ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ: ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್, ಆ ನಟನಿಗಾ ಹೇಳಿದ್ದು ಎಂದ ನೆಟ್ಟಿಗರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಕೇವಲ ಒಂದು ಸಾಲಿನ ಪೋಸ್ಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ದರ್ಶನ್ ಅಭಿಮಾನಿ ಬಳಗದಲ್ಲಿ ಈ ಪೋಸ್ಟ್ ಈಗ ಹಲವು ಅನುಮಾನ ಹಾಗೂ ಪ್ರಶ್ನೆಗಳಿಗೆ ಕಾರಣವಾಗಿದೆ. ವಿಜಯಲಕ್ಷ್ಮಿ ಅವರ ಈ ಪೋಸ್ಟ್ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಟನ ಹೆಸರು ಮುನ್ನೆಲೆಗೆ ಬಂದಿದೆ.
ವಿಜಯಲಕ್ಷ್ಮಿ ಅವರ ಪೋಸ್ಟ್‌ನಲ್ಲೇನಿದೆ?
ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ.. ಅದು ವಸ್ತುವಾಗಲಿ, ವ್ಯಕ್ತಿಯಾಗಲಿ.." ಎಂಬ ಅರ್ಥಗರ್ಭಿತ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಸಾಲುಗಳು ಮೇಲ್ನೋಟಕ್ಕೆ ಒಂದು ಉತ್ತಮ ಜೀವನ ಸಂದೇಶದಂತೆ ಕಂಡರೂ, ಸದ್ಯದ ಪರಿಸ್ಥಿತಿಯಲ್ಲಿ ಇದು ಯಾರನ್ನೋ ಗುರಿಯಾಗಿಸಿ ಆಡಿರುವ ಮಾತುಗಳಾ ಎಂಬ ಚರ್ಚೆಗೆ ಕಾರಣವಾಗಿದೆ.

ನಟ ಧನ್ವೀರ್ ಹೆಸರು ಪ್ರಸ್ತಾಪಿಸಿದ ನೆಟ್ಟಿಗರು
ವಿಜಯಲಕ್ಷ್ಮಿ ಅವರು ಈ ಪೋಸ್ಟ್ ಅನ್ನು ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸದೆ ಹಂಚಿಕೊಂಡಿದ್ದಾರೆ. ಆದರೆ, ನೆಟ್ಟಿಗರು ಮತ್ತು ಸ್ಯಾಂಡಲ್‌ವುಡ್ ಪ್ರೇಕ್ಷಕರು ಇದನ್ನು ಇತ್ತೀಚಿನ ಕೆಲವು ಬೆಳವಣಿಗೆಗಳಿಗೆ ಲಿಂಕ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನ ಯುವ ನಟ ಧನ್ವೀರ್ ಅವರು ನಟ ದರ್ಶನ್ ಅವರಿಂದ ದೂರವಾಗಿದ್ದಾರೆ, ಇಬ್ಬರ ನಡುವೆ ಮೊದಲಿನ ಬಾಂಧವ್ಯ ಉಳಿದಿಲ್ಲ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ದಟ್ಟವಾಗಿ ಹರಿದಾಡುತ್ತಿವೆ. ದರ್ಶನ್ ಅವರ ಬೆಂಬಲ ಮತ್ತು ಒಡನಾಟದಿಂದ ಗುರುತಿಸಿಕೊಂಡಿದ್ದ ಧನ್ವೀರ್ ಇತ್ತೀಚೆಗೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದ್ದು, ಇದನ್ನೇ ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತಿದ್ದ ನೆಟ್ಟಿಗರು, "ವಿಜಯಲಕ್ಷ್ಮಿ ಅವರು ಈ ಖಡಕ್ ಸಂದೇಶವನ್ನು ನಟ ಧನ್ವೀರ್ ಅವರಿಗಾಗಿಯೇ ಹಾಕಿದ್ದಾರಾ?" ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಶ್ನೆಯಾಗಿಯೇ ಉಳಿದ ಒಗಟು
ದರ್ಶನ್ ಅವರ ಕಷ್ಟದ ದಿನಗಳಲ್ಲಿ ಹಾಗೂ ಅವರ ಸುತ್ತ ನಡೆಯುವ ಪ್ರತಿಯೊಂದು ರಾಜಕೀಯ, ಸಾಮಾಜಿಕ ವಿದ್ಯಮಾನಗಳ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರ ಪೋಸ್ಟ್‌ಗಳು ಯಾವಾಗಲೂ ಗಮನ ಸೆಳೆಯುತ್ತವೆ. ಆದರೆ ಈ ಬಾರಿಯ ಪೋಸ್ಟ್ ಕೇವಲ ಧನ್ವೀರ್ ವಿಷಯವೋ ಅಥವಾ ವೈಯಕ್ತಿಕ ಜೀವನದ ಬೇರೆ ಯಾವುದಾದರೂ ಬೇಸರದಿಂದ ಹಾಕಿದ್ದೋ ಎಂಬುದು ಇನ್ನು ನಿಖರವಾಗಿಲ್ಲ. ವಿಜಯಲಕ್ಷ್ಮಿ ಅವರ ಈ ಒಂದೇ ಒಂದು ಸಾಲಿನ ಸ್ಟೇಟಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಗಾಳಿಮಾತುಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ನಟ ದರ್ಶನ್‌ಗೆ ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನೀಡಲಾಗಿದ್ದ ಆದೇಶದ ಸ್ಪಷ್ಟೀಕರಣ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಆದೇಶದ ಮಾರ್ಪಾಡು ಅಥವಾ ಸ್ಪಷ್ಟೀಕರಣ ಕೋರುವ ನೆಪದಲ್ಲಿ, ಅರ್ಜಿದಾರರು (ದರ್ಶನ್) ವಾಸ್ತವವಾಗಿ ತೀರ್ಪಿನ ಮರುಪರಿಶೀಲನೆಯನ್ನು ಬಯಸುತ್ತಿದ್ದಾರೆ" ಎಂದು ರಿಜಿಸ್ಟ್ರಾರ್ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಈ ತಾಂತ್ರಿಕ ಕಾರಣದ ಹಿನ್ನೆಲೆ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಕಳೆದ ಮೇ 15ರಂದು ನಡೆದಿದ್ದ ವಿಚಾರಣೆಯ ವೇಳೆ, ರೇಣುಕಸ್ವಾಮಿ ಕೊಲೆ ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ನಟ ದರ್ಶನ್ ಕನಿಷ್ಠ ಒಂದು ವರ್ಷದವರೆಗೆ ಜಾಮೀನು ಪಡೆಯಲು ಅರ್ಹರಲ್ಲ ಎಂಬ ಮಹತ್ವದ ಆದೇಶ ಹೊರಬಿದ್ದಿತ್ತು. ಈ ಆದೇಶದ ನಿಯಮಗಳು ಮತ್ತು ಸ್ಪಷ್ಟೀಕರಣವನ್ನು ಕೋರಿ ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈಗ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಈ ಅರ್ಜಿಯನ್ನೇ ವಜಾಗೊಳಿಸಿರುವುದರಿಂದ, ದರ್ಶನ್ ಅವರ ಜಾಮೀನು ಪ್ರಕ್ರಿಯೆಗೆ ಮತ್ತಷ್ಟು ಕಾನೂನು ತೊಡಕುಗಳು ಎದುರಾದಂತಾಗಿದೆ.













Click it and Unblock the Notifications