12 ವರ್ಷಗಳಲ್ಲಿ ಅನುಭವಿಸಿದ್ದು ಬರೀ ನಷ್ಟ: ಛಲ ಬಿಡದೆ ಮುನ್ನಡೆದು ಸಾವಿರ ಕೋಟಿ ಸಾಮ್ರಾಜ್ಯ ಕಟ್ಟಿದ ಬೋರೋಸಿಲ್
ಬಿಸಿ ಬಿಸಿ ಚಹಾ, ಕಾಫಿ ಕುಡಿಯಲು ಈ ಕಪ್ ಅನ್ನು ಅನೇಕ ಮನೆಗಳಲ್ಲಿ ಬಳಸಬಹುದು. ಮನೆಗೆ ಬರುವ ವಿಶೇಷ ಅತಿಥಿಗಳಿಗಾಗಿ ಇದೇ ಡಿನ್ನರ್ ಸೆಟ್‌ನಲ್ಲಿ ಊಟವನ್ನು ಬಡಿಸುವುದನ್ನೂ ನೀವು ಗಮನಿಸಿರಬಹುದು. ಇನ್ನು ಶಾಲೆಗೆ ಅಥವಾ ಕಚೇರಿಗೆ ತೆಗೆದುಕೊಂಡು ಹೋಗುವ ಲಂಚ್ ಬಾಕ್ಸ್ ಕೂಡಾ ಇದೇ ಬ್ರಾಂಡಿನದ್ದಾಗಿರಬಹುದು. ಈ ಬಾಕ್ಸ್‌ನಲ್ಲಿ ಎಷ್ಟೇ ಬಿಸಿಯಾಗಿರುವ ಆಹಾರ ಪದಾರ್ಥಗಳನ್ನು ಹಾಕಿದರೂ ಈ ಗಾಜು ಒಡೆಯುವುದಿಲ್ಲ, ಅಥವಾ ಕಚೇರಿಯಲ್ಲಿ ಊಟಕ್ಕಿಂತ ಮುಂಚೆ ಆಹಾರ ಬಿಸಿ ಮಾಡಬೇಕು ಎಂದಾದರೆ ಈ ಡಬ್ಬವನ್ನು ಸೀದಾ ಮೈಕ್ರೋವೇವ್ ಒಳಗೆ ಇಟ್ಟು ಬಿಡಬಹುದು. ನಾವಿಲ್ಲಿ ಹೇಳುತ್ತಿರುವುದು ಜನಪ್ರಿಯ ಬ್ರ್ಯಾಂಡ್ ಬೋರೋಸಿಲ್ ಲಿಮಿಟೆಡ್ (Borosil Limited) ಬಗ್ಗೆ.
ಎಲ್ಲಾ ಮನೆಯಲ್ಲಿ ಬೋರೋಸಿಲ್ ಬ್ರಾಂಡ್‌ನ ಬಾಕ್ಸ್‌ಗಳಿರಬಹುದು. ಅದರ ಬಳಕೆ ನಿತ್ಯವೂ ಆಗುತ್ತಲೂ ಇರಬಹುದು. ಆದರೆ ಪ್ರತಿ ಭಾರತೀಯನ ಮನೆಯಲ್ಲೂ ಇರುವ ಈ ಬ್ರ್ಯಾಂಡ್ ಹಿಂದಿನ ಹೋರಾಟದ ಕಥೆ ಬಹುಶಃ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ.

ಆರಂಭ ಮತ್ತು 12 ವರ್ಷಗಳ ಸತತ ನಷ್ಟ:
ಡಾ. ಎಚ್. ಲೆಲೆ ಅವರು ಅಮೆರಿಕದ 'ಕಾರ್ನಿಂಗ್ ಗ್ಲಾಸ್ ವರ್ಕ್ಸ್' ಜೊತೆಗೂಡಿ ಮುಂಬೈನಲ್ಲಿ ಒಂದು ಕಂಪನಿಯನ್ನು ಪ್ರಾರಂಭಿಸಿದರು. ಈ ಕಂಪನಿಯನ್ನು ಶುರು ಮಾಡುವಾಗ ಅವರ ಉದ್ದೇಶ ಒಂದೇ ಆಗಿತ್ತು ಮತ್ತು ಬಹಳ ಸ್ಪಷ್ಟವಾಗಿತ್ತು. ಅದೇನೆಂದರೆ ಅಲ್ಲಿಯವರೆಗೆ ಪ್ರಯೋಗಾಲಯಗಳಿಗೆ ಬೇಕಾದ ಗಾಜಿನ ಉಪಕರಣಗಳನ್ನು (Lab Glassware) ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ನಮ್ಮಲ್ಲಿಯೇ ಈ ಗಾಜಿನ ಉಪಕರಣಗಳನ್ನು ತಯಾರಿಸಿ ಆಮದು ಪ್ರಕ್ರಿಯೆಯನ್ನು ನಿಲ್ಲಿಸುವುದು.
