Bengaluru Weather: ಬೆಂಗಳೂರಲ್ಲಿ ಬೇಸಿಗೆ ಆರಂಭದಲ್ಲೇ 40 ಡಿಗ್ರಿಯತ್ತ ತಾಪಮಾನ: ಉರಿ ಬಿಸಿಲು, ಸೆಕೆಯಿಂದ ಹೈರಾಣಾದ ಜನ
ಬೆಂಗಳೂರು: ಮುಂದಿನ ಒಂದು ವಾರ ಬೆಂಗಳೂರಿನಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ತಾಪಮಾನವು ಇನ್ನೂ 1-2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಏಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುವ ಭೀತಿಯೂ ಇದೆ. ಬೆಂಗಳೂರಿನಲ್ಲಿ ಇಂದು ಮುಖ್ಯವಾಗಿ ಶುಭ್ರವಾದ ಆಕಾಶವಿದ್ದು, ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ಈ ವೇಳೆ ಸೆಕೆಯ ಅನುಭವವೂ ಹೆಚ್ಚಾಗಲಿದೆ.
ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ಮಾರ್ಚ್ 1ರಿಂದಲೇ ಬೇಸಿಗೆ ಅಧಿಕೃತವಾಗಿ ಆರಂಭವಾಗಿದ್ದು, ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ಕಟ್ಟಡಗಳು, ವಾಹನಗಳ ದಟ್ಟಣೆ ಮತ್ತು ಕಡಿಮೆಯಾಗುತ್ತಿರುವ ಮರ ಗಿಡಗಳ ಸಂಖ್ಯೆಯಿಂದಾಗಿ ಶಾಖವು ಹೊರಹೋಗಲಾಗದೆ ನಗರದ ಒಳಗೇ ಉಳಿಯುತ್ತಿದೆ. ಕಳೆದ ಕೆಲವು ವಾರಗಳಿಂದ ಯಾವುದೇ ಮಳೆ ಬಾರದಿರುವುದು ಮತ್ತು ಆಕಾಶ ಸ್ಪಷ್ಟವಾಗಿರುವುದು ನೇರ ಸೂರ್ಯನ ಬಿಸಿಲು ಹೆಚ್ಚಾಗಲು ಕಾರಣವಾಗಿದೆ.

ದೇಶದ ಅತ್ಯಂತ ಒಳ್ಳೆಯ ಹವಾಮಾನ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತಾಪಮಾನ ಏರಿಕೆಯಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಬೇಸಿಗೆಯ ಅಬ್ಬರ ಶುರುವಾಗುವ ಮೊದಲೇ ನಗರದಲ್ಲಿ ಉಷ್ಣಾಂಶ ಹೆಚ್ಚುತ್ತಿರುವುದು, ಬೆಂಗಳೂರಿನ ಹವಾಮಾನ ನಿಜಕ್ಕೂ ಬದಲಾಗುತ್ತಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
"ದೆಹಲಿ ಮತ್ತು ಮುಂಬೈನಂತಹ ತೀವ್ರ ಸೆಕೆಯ ನಗರಗಳಿಂದ ತಪ್ಪಿಸಿಕೊಳ್ಳಲು ನಾನು ಬೆಂಗಳೂರಿಗೆ ಬಂದಿದ್ದೆ, ಆದರೆ ಇಲ್ಲಿನ ಬಿಸಿಲು ನನ್ನನ್ನು ಪರೀಕ್ಷಿಸುತ್ತಿದೆ. ಬೆಂಗಳೂರು ಇಷ್ಟೊಂದು ಬಿಸಿಯಾಗಿರುವುದು ಏಕೆ?" ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಬೆನ್ನಲ್ಲೇ ಸಾವಿರಾರು ಜನರು ಬೆಂಗಳೂರಿನ ಹವಾಮಾನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಎಸಿ ಇಲ್ಲದೆ ಇರೋಕೆ ಆಗಲ್ಲ
