ಮನೆಯೊಳಗೆ ಈ ಗಿಡಗಳನ್ನು ಇಟ್ಟರೆ ಜಿರಳೆ ಕಾಟಕ್ಕೆ ಶಾಶ್ವತವಾಗಿ ಹೇಳಬಹುದು ಗುಡ್‌ಬೈ: ಒಮ್ಮೆ ಟ್ರೈ ಮಾಡಿ
ಅಡುಗೆಮನೆಯಲ್ಲಿ ಜಿರಳೆಗಳು ಓಡಾಡುತ್ತಿದ್ದರೆ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಇವುಗಳಿಂದ ಹರಡಬಹುದಾದ ರೋಗಗಳ ಭಯ ಒಂದೆಡೆಯಾದರೆ, ಅವುಗಳನ್ನು ಕಂಡಾಗ ಆಗುವ ಅಸಹ್ಯ ಇನ್ನೊಂದೆಡೆ. ಅಡುಗೆ ಮನೆ ರ್ಯಾಕ್‌ಗಳು, ಕಿಚನ್ ಸಿಂಕ್ ಕೆಳಗೆ, ಡಬ್ಬಗಳ ಹಿಂದೆ ಹೀಗೆ ಈ ಜಿರಳೆಗಳ ಓಡಾಟ ಇರುತ್ತದೆ.
ಅವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ರಾಸಾಯನಿಕ ಸ್ಪ್ರೇಗಳು, ಜೆಲ್‌ಗಳು, ಚಾಕ್ ಎಲ್ಲವೂ ಸಿಗುತ್ತದೆ. ಆದರೆ ಈ ರಾಸಾಯನಿಕಗಳನ್ನು ಅಡುಗೆ ಮನೆಯಲ್ಲಿ ಬಳಸುವಾಗ ಅದು ನಾವು ತಿನ್ನುವ ಆಹಾರಗಳ ಸಂಪರ್ಕಕ್ಕೆ ಬಂದರೆ ಎನ್ನುವ ಭಯ ಕೂಡಾ ಇರುತ್ತದೆ. ಅಲ್ಲದೆ ಈ ಕೆಮಿಕಲ್‌ಗಳಿಂದ ನಮಗೂ ಅಲರ್ಜಿ ಆಗುವ ಸಾಧ್ಯತೆಗಳಿವೆ. ಇದರ ಬದಲಿಗೆ ಕೇವಲ ಕೆಲವು ಸಸ್ಯಗಳನ್ನು ಬೆಳೆಸುವ ಮೂಲಕ ನೈಸರ್ಗಿಕವಾಗಿ ಜಿರಳೆಗಳನ್ನು ಮನೆಯಿಂದ ದೂರವಿಡಬಹುದು.

ಜಿರಳೆಗಳನ್ನು ಓಡಿಸಲು ಸಹಾಯ ಮಾಡುವ 7 ಪ್ರಮುಖ ಸಸ್ಯಗಳು:
1. ಪುದೀನಾ (Mint):
ಜಿರಳೆಗಳನ್ನು ದೂರವಿಡುವ ಅತ್ಯಂತ ಜನಪ್ರಿಯ ನೈಸರ್ಗಿಕ ಸಸ್ಯ ಪುದೀನಾ. ಇದರ ಕಟುವಾದ ಮೆಂಥಾಲ್ ವಾಸನೆ ಜಿರಳೆಗಳಿಗೆ ಇಷ್ವಾಗುವುದಿಲ್ಲ. 'ಜರ್ನಲ್ ಆಫ್ ಎಕನಾಮಿಕ್ ಎಂಟೊಮೊಲಜಿ' ಯಲ್ಲಿ ಪ್ರಕಟವಾದ ಅಧ್ಯಯನವೊಂದು, ಪುದೀನಾ ಎಣ್ಣೆಯು ಜಿರಳೆಗಳ ಕಾಟವನ್ನು ನಿವಾರಿಸುವ ಪ್ರಬಲ ಶಕ್ತಿಯನ್ನು ಹೊಂದಿದೆ ಎನ್ನುವ ಅಂಶವನ್ನು ದೃಢಪಡಿಸಿದೆ.
ಬಳಕೆ: ಅಡುಗೆಮನೆಯ ಕಿಟಕಿ ಅಥವಾ ಸಿಂಕ್ ಬಳಿ ಸಣ್ಣ ಕುಂಡದಲ್ಲಿ ಪುದೀನಾ ಬೆಳೆಸಿ. ಜಿರಳೆಗಳು ನಿಮ್ಮ ಮನೆಯಲ್ಲಿ ಮತ್ತೆಂದೂ ಕಾಣಿಸಿಕೊಳ್ಳುವುದೇ ಇಲ್ಲ.