ಸತತ ಸೋಲಿನ ನಂತರವೂ ಮುಗಿಯಲಿಲ್ಲ ಕತೆ:
ಈ ಕೆಲಸ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ವಾಸ್ತವ ಬಹಳ ಕಠಿಣವಾಗಿತ್ತು. ಅಂದುಕೊಂಡ ರೀತಿಯಲ್ಲಿಯೇ ಕಂಪನಿಯೇನೋ ಆರಂಭವಾಯಿತು. ಆದರೆ ಮುಂದಿನ 12 ವರ್ಷಗಳ ಕಾಲ, ಕಂಪನಿಯು ಸತತವಾಗಿ ಅನುಭವಿಸಿದ್ದು ಕೇವಲ ನಷ್ಟ ಮಾತ್ರ. 12 ವರ್ಷಗಳಲ್ಲಿ ಒಂದೇ ಒಂದು ಪೈಸೆ ಲಾಭ ಪಡೆದ ವರ್ಷ ಇರಲೇ ಇಲ್ಲ. ಹೊಸ ಕಂಪನಿ ಶುರು ಮಾಡುವಾಗ ಅಥವಾ ಹೊಸ ಸ್ಟಾಟಪ್‌ಗೆ ಕೈ ಹಾಕುವಾಗ ಹೆಚ್ಚಿನ ಸಂಸ್ಥಾಪಕರು ಮೊದಲ ಒಂದು ವರ್ಷ ನಷ್ಟವಾದರೆ ಸಾಕು ಕಂಪನಿಯನ್ನು ಮುಚ್ಚಿಬಿಡುತ್ತಾರೆ. ಆದರೆ, ಬೋರೋಸಿಲ್ ಕಥೆ 12 ವರ್ಷಗಳ ಸೋಲಿನ ನಂತರವೂ ಮುಗಿಯಲಿಲ್ಲ.
ಕಂಪನಿ ತೆಗೆದುಕೊಂಡ ದಿಟ್ಟ ನಿರ್ಧಾರ:
1988 ರಲ್ಲಿ 'ಖೇರುಕಾ ಕುಟುಂಬ'ವು ಅಮೆರಿಕದ ಕಾರ್ನಿಂಗ್‌ನ ಪಾಲುದಾರಿಕೆಯನ್ನು ಸಂಪೂರ್ಣವಾಗಿ ಖರೀದಿಸುತ್ತದೆ. ಈ ಮೂಲಕ ಕಂಪನಿಯ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತದೆ. ಇದಾದ ಬಳಿಕ ಕಂಪನಿಯನ್ನು ಉಳಿಸಬೇಕಾದರೆ ಮೇಜರ್ ಬದಲಾವಣೆ ಆಗಲೇ ಬೇಕು ಎನ್ನುವ ತೀರ್ಮಾನಕ್ಕೆ ಬರುತ್ತದೆ. ಇಲ್ಲಿ ಕಂಪನಿ ಒಂದು ದಿಟ್ಟ ನಿರ್ಧಾರಕ್ಕೆ ಬರುತ್ತದೆ. ಕಂಪನಿಯ ಈ ತೀರ್ಮಾನ ಇತಿಹಾಸವನ್ನೇ ಸೃಷ್ಟಿಸಿ ಬಿಡುತ್ತದೆ.
ಅಡುಗೆ ಮನೆಗೆ ಬೋರೋಸಿಲ್ ಎಂಟ್ರಿ:
ವಿಜ್ಞಾನ ಪ್ರಯೋಗಾಲಯಗಳಿಗಾಗಿ ನಿರ್ಮಿಸಲಾಗಿದ್ದ, ವಿಪರೀತ ತಾಪಮಾನವನ್ನು ತಡೆದುಕೊಳ್ಳುವ ಅದೇ ಶಾಖ-ನಿರೋಧಕ (Heat-resistant) ಗಾಜನ್ನು ಭಾರತೀಯ ಅಡುಗೆಮನೆಗಳಿಗೆ ಪರಿಚಯಿಸಲು ಕಂಪನಿ ನಿರ್ಧರಿಸುತ್ತದೆ. ಇದಾದ ಬಳಿಕ ಬೋರೋಸಿಲ್‌ನ ಮೈಕ್ರೋವೇವ್ ಬೌಲ್‌ಗಳು, ಸ್ಟೋರೇಕ್ ಕಂಟೈನರ್‌ಗಳು ಮತ್ತು ಊಟ ಬಡಿಸುವ ಪಾತ್ರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು.