1980ರ ದಶಕದಿಂದಲೂ ನಗರದಲ್ಲಿ ನೆಲೆಸಿರುವ ಹಳೆಯ ನಿವಾಸಿಗಳು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಶಾಖವಿರುವುದು ಸಾಮಾನ್ಯ. ಮೇ ತಿಂಗಳಲ್ಲಿ ಮಳೆ ಬಂದ ನಂತರ ಪರಿಸ್ಥಿತಿ ತಣ್ಣಗಾಗುತ್ತದೆ, ಇದರಲ್ಲಿ ವಿಶೇಷವೇನಿಲ್ಲ ಎಂದು ಇದಕ್ಕೆ ಉತ್ತರಿಸುತ್ತಿದ್ದಾರೆ. ಮತ್ತೊಂದೆಡೆ ನಗರದಲ್ಲಿ ಹಿಂದೆ ಎಸಿ (AC) ಅಗತ್ಯವೇ ಇರಲಿಲ್ಲ, ಆದರೆ ಈಗ ಎಸಿ ಇಲ್ಲದೆ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಈ ತಾಪಮಾನ ಏರಿಕೆಗೆ ಅತಿಯಾದ ನಗರೀಕರಣವೇ ಕಾರಣ ಎಂದು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ. ನಗರದ ಕೆರೆಗಳು ಬತ್ತಿ ಹೋಗುತ್ತಿರುವುದು ಮತ್ತು ಜನಸಂಖ್ಯೆಯ ಒತ್ತಡ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. "ಗಾರ್ಡನ್ ಸಿಟಿ" ಎಂದೇ ಕರೆಸಿಕೊಳ್ಳುವ ಬೆಂಗಳೂರು ಈಗ "ಬಿಸಿ ಬಿಸಿ ಬೆಂಗಳೂರು" ಆಗಿ ಬದಲಾಗುತ್ತಿದೆಯೇ ಎನ್ನುವ ಭೀತಿ ಜನರಲ್ಲಿ ಮನೆಮಾಡಿದೆ.
ಬೆಂಗಳೂರಿನ ಸೆಕೆ ತಡೆಯಲು ಕೆಲವು ಟಿಪ್ಸ್
* ಬಾಯಾರಿಕೆಯಾಗದಿದ್ದರೂ ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲೇ ಮಾಡಿದ ಹಣ್ಣಿನ ರಸಗಳು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.
* ಹೊರಗೆ ಹೋಗುವಾಗ ತಿಳಿ ಬಣ್ಣದ, ಹತ್ತಿ ಬಟ್ಟೆಗಳನ್ನು ಧರಿಸಿ. ಇದು ಬೆವರಿನ ಆವಿಯಾಗುವಿಕೆಗೆ ಮತ್ತು ಗಾಳಿಯಾಡಲು ಅನುವು ಮಾಡಿಕೊಡುತ್ತದೆ.
* ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ಬಿಸಿಲು ತೀವ್ರವಾಗಿರುತ್ತದೆ. ಈ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಅನಿವಾರ್ಯವಾದರೆ ಛತ್ರಿ ಅಥವಾ ಟೋಪಿಯನ್ನು ಬಳಸಿ.
* ಕಿಟಕಿಗಳಿಗೆ ಗಾಢ ಬಣ್ಣದ ಪರದೆಗಳನ್ನು ಬಳಸಿ, ಇದರಿಂದ ಮಧ್ಯಾಹ್ನದ ಉರಿ ಬಿಸಿಲು ನೇರವಾಗಿ ಮನೆಗೆ ಬರುವುದನ್ನು ತಡೆಯಬಹುದು. ರಾತ್ರಿ ವೇಳೆ ಕಿಟಕಿಗಳನ್ನು ತೆರೆದಿಟ್ಟು ತಂಪಾದ ಗಾಳಿ ಒಳಬರಲು ಬಿಡಿ.
* ನಿಮ್ಮ ಮನೆಯ ಸುತ್ತಮುತ್ತ ಅಥವಾ ಬಾಲ್ಕನಿಯಲ್ಲಿ ಸಣ್ಣ ಗಿಡಗಳನ್ನು ಬೆಳೆಸುವುದರಿಂದ ಮನೆಯ ಸುತ್ತ ತಾಪಮಾನವನ್ನು 1-2 ಡಿಗ್ರಿ ಕಡಿಮೆ ಮಾಡಬಹುದು.












Click it and Unblock the Notifications