Mallikarjun Mutya: ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್, ಮಲ್ಲಿಕಾರ್ಜುನ ಮುತ್ಯಾಗೆ ಆಘಾತ
ಯಾದಗಿರಿ: ಅಪ್ರಾಪ್ತ ಬಾಲಕಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿದ್ದ ಮುತ್ಯಾರ ಅರ್ಜಿಯನ್ನು ಜಿಲ್ಲಾ ಪ್ರದಾನ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಜಾಮೀನು ನೀಡಲು ನಿರಾಕರಿಸುವ ಮೂಲಕ ಕೋರ್ಟ್ ಆಘಾತ ನೀಡಿದೆ.
ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಾಲಕಿ ಜೊತೆಗಿನ ಮುತ್ಯಾ ವರ್ತನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ದಾಖಲಾಗಿತ್ತು. ಈ ವಿಚಾರ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.

ಪ್ರಬಲ ವಾದ ಮಂಡಿಸಿದ ಸರ್ಕಾರಿ ವಕೀಲ
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಮಲ್ಲಿಕಾರ್ಜುನ ಮುತ್ಯಾ ಅರ್ಜಿ ಸಲ್ಲಿಸಿದ್ದರು. ಇಂದು (ಮಾ.9) ನಡೆದ ವಿಚಾರಣೆ ವೇಳೆ ಸರ್ಕಾರಿ ಪರ ವಕೀಲರು ತೀವ್ರ ವಾದ ಮಂಡಿಸಿದರು. ಮುತ್ಯಾ ಮೇಲೆ ಆಗಿರುವುದು ಫೋಕ್ಸೋ ಕೇಸ್. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಪ್ರಬಲವಾಗಿ ವಾದಿಸಿದರು. ಜಾಮೀನು ನೀಡದಂತೆ ಮನವಿ ಮಾಡಿದರು. ವಿಚಾರಣೆ ಆಲಿಸಿದ ಕೋರ್ಟ್ ಜಾಮೀನು ನೀಡಲು ನಿರಾಕರಿಸಿ ಅರ್ಜಿ ತಿರಸ್ಕರಿಸಿ ಆದೇಶಿಸಿತು.
ಮುತ್ಯಾ ಮೊಬೈಲ್ ಸೀಜ್
ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣವನ್ನು ಪೊಲೀಸ್ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ಭಾಗವಾಗಿ ಇಂದು ಮುತ್ಯಾ ಬಳಸುತ್ತಿದ್ದ ಮೊಬೈಲ್ ಫೋನ್‌ನನ್ನು ಜಪ್ತಿ ಮಾಡಲಾಗಿದೆ. ಅದರಲ್ಲಿ ಮತ್ತಷ್ಟು ಮಾಹಿತಿ ಸಿಗುವ ಬಗ್ಗೆ ಜಾಲಾಡಲಿದ್ದಾರೆ. ಅಗತ್ಯವೆನಿಸಿದರೆ ತಪಾಸಣೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲದ ಮೊಬೈಲ್ ಕಳುಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮುತ್ಯಾ ಅರ್ಜಿಗೆ ತಕರಾರು ಅರ್ಜಿ ಸಲ್ಲಿಕೆ
ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವರ ಪರ ವಕೀಲರು ಜಿಲ್ಲಾ ಪ್ರದಾನ ಸೆಷನ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಿರುದ್ಧ ತಕರಾರು ಅರ್ಜಿ ಸಲ್ಲಿಕೆ ಆಗಿತ್ತು. ಸರ್ಕಾರಿ ಅಭಿಯೋಜಕ (ಪಿಪಿ) ಗುರುಲಿಂಗಪ್ಪ ತೇಲಿ ಅವರು ತಕರಾರು ತೆಗೆದಿದ್ದರು. ಕಳೆದ ಶುಕ್ರವಾರ ಮಾರ್ಚ್ 6 ರಂದು ಸಹ ಅರ್ಜಿಗಳ ವಿಚಾರಣೆ ನಡೆದಿದ್ದು. ಮಾರ್ಚ್ 9ರಂದು ವಿಚಾರಣೆ ಮುಂದೂಡಿಕೆ ಮಾಡಿದ್ದ ಕೋರ್ಟ್ ಇಂದು ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿ ತಿರಸ್ಕರಿಸಿದೆ. ಈ ಮುಲಕ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಅವರಿಗೆ ಜಯ ಸಿಕ್ಕಂತಾಗಿದೆ.












Click it and Unblock the Notifications