ಮಾರುಕಟ್ಟೆಯಲ್ಲಿ ಏಕಸ್ವಾಮ್ಯ:
2017 ರ ಹೊತ್ತಿಗೆ, ಬೋರೋಸಿಲ್ ಕಂಪನಿಯು ಪ್ರಯೋಗಾಲಯದ ಗಾಜಿನ ಉಪಕರಣಗಳು ಮತ್ತು ಅಡುಗೆಮನೆಯ ಉಪಕರಣಗಳು ಎರಡೂ ವಿಭಿನ್ನ ಕ್ಷೇತ್ರಗಳಲ್ಲಿ ಬರೋಬ್ಬರಿ 60% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡು ಅಧಿಪತ್ಯ ಸಾಧಿಸಿತು.ಇಂದು ಬೋರೋಸಿಲ್ ಈ ಮಾರುಕಟ್ಟೆಯಲ್ಲಿ ಹೆಮ್ಮರವಾಗಿ ಬೆಳೆದಿದೆ.
ಇಂದಿನ ಯಶಸ್ಸಿನ ಅಂಕಿ-ಅಂಶಗಳು:
ಆದಾಯ: ₹1,134 ಕೋಟಿ
ಲಾಭ: ₹74 ಕೋಟಿ
ಮಾರುಕಟ್ಟೆ ಮೌಲ್ಯ: ₹2,600+ ಕೋಟಿ
ಮಾರಾಟ ಮಳಿಗೆಗಳು: 15,000 ಕ್ಕೂ ಹೆಚ್ಚು
ಇದೆಲ್ಲದರ ನಡುವೆಯೂ, ಸದ್ದಿಲ್ಲದೆ ಬೋರೋಸಿಲ್ ಇಂದಿಗೂ ಭಾರತದ ಹೆಮ್ಮೆಯ ಸಂಸ್ಥೆಗಳಾದ ಐಐಟಿಗಳು (IITs), ಇಸ್ರೋ (ISRO) ಮತ್ತು ದೇಶದ ಉನ್ನತ ಫಾರ್ಮಾ ಕಂಪನಿಗಳಿಗೆ ಗುಣಮಟ್ಟದ ಗಾಜಿನ ಉಪಕರಣಗಳನ್ನು ಪೂರೈಸುತ್ತಲೇ ಇದೆ.
ಇಂದು ಭಾರತದ ಜನಪ್ರಿಯ ಮತ್ತು ನೆಚ್ಚಿನ ಬ್ರ್ಯಾಂಡ್ ಆಗಿ ಬೋರೋಸಿಲ್ ಮೆರೆಯುತ್ತಿದೆ. ಆದರೆ ಇಲ್ಲಿಯವರೆಗೆ ಬರಬೇಕಾದರೆ ಅದು ಅನುಭವಿಸಿದ 12 ವರ್ಷಗಳ ನೋವಿನ ಕತೆ ತೆರೆ ಮರೆಯಲ್ಲಿಯೇ ಉಳಿದುಕೊಂಡಿತ್ತು. ಅಷ್ಟಕ್ಕೂ ಯಾವ ಕಂಪನಿ ಕೂಡಾ ತಮ್ಮ ಯಶಸ್ಸಿನ ಹಿಂದಿನ ಕಷ್ಟದ ಕಥೆಯನ್ನು ಗ್ರಾಹಕರು ತಿಳಿದುಕೊಳ್ಳಬೇಕೆಂದು ಬಯಸುವುದಿಲ್ಲ. ಈ ಕಂಪನಿಯೂ ಅಷ್ಟೇ. ಅವರಿಗೆ ಬೇಕಾಗಿರುವುದು ಅವರು ತಯಾರಿಸುವ 'ಗಾಜಿನ' ಮೇಲೆ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವುದಷ್ಟೇ.
(ಬರಹ: ರಂಜಿತಾ ಆರ್.ಕೆ.)













Click it and Unblock the Notifications