ಅಪ್ಪಂದಿರ ದಿನ 2021: ಅತ್ತಾಗ ಬಿಗಿದಪ್ಪಿ, ಬಿದ್ದಾಗ ಮೇಲೆತ್ತಿ ಕಣ್ಣೊರೆಸಿದ ಅಪ್ಪನಿಗೆ ಧನ್ಯವಾದ!
ಅಪ್ಪ...ಅತ್ತಾಗ ಬಿಗಿದಪ್ಪಿದ, ಬಿದ್ದಾಗ ಕೈ ಹಿಡಿದು ಮೇಲೆತ್ತಿದ, ಮಗ-ಮಗಳೆಂದು ಬೇಧ ಮಾಡದೆ ಸಲಹಿದ ಅಪ್ಪ, ತ್ಯಾಗ ಎಂಬ ಪಾಠ ಕಲಿಸಿದ ಅಪ್ಪನಿಗೆ ಕೃತಜ್ಞತೆ ಹೇಳುವ ದಿನ.
ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ, ಅಪ್ಪ ಜತೆ ಗಿದ್ದರೆ ಪ್ರಪಂಚದಲ್ಲಿ ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಏನೋ ವಿಶ್ವಾಸ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ ಮಾತ್ರ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿ.
ಮಕ್ಕಳು ಹಾಗೂ ಅಪ್ಪನ ನಡುವಿನ ಪ್ರೀತಿಯ ಸಂಕೇತವಾಗಿ ಜೂನ್ 20ರಂದು ವಿಶ್ವ ತಂದೆಯ ದಿನವನ್ನಾಗಿ ಆಚರಿಸಲಾಗುತ್ತದೆ.

ಆಚರಣೆ ಹೇಗೆ?
ಫಾದರ್ಸ್ ಡೇ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಹಲವೆಡೆ ಈ ದಿನವನ್ನು ಜೂನ್ 3ನೇ ಭಾನುವಾರದಂದು ಆಚರಿಸಲಾಗುತ್ತದೆ. ಸ್ಪೇನ್ ಮತ್ತು ಪೋರ್ಚುಗಲ್ನಂತಹ ದೇಶಗಳು ಮಾರ್ಚ್ 19ರಂದು ಸೇಂಟ್ ಜೋಸೆಫ್ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್ನಲ್ಲಿ ಆಗಸ್ಟ್ 8ರಂದು ಹಾಗೂ ಥೈಲಾಂಡ್ನಲ್ಲಿ ಡಿಸೆಂಬರ್ 5ರಂದು ಆಚರಿಸಲಾಗುತ್ತದೆ.

ಅಪ್ಪನ ಗದರಿಕೆಯಲ್ಲೂ ಇದೆ ಪ್ರೀತಿ
ಅಪ್ಪನ ಗದರಿಕೆಯಲ್ಲೂ ಒಂದು ಪ್ರೀತಿ ಅಡಗಿರುತ್ತದೆ. ಅತ್ತಾಗ ಕಣ್ಣೊರೆಸುವ ಕೈಗಳೇ ಮುಂದೆ ತಪ್ಪು ಮಾಡಿದಾಗ ಶಿಕ್ಷಿಸುತ್ತದೆ. ಆ ಶಿಕ್ಷೆಯೇ ಮುಂದೆ ಹೊಸ ಅನುಭವಕ್ಕೆ ದಾರಿ ಮಾಡಿಕೊಟ್ಟಿರುತ್ತದೆ. ಯಾರ ಮುಂದೆಯೂ ತನ್ನ ಮಕ್ಕಳು ಸೋಲಬಾರದೆಂಬ ಅಪ್ಪಟ ಕಾಳಜಿವಹಿಸುವ ಏಕೈಕ ಗಂಡಸು ಜೀವವಿದ್ದರೆ ಅದು ಅಪ್ಪ ಮಾತ್ರ.
ಪ್ರತಿ ಸೋಲಿನಲ್ಲೂ ದೈರ್ಯ ತುಂಬುವ, ಎದ್ದು ನಿಲ್ಲಲೇಬೇಕೆಂದು ಹುರಿದುಂಬಿಸುವ ಆ ಬಡ ಜೀವವೇ ಅಪ್ಪ. ಅದೆಷ್ಟೊ ಜನರ ಸಾಧನೆಗೆ ಅಪ್ಪ ತೋರಿದ ಆ ಅಚಲ ನಂಬಿಕೆಯೇ ಶ್ರೀರಕ್ಷೆಯಾಗಿದೆ. ಆತನ ಆ ಗುಣವೇ ಅಪ್ಪನನ್ನು ಆಕಾಶದೆತ್ತರಕ್ಕೇರಿಸಿದೆ ಎನ್ನಬಹುದು.

ಎಲ್ಲವನ್ನೂ ತ್ಯಾಗ ಮಾಡಿದ ಹೀರೋಗೆ ಧನ್ಯವಾದ
ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸುವಲ್ಲಿ ಅಮ್ಮನ ಪಾತ್ರ ಬಹಳಷ್ಟಿದೆ. ಹಾಗೆಯೇ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆಯ ತ್ಯಾಗ ಕೂಡ ಅಷ್ಟೇ ಇದೆ. ಸಾಮಾನ್ಯವಾಗಿ ಎಲ್ಲರೂ ಅಮ್ಮನೊಂದಿಗೆ ಹೆಚ್ಚಿನ ಪ್ರೀತಿ ತೋರುತ್ತೀರಿ. ಹೆತ್ತಮ್ಮನಿಗಾಗಿ ಅನೇಕ ವಸ್ತುಗಳನ್ನು ಕೊಡಿಸಿರುತ್ತೀರಿ. ಆದರೆ ಅಪ್ಪ ಎಂದೂ ಮಕ್ಕಳ ಬಳಿ ತನಗಾಗಿ ಏನೂ ಕೇಳಿಕೊಳ್ಳುವುದಿಲ್ಲ, ಹಾಗಾಗಿ ಒಂದು ಬಾರಿ ಅಪ್ಪನನ್ನು ಬಿಗಿದಪ್ಪಿಕೊಳ್ಳಿ. ಒಂದೇ ಒಂದು ಅಪ್ಪಂದಿರ ದಿನದ ಶುಭಾಶಯ ವಿನಿಮಯ ಮಾಡಿಕೊಳ್ಳಿ. ಆ ವ್ಯಕ್ತಿ ಇದಕ್ಕಿಂತ ನಿಮ್ಮಿಂದ ಬೇರೇನೂ ನಿರೀಕ್ಷಿಸಿರಲ್ಲ. ಏಕೆಂದರೆ ಆತನ ಗುಣವೇ ಮುಗಿಲೆತ್ತರ. ಎಲ್ಲವನ್ನೂ ನಿಮಗಾಗಿ ತ್ಯಾಗ ಮಾಡಿದ ಬಾಲ್ಯದ ನಿಮ್ಮ ಪಾಲಿನ ಸೂಪರ್ ಹೀರೋಗೆ ಧನ್ಯವಾದ ತಿಳಿಸಿ.

ತಂದೆಯ ದಿನದ ಹೇಗೆ ಪ್ರಾರಂಭವಾಯಿತು?
ಯುನೈಟೆಡ್ ಸ್ಟೇಟ್ನಲ್ಲಿ ಭೀಕರವಾದ ಅಪಘಾತವೊಂದು ನಡೆಯಿತು. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಇಲ್ಲೋರ್ವರ ಮಗಳು ಗ್ರೇಸ್ ಗೋಲ್ಡನ್ ಕ್ಲೇಟನ್, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು.
ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್ ಡಾಡ್ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ತಂದೆಯ ದಿನಾಚರಣೆ ಆಚರಿಸುವ ಘೋಷಣೆ ಹೊರಡಿಸಿದ ಬಳಿಕ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.











Click it and Unblock the Notifications