2. ಲ್ಯಾವೆಂಡರ್ (Lavender):
ಲ್ಯಾವೆಂಡರ್ ಸುವಾಸನೆಯು ಮನುಷ್ಯರ ಮನಸ್ಸಿಗೆ ಎಷ್ಟೇ ಹಿತಕರವಾಗಿದ್ದರೂ, ಜಿರಳೆಗಳಿಗೆ ಇದು ಕಿರಿಕಿರಿ ಉಂಟುಮಾಡುತ್ತದೆ. ಈ ಸಸ್ಯದಲ್ಲಿರುವ 'ಲಿನಾಲೂಲ್' (linalool) ಎಂಬ ನೈಸರ್ಗಿಕ ಸಂಯುಕ್ತವು ಕೀಟ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಜಿರಳೆ ಮಾತ್ರವಲ್ಲ ಮನೆಯೊಳಗೆ ಓಡಾಡುವ ಇತರ ಕೀಟಗಳನ್ನು ಓಡಿಸಲು ಕೂಡಾ ಸಹಾಯ ಮಾಡುತ್ತದೆ. 'ಮಾಲಿಕ್ಯೂಲ್ಸ್' ಜರ್ನಲ್‌ನ ಸಂಶೋಧನೆಯು ಮನೆಯ ಸಾಮಾನ್ಯ ಕೀಟಗಳ ವಿರುದ್ಧ ಇದರ ಪ್ರಭಾವವನ್ನು ದಾಖಲಿಸಿದೆ.
ಬಳಕೆ: ಅಡುಗೆಮನೆಯ ಪ್ರವೇಶದ್ವಾರ ಅಥವಾ ಕಿಟಕಿಯ ಬಳಿ ಸಣ್ಣ ಲ್ಯಾವೆಂಡರ್ ಕುಂಡವನ್ನು ಇರಿಸಬಹುದು. ಇದರ ವಾಸನೆ ಇಡೀ ಮನೆಯೊಳಗೆ ಹರಡುತ್ತದೆ.
3. ಕ್ಯಾಟ್ನಿಪ್ (Catnip):
ಕ್ಯಾಟ್ನಿಪ್ ಸಸ್ಯದಲ್ಲಿ 'ನೆಪೆಟಾಲಾಕ್ಟೋನ್' (Nepetalactone) ಎಂಬ ಸಂಯುಕ್ತವನ್ನು ಹೊಂದಿದೆ. ಈ ಸಂಯುಕ್ತವು ಜಿರಳೆಗಳನ್ನು ಓಡಿಸುವ ಅದ್ಭುತ ಗುಣಗಳನ್ನು ಹೊಂದಿದೆ. ಐಯೋವಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ಪ್ರಕಾರ, ಮಾರುಕಟ್ಟೆಯಲ್ಲಿನ ರಾಸಾಯನಿಕ ಕೀಟನಾಶಕಗಳಿಗಿಂತ ಕ್ಯಾಟ್ನಿಪ್ ಹೆಚ್ಚು ಪರಿಣಾಮಕಾರಿಯಾಗಿದೆ.
ಬಳಕೆ: ಇದು ಮನೆಯೊಳಗೆ ಸುಲಭವಾಗಿ ಬೆಳೆಯುವ ಸಸ್ಯವಾಗಿದ್ದು, ಇದಕ್ಕೆ ಹೆಚ್ಚು ಕಾಳಜಿಯ ಅಗತ್ಯವೂ ಇರುವುದಿಲ್ಲ. ಕಡಿಮೆ ನಿರ್ವಹಣೆಯ ಅಗತ್ಯವಿರುವ ಸಸ್ಯವಾಗಿರುವುದರಿಂದ ಅಡುಗೆಮನೆಗೆ ಹೇಳಿಮಾಡಿಸಿದಂತಿದೆ.

4. ಪಲಾವ್ ಎಲೆ ಅಥವಾ ಬೇ ಲೀಫ್ (Bay Leaf):
ಭಾರತೀಯ ಅಡುಗೆಯಲ್ಲಿ ಪಲಾವ್ ಎಲೆಗೆ ವಿಶೇಷ ಸ್ಥಾನವಿದೆ. ಇದು ಅಡುಗೆಯ ಘಮವನ್ನು ಹೆಚ್ಚಿಸುತ್ತದೆ. ಆದರೆ ಇದರ ಘಾಟು ವಾಸನೆಯೆಂದರೆ ಜಿರಳೆಗಳಿಗೆ ಆಗಿಬರುವುದಿಲ್ಲ. ಈ ಎಲೆಗಳಲ್ಲಿರುವ 'ಯೂಕಲಿಪ್ಟಾಲ್' (eucalyptol) ಸಂಯುಕ್ತಗಳು ನೈಸರ್ಗಿಕ ಕೀಟ ನಾಶಕವಾಗಿದೆ. ಪಬ್‌ಮೆಡ್ (PubMed) ನಲ್ಲಿ ಪ್ರಕಟವಾದ ಅಧ್ಯಯನಗಳು ಮನೆಯ ಕೀಟಗಳನ್ನು ಓಡಿಸುವಲ್ಲಿ ಇದರ ಪಾತ್ರವನ್ನು ಖಚಿತಪಡಿಸಿವೆ.
