GBA: ನಗರದಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ಇನ್ನಷ್ಟು ಚುರುಕು
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತನ್ನ ವ್ಯಾಪ್ತಿಯ ಮತದಾರರ ಗಣತಿ ನಡೆಸಿ ಕರಡು ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಲೋಪದೋಷಗಳಾಗಿವೆ. ಸರಿಯಾಗಿ ಮನೆ ಮನೆಗೆ ಭೇಟಿ ನೀಡಿ ಮ್ಯಾಪಿಂಗ್ ಮಾಡಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಚುನಾವಣೆ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದರು. ಅದಾದ ಬಳಿಕ ಕೈಗೊಂಡ ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಲಾಗಿದೆ.
ಮ್ಯಾಪಿಂಗ್ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರ ನೇತೃತ್ವದಲ್ಲಿ ವೀಡಿಯೋ ಕಾನ್ಫ್‌ರೆನ್ಸ್‌ನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಮಾತನಾಡಿದರು. 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಕಾರ್ಯವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬುಧವಾರ ಸೂಚನೆ ನೀಡಿದರು.

ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವುದು ಅತ್ಯಂತ ಮಹತ್ವದ್ದಾಗಿದೆ. ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಚೇರಿ ಕೆಲಸ ಬಳಿಕ ಮ್ಯಾಪಿಂಗ್‌ಗೆ ಸೂಚನೆ
ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ತಮ್ಮ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಪ್ರತಿದಿನ ಮಧ್ಯಾಹ್ನದಿಂದ ಸಂಬಂಧಿತ ವಲಯದ ಕಂದಾಯ ಅಧಿಕಾರಿಗಳ ಕಚೇರಿಗೆ ಹಾಜರಾಗಬೇಕೆಂದರು.
ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಖಾಯಂ ಕಿರಿಯ ಆರೋಗ್ಯ ಪರಿವೀಕ್ಷಕರು ಪೂರ್ವಾಹ್ನದಲ್ಲಿ ತಮ್ಮ ಕಚೇರಿಯ ನಿಯಮಿತ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಮ್ಯಾಪಿಂಗ್‌ಗೆ ಹಾಜರಾಗುವಂತೆ ತಿಳಿಸಿದೆ.
ಪರವಾನಿಗೆ ಪಡೆಯದ 7 ವಾಣಿಜ್ಯ ಕಟ್ಟಡಗಳಿಗೆ ಬೀಗ
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್ ಪಿಲ್ಲಗಾನಹಳ್ಳಿ ಮುಖ್ಯರಸ್ತೆಯಲ್ಲಿ ಹಲವು ಉದ್ದಿಮೆಗಳು ಪಾಲಿಕೆಯಿಂದ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ನಡೆಯುತ್ತಿದ್ದವು. ಇವುಗಳನ್ನು ಪತ್ತೆ ಮಾಡಿದ ಪಾಲಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸುಮಾರು 145 ಉದ್ದಿಮೆಗಳಿಗೆ ಸೂಚನಾ ಪತ್ರ ಜಾರಿ ಮಾಡಿದ್ದಾರೆ.
ಇನ್ನೂ ಸೂಚನಾ ಪತ್ರದಲ್ಲಿ ಸ್ವಯಂಪ್ರೇರಿತರಾಗಿ ಉದ್ದಿಮೆಯನ್ನು ಮುಚ್ಚಲು ತಿಳಿಸಿದ್ದರೂ ಸಹ ಯಾವುದೇ ಕ್ರಮಕೈಗೊಂಡಿರಲಿಲ್ಲ. ಸೂಚನಾ ಪತ್ರದಲ್ಲಿ ನೀಡಿದ್ದ ಗಡುವು ಮುಗಿದ ಕಾರಣ ಬುಧವಾರ ಗೊಟ್ಟಿಗೆರೆ ವ್ಯಾಪ್ತಿಯಲ್ಲಿ 07 ಉದ್ದಿಮೆಗಳನ್ನು ಪಾಲಿಕೆ ವತಿಯಿಂದ ಬೀಗ ಮುದ್ರೆ ಹಾಕಿ ಮುಚ್ಚಿಸಲಾಗಿದೆ ಎಂದು ಪಾಲಿಕೆ ಆಯುಕ್ತು ಮಾಹಿತಿ ನೀಡಿದರು.












Click it and Unblock the Notifications