ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು
ಬೆಂಗಳೂರು: ನಗರದಲ್ಲಿ ವಾಣಿಜ್ಯ ಎಲ್‌ಪಿಜಿ (ಎಲ್‌ಪಿಜಿ) ಸಿಲಿಂಡರ್ ಸರಬರಾಜು ದಿಢೀರ್ ನಿಂತಿರುವುದರಿಂದ ಹೋಟೆಲ್ ಉದ್ಯಮದಲ್ಲಿ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತುರ್ತು ಎಚ್ಚರಿಕೆ ನೀಡಿದೆ. ಸಂಘದ ಪ್ರಕಟಣೆಯ ಪ್ರಕಾರ, ಇಂದಿನಿಂದ (ಮಾರ್ಚ್ 10) ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಹೋಟೆಲ್ ಉದ್ಯಮದಲ್ಲಿ ದೊಡ್ಡ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ನಿಂತುಹೋಗಿದ್ದು, ಹೋಟೆಲ್‌ಗಳ ದೈನಂದಿನ ಕಾರ್ಯಚಟುವಟಿಕೆಗೆ ತೀವ್ರ ತೊಂದರೆಯಾಗಿದೆ. ಕಳೆದ ಶನಿವಾರವಷ್ಟೇ ಗೃಹಬಳಕೆಯ ಸಿಲಿಂಡರ್ ಬೆಲೆ 60 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ 115 ರೂ. ಏರಿಕೆಯಾಗಿತ್ತು. ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಇಂಧನ ಪೂರೈಕೆ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಹೋಟೆಲ್‌ಗಳು ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರಿಂದ, ಆಹಾರಕ್ಕಾಗಿ ಹೋಟೆಲ್‌ಗಳನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ವೃತ್ತಿಪರರಿಗೆ ಇದರಿಂದ ಸಮಸ್ಯೆಯಾಗಲಿದೆ.

"ಹೋಟೆಲ್ ಮುಚ್ಚುವುದಿಲ್ಲ"
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, "ಹೋಟೆಲ್‌ಗಳು ಅಗತ್ಯ ಸೇವೆಗಳ ವಿಭಾಗಕ್ಕೆ ಸೇರಿವೆ. ಸಾಮಾನ್ಯ ಜನರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಕ್ಷೇತ್ರದವರು ದಿನನಿತ್ಯ ಊಟಕ್ಕಾಗಿ ಹೋಟೆಲ್‌ಗಳ ಮೇಲೆ ಅವಲಂಬಿತರಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಹೋಟೆಲ್‌ಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಸಿಲಿಂಡರ್ ಲಭ್ಯ ಇರುವವರೆಗೆ ಸೇವೆ ನೀಡುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಮತ್ತು ಸಂಸದರು ತಕ್ಷಣ ಮಧ್ಯಪ್ರವೇಶಿಸಿ ಈ ಬಿಕ್ಕಟ್ಟು ಬಗೆಹರಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಈ ಸಮಸ್ಯೆ ಕುರಿತು ಕೇಂದ್ರ ಸಚಿವರು ಮತ್ತು ಸಂಸದರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಸಂಘ ತಿಳಿಸಿದೆ. ಗ್ಯಾಸ್ ಇಲ್ಲದೆ ಹೋಟೆಲ್‌ಗಳಲ್ಲಿ ಆಹಾರ ಒದಗಿಸುವುದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮೊದಲು ತೈಲ ಕಂಪನಿಗಳು 70 ದಿನಗಳವರೆಗೆ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಇರಲ್ಲ ಎಂದು ಭರವಸೆ ನೀಡಿದ್ದವು. ಆದರೆ ಹಠಾತ್ ಸರಬರಾಜು ನಿಲ್ಲಿಸಿರುವುದು ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ.
ಆತಂಕ ಬೇಡ ಎಂದ ಕೇಂದ್ರ
ಇದರ ಮಧ್ಯೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ಇಂಧನದ ಕೊರತೆ ಇಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಅದೇ ವೇಳೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೂಡ ದೇಶದ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇದೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿಗಳನ್ನು ತಳ್ಳಿಹಾಕಿದೆ. ತೈಲ ಕಂಪನಿಗಳು 70 ದಿನಗಳವರೆಗೆ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಭರವಸೆ ನೀಡಿದ್ದರೂ, ಈಗ ಹಠಾತ್ತನೆ ಪೂರೈಕೆ ನಿಂತಿರುವುದು ಹೋಟೆಲ್ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ.












Click it and Unblock the Notifications