ಬಳಕೆ: ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಸ್ಥಳದ ಬಳಿ ಇದರ ಸಣ್ಣ ಪಾಟ್ ಇಡುವುದು ಉತ್ತಮ.

5. ರೋಸ್ಮರಿ (Rosemary):
ರೋಸ್ಮರಿಯಲ್ಲಿ ಕರ್ಪೂರ ಮತ್ತು ಇತರ ಆರೊಮ್ಯಾಟಿಕ್ ಸಂಯುಕ್ತಗಳಿವೆ. ಜಿರಳೆಗಳು ಸೇರಿದಂತೆ ಇತರ ಕೀಟಗಳು ಕೂಡಾ ಈ ಸಸ್ಯವನ್ನು ಕಂಡರೆ ಮಾರು ದೂರ ಓಡುತ್ತವೆ. 'ಪೆಸ್ಟ್ ಮ್ಯಾನೇಜ್ಮೆಂಟ್ ಸೈನ್ಸ್'ನಲ್ಲಿ ಪ್ರಕಟವಾದ ಸಂಶೋಧನೆಯು, ಮನೆಯೊಳಗಿನ ಕೀಟಗಳನ್ನು ಓಡಿಸುವಲ್ಲಿ ರೋಸ್ಮರಿ ಎಣ್ಣೆಯು ಪರಿಣಾಮಕಾರಿ ಎನ್ನುವ ಅಂಶವನ್ನು ಸ್ಪಷ್ಟಪಡಿಸಿದೆ.
ಬಳಕೆ: ಸೂರ್ಯನ ಬೆಳಕು ಬೀಳುವ ಕಿಟಕಿಯ ಬಳಿ ಇದನ್ನು ಸುಲಭವಾಗಿ ಬೆಳೆಸಬಹುದು. ಇದು ಅಡುಗೆಗೆ ಬೇಕಾದ ತಾಜಾ ಸೊಪ್ಪಾಗಿಯೂ ಬಳಕೆಯಾಗುತ್ತದೆ. ಜಿರಳೆ, ಕೀಟ ನಾಶಕವಾಗಿಯೂ ಸಹಕಾರಿಯಾಗಿದೆ.

6. ಸೇವಂತಿಗೆ (Chrysanthemum):
ಸೇವಂತಿಗೆ ಹೂವಿನಲ್ಲಿ 'ಪೈರೆಥ್ರಿನ್' (pyrethrin) ಎಂಬ ನೈಸರ್ಗಿಕ ಕೀಟನಾಶಕ ಸಂಯುಕ್ತವಿದೆ. ವಾಣಿಜ್ಯ ಕೀಟನಾಶಕಗಳ ತಯಾರಿಕೆಯಲ್ಲಿಯೂ ಇದೇ ಪ್ರಮುಖ ಆಧಾರವಾಗಿದೆ. ಯುಎಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಕೂಡ ಸೇವಂತಿಗೆ ಹೂವುಗಳಿಂದ ಪಡೆಯುವ ಈ ಅಂಶವನ್ನು ಸಸ್ಯಶಾಸ್ತ್ರೀಯ ಕೀಟನಾಶಕ ಎಂದು ಗುರುತಿಸಿದೆ.
ಬಳಕೆ: ಅಡುಗೆಮನೆಯ ಮೂಲೆಗಳಲ್ಲಿ ಅಥವಾ ಕೀಟಗಳು ಬರುವ ದಾರಿಗಳಲ್ಲಿ ಇದರ ಕುಂಡವನ್ನು ಇಡುವುದರಿಂದ ಕೀಟಗಳನ್ನು ತಡೆಯಬಹುದು. ಜೊತೆಗೆ, ಇದು ಮನೆಯ ಅಂದವನ್ನೂ ಹೆಚ್ಚಿಸುತ್ತದೆ.
7. ಲೆಮನ್ ಬಾಮ್ (Lemon Balm):
ಲೆಮನ್ ಬಾಮ್ ಸಸ್ಯವು ತೀಕ್ಷ್ಣವಾದ ಸಿಟ್ರಸ್ ವಾಸನೆಯನ್ನು ಹೊಂದಿದ್ದು, ಇದು ಜಿರಳೆಗಳನ್ನು ದೂರವಿಡುತ್ತದೆ. ಪುದೀನಾ ಕುಟುಂಬಕ್ಕೆ ಸೇರಿದ ಈ ಸಸ್ಯವು, ಪುದೀನಾದಲ್ಲಿರುವಂತೆಯೇ ಹಲವು ಆರೊಮ್ಯಾಟಿಕ್ ಸಂಯುಕ್