರದಿಗಾರರು ಮತ್ತು ಪತ್ರಕರ್ತರನ್ನು ಕರೆದು ಜೊತೆಯಲ್ಲಿಯೇ ಗುಂಡು (ಬಹುಷ: ರಾಯಲ್ ಸೆಲ್ಯೂಟ್ ಇರಬಹುದು) ಹಾಕಿಕೊಂಡು ಊಟ ಮಾಡಿಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಅವರಿಗಿಂತ ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಅದರ ನಂತರದ ಬಹುತೇಕ ಮುಖ್ಯಮಂತ್ರಿಗಳು ಗುಂಡು ಪಾರ್ಟಿ ಆಯೋಜಿಸಿದ್ದಾರೆ. ಕೆಲವು ಮುಖ್ಯಮಂತ್ರಿಗಳು ಪತ್ರಕರ್ತರ ಜೊತೆ ಕುಡಿಯತ್ತಿದ್ದರು, ಕೆಲವರು ಕುಡಿಯುತ್ತಿರಲಿಲ್ಲ. ದೆಹಲಿಯಲ್ಲಿ ಅನಂತಕುಮಾರ್ ಅವರ ಮನೆಯಲ್ಲಿ ನಾವೆಲ್ಲ ಕನ್ನಡದ ಪತ್ರಕರ್ತರು ಹಲವಾರು ಬಾರಿ ರಾತ್ರಿ ಗುಂಡು ಪಾರ್ಟಿ ನಡೆಸಿದ್ದೆವು. ಅನಂತಕುಮಾರ್ ಕೈಯಲ್ಲಿ ನಿಂಬೆಹಣ್ಣಿನ ರಸದ ಗ್ಲಾಸ್ ಹಿಡಿದುಕೊಂಡಿರುತ್ತಿದ್ದರು. ಆದರೆ ಅವರು ಆಗಾಗ ಕೋಣೆಯೊಳಗೆ ಹೋಗಿ ಬರುತ್ತಿದ್ದರು. ಯಾಕೆಂದು ಗೊತ್ತಿಲ್ಲ.
ಸಿದ್ದರಾಮಯ್ಯನವರು ಹಿಂದೆಲ್ಲ ಪತ್ರಕರ್ತರ ಜೊತೆ ಕುಡಿಯುತ್ತಿರಲಿಲ್ಲ, ನಾನು ಯಾವತ್ತೂ ಅವರ ಜೊತೆ ಕುಡಿದಿಲ್ಲ. ನನಗಿನ್ನೂ ನೆನಪಿದೆ, ಅವರು ವಿರೋಧಪಕ್ಷದ ನಾಯಕರಾಗಿದ್ದಾಗ ಬಹುಷ: 2008-09ರಲ್ಲಿರಬಹುದು. ಒಮ್ಮೆ ಸಿದ್ದರಾಮಯ್ಯನವರ ಬೆಂಬಲಿಗರೊಬ್ಬರು ದೆಹಲಿಯ ಕರ್ನಾಟಕ ಭವನದಲ್ಲಿ ಊಟಕ್ಕೆ ಕರೆದಿದ್ದರು. ಅಲ್ಲಿ ಸಿದ್ದರಾಮಯ್ಯನವರು ಕುಡಿಯಲಿಲ್ಲ ಎನ್ನುವ ಕಾರಣಕ್ಕೆ ನಾನು ಮತ್ತು ಡಿ.ಉಮಾಪತಿ ಕುಡಿಯಲಿಲ್ಲ. ನಾನು ಬೆಂಗಳೂರಿಗೆ ಬಂದ ನಂತರ ಪ್ರಜಾವಾಣಿಯಲ್ಲಿದ್ದಾಗ ಸಿದ್ದರಾಮಯ್ಯನವರ ಸ್ನೇಹಿತರೊಬ್ಬರು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ನಾವಿಬ್ಬರೇ ಇದ್ದೆವು, ಅತಿಥೇಯ ಗೆಳೆಯರು ಕುಡಿಯೋಣ ಎಂದರು, ಸಿದ್ದರಾಮಯ್ಯನವರು ತಲೆಯಾಡಿಸಿದರು, ಆದರೆ ಬೆಂಗಳೂರಿಗೆ ಬಂದ ನಂತರ ನಾನು ಕುಡಿಯುವುದನ್ನು ಬಿಟ್ಟಿರುವ ಕಾರಣಕ್ಕೆ ಕುಡಿಯೋದಿಲ್ಲ ಎಂದು ಹೇಳಿದೆ, ಅವರೂ ಕುಡಿಯಲಿಲ್ಲ.
ನಾನು ನೋಡಿದ ಮತ್ತು ಅರ್ಥಮಾಡಿಕೊಂಡ ಹಾಗೆ ಸಿದ್ದರಾಮಯ್ಯನವರಿಗೆ ಕುಡಿತದ ಬಗ್ಗೆ ಬಹಳ ವ್ಯಾಮೋಹ ಇಲ್ಲ. ಗುಂಡು ಪಾರ್ಟಿ ಏನು ಎನ್ನುವುದು ಹೆಚ್. ವಿಶ್ವನಾಥ್ ಅವರ ಜೊತೆ ಕುಡಿದ ಪತ್ರಕರ್ತರಿಗೆ ಗೊತ್ತಿರುತ್ತದೆ, ಅದೊಂದು ಬೇರೆಯೇ ಲೆವೆಲ್. ನಾನು ಅವರ ಜೊತೆ ಹತ್ತಾರು ಬಾರಿ ಗುಂಡು ಹಾಕಿರುವ ಅನುಭವದಿಂದ ಹೇಳುತ್ತಿದ್ದೇನೆ. ಈ ಗುಂಡು ಪಾರ್ಟಿಗಳನ್ನೆಲ್ಲ ದೊಡ್ಡ ಅಪರಾಧ ಎಂದು ಬಿಂಬಿಸುವ ಅಗತ್ಯ ಇಲ್ಲ.
