Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ
Petrol Price Hike: ಅಮೆರಿಕ, ಇರಾನ್ ಹಾಗೂ ಇಸ್ರೇಲ್ ದೇಶಗಳ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದರಿಂದ ಇದೀಗ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಅಲ್ಲದೆ ವಾಣಿಜ್ಯ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಾಸವಾಗುತ್ತಿದೆ. ಮುಂದುವರಿದು ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಹ ಹೆಚ್ಚಳವಾಗುವ ಆತಂಕ ಶುರುವಾಗಿದೆ. ಯುದ್ಧ ತೀವ್ರತೆ ಹಾಗೂ ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯಲ್ಲಿ ಎದುರಾಗಿರುವ ಸಮಸ್ಯೆಯು ಭಾರೀ ಸಂಕಷ್ಟವನ್ನು ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ಕನಿಷ್ಠ 200 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೆ ಮೊದಲ ಹಂತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು 20 ರಿಂದ 22 ರೂಪಾಯಿ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯಲ್ಲಿ ಸಂಕಷ್ಟ ಸೃಷ್ಟಿಯಾಗಿದೆ. ಇರಾನ್ ಮತ್ತು ಓಮನ್ ನಡುವಿನ ಕಿರಿದಾದ 33 ಕಿ.ಮೀ ಸಮುದ್ರ ಮಾರ್ಗ ಇದಾಗಿದೆ. ಈ ಭಾಗದ ಮೂಲಕವೇ ಕಚ್ಚಾ ತೈಲ ಸರಬರಾಜು ಶೇ20ರಿಂದ ಶೇ 30ರಷ್ಟು ಆಗುತ್ತದೆ. ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುವ ಪ್ರದೇಶ ಇದಾಗಿದೆ. ಇದು ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿದ್ದು, ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗ ಇಲ್ಲಿನ ಮೂಲಕ ಹಾದುಹೋಗುತ್ತದೆ. ಆದರೆ ಯುದ್ಧ ಪ್ರಾರಂಭವಾದಾಗಿನಿಂದಲೂ ಈ ಭಾಗದ ತೈಲ ಹಡಗುಗಳ ಸಂಚಾರಕ್ಕೆ ಇರಾನ್ ನಿರ್ಬಂಧ ವಿಧಿಸಿದೆ.

ಭಾರತಕ್ಕೆ ಪೆಟ್ರೋಲ್ - ಡೀಸೆಲ್ ಎದುರಾಗಿರುವ ಆತಂಕವೇನು
ಇನ್ನು ವಿಶ್ವದ ಪ್ರಮುಖ ದೇಶಗಳ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಕಚ್ಚಾ ತೈಲ ಹಾಗೂ ಗ್ಯಾಸ್ ಸಿಲಿಂಡರ್ ಪೂರೈಕೆಯ ಆತಂಕ ಶುರುವಾಗಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಜಾಗತಿಕ ಕಚ್ಚಾ ತೈಲವು ಬ್ಯಾರೆಲ್‌ಗೆ ಹೆಚ್ಚಾಗಿದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಕ್ಷಣ ಹೆಚ್ಚಾಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆಯಾದರೂ, ಇನ್ನೊಂದು ವಾರ ಅಥವಾ 15 ದಿನಗಳ ವರೆಗೆ ಇದೇ ಪರಿಸ್ಥಿತಿ ಇದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪಕ್ಕಾ ದುಬಾರಿ ಆಗಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ತಕ್ಷಣದ ಏರಿಕೆ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲೂ ಇದೇ ಭರವಸೆ ನೀಡಲಾಗಿತ್ತು. ಆದರೆ ಮಾರ್ಚ್ 10ರಂದು ವಾಣಿಜ್ಯ ಸಿಲಿಂಡರ್ ಪೂರೈಕೆ ಹಲವು ಪ್ರದೇಶಗಳಲ್ಲಿ ಬಂದ್ ಆಗಿವೆ. ಇದರಿಂದ ಸಮಸ್ಯೆ ಎದುರಾಗಿದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲೂ ಇದೇ ಆತಂಕ ಶುರುವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಸದ್ಯಕ್ಕೆ ಹೆಚ್ಚಿನ ಅಂತರರಾಷ್ಟ್ರೀಯ ಬೆಲೆಗಳ ಪರಿಣಾಮವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಲಾಗಿದೆ. ಈ ನಡುವೆ ಭಾರತವು ಪರ್ಯಾಯ, ಹಾರ್ಮುಜ್ ಅಲ್ಲದ ಪ್ರದೇಶಗಳಿಂದ ಕಚ್ಚಾ ತೈಲ ಆಮದುಗಳನ್ನು ಹೆಚ್ಚಿಸುತ್ತಿದೆ.
Petrol Price Hike: ಬೆಂಗಳೂರಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ
ಯುದ್ಧದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುವ ಆತಂಕ ಶುರುವಾಗಿದೆ. ಇದರ ಬೆಂಗಳೂರು ನಗರ ಪ್ರದೇಶದಲ್ಲಿ ಇಂದು ಪೆಟ್ರೋಲ್ ಬೆಲೆಯು ಲೀಟರ್‌ಗೆ 102.92 ರೂಪಾಯಿ ಆಗಿದೆ. ಡೀಸೆಲ್ ಬೆಲೆಯು 90.99 ರೂಪಾಯಿ ಆಗಿದೆ. ದೇಶದ ಪ್ರಮುಖ ನಗರಗಳಲ್ಲೂ ಬಹುತೇಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಚೆನ್ನೈ, ಮುಂಬೈ, ಕೊಲ್ಕತ್ತಾ ನಗರಗಳಲ್ಲಿ ಮಾರ್ಚ್ 10ರಂದು ಪೆಟ್ರೋಲ್ ಬೆಲೆಯು ಅನುಕ್ರಮವಾಗಿ 101.06 ರೂಪಾಯಿ, 103.50, ರೂ. 105.41 ಆಗಿದೆ. ಅದೇ ರೀತಿ ಡೀಸೆಲ್ ಬೆಲೆಯು ಕ್ರಮವಾಗಿ 92.61 ರೂ., 90.03 ರೂ. ಹಾಗೂ 92.02 ರೂಪಾಯಿ ಆಗಿದೆ. ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆಯು 94.77 ರೂಪಾಯಿ ಹಾಗೂ ಡೀಸೆಲ್ ಬೆಲೆಯು 87.67 ರೂಪಾಯಿ ಆಗಿದೆ.












Click it and Unblock the Notifications