ಪತ್ರಕರ್ತರ ಭ್ರಷ್ಟಾಚಾರ ರಾಯಲ್ ಸೆಲ್ಯೂಟ್, ಶಿವಾಸ್ ರೀಗಲ್ ಗಳನ್ನು ಮೀರಿ ಬೆಳೆದಿವೆ. ನನಗೆ ತಿಳಿದ ಹಾಗೆ ಇಂತಹ ಪಾರ್ಟಿಗೆ ಸರ್ಕಾರದ ಖಜಾನೆಯಿಂದ ದುಡ್ಡು ಪಾವತಿಯಾಗುವುದಿಲ್ಲ. ಯಾರೋ ಒಬ್ಬ ಸಚಿವ ಬಿಲ್ ಪಾವತಿಸಿರುತ್ತಾರೆ. ಯಾರೋ ಹೇಳಿದ ಹಾಗೆ ಮುಖ್ಯಮಂತ್ರಿಗಳು ಯಾರೋ ಕೆಲವು ಪತ್ರಕರ್ತರನ್ನು ಆಯ್ದು ಕೈಹಿಡಿದು ಕರೆತಂದು ಪಕ್ಕದಲ್ಲಿ ಕೂರಿಸುವುದಿಲ್ಲ. ಕೆಲವರು ಮೊದಲೇ ಬಂದು ಸೀಟ್ ರಿಸರ್ವ್ ಮಾಡುತ್ತಾರೆ. ಅವರು ಮುಖ್ಯಮಂತ್ರಿ ನಿರ್ಗಮಿಸುವ ವರೆಗೆ ಜಪ್ಪಯ್ಯ ಎಂದರೂ ಕುರ್ಚಿಯಿಂದ ಮೇಲೆಳುವುದಿಲ್ಲ.
ಇತ್ತೀಚೆಗೆ ಕುಡಿತದ ಬಗ್ಗೆ ಸಿದ್ದರಾಮಯ್ಯನವರು ಮಡಿವಂತಿಕೆ ಬಿಟ್ಟು ಹೆಚ್ಚು ಉದಾರಿಗಳಾಗಿದ್ದಾರೆ, ಇದರಿಂದಾಗಿ ಹಿಂದೆಯೂ ಬಜೆಟ್ ಪೂರ್ವ ಗುಂಡು ಪಾರ್ಟಿಗಳಲ್ಲಿ ಒಂದು ಸಣ್ಣ ಪೆಗ್ ಹಾಕುತ್ತಿದ್ದರು. ಅದರ ನಂತರ ಎಲ್ಲರ ಕೈಕುಲುಕಿ ಹೊರಟು ಹೋಗುತ್ತಿದ್ದರು. ಈ ಬಾರಿಯ ರೀತಿಯ ಆಭಾಸಗಳು ಆಗಬಾರದೆಂದು ನಾನು ಮತ್ತು ಪ್ರಭಾಕರ್ ಸ್ವಲ್ಪ ಎಚ್ಚರವಾಗಿದ್ದು ಬಾಟಲಿ ಮತ್ತು ಗ್ಲಾಸ್ ಗಳ ಜೊತೆ ಪೋಟೊ ಬರದ ಹಾಗೆ ನೋಡಿಕೊಳ್ಳುತ್ತಿದ್ದೆವು. ಈ ಬಾರಿ ಹಾಗಾಗಿಲ್ಲ. ಮುಖ್ಯಮಂತ್ರಿಗಳು ಗುಂಡು ಪಾರ್ಟಿ ಆಯೋಜಿಸಿರುವುದು ಅಪರಾಧ ಅಲ್ಲ. ಆದರೆ ಪತ್ರಕರ್ತರೊಬ್ಬರು ಆ ಪಾರ್ಟಿಯ ಪೋಟೊ ತೆಗೆದು ಬೇಜವಾಬ್ದಾರಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದು ಅಪರಾಧ ಅಲ್ಲದೆ ಇದ್ದರೂ ಸಜ್ಜನಿಕೆಯ ನಡವಳಿಕೆ ಖಂಡಿತ ಅಲ್ಲ.
ದಿನೇಶ್ ಅಮಿನ್‌ಮಟ್ಟು, ಹಿರಿಯ ಪತ್ರಕರ್ತ
-
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Vaibhav Suryavanshi: ವೈಭವ್ ಸೂರ್ಯವಂಶಿಗೆ ಯುವರಾಜ್ ಸಿಂಗ್ ಮಹತ್ವದ ಸಲಹೆ: ಟೀಮ್ ಇಂಡಿಯಾ ಪ್ರವೇಶದ ಬಗ್ಗೆ ಭವಿಷ್ಯವಾಣಿ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Nepal: ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗದ ನೇಪಾಳದ ಹೊಸ ಜೆನ್ ಜೀ ಸರ್ಕಾರ: ಗೋಪಾಲಕೃಷ್ಣ ಕುಂಟಿನಿ ಬರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು?












Click it and Unblock the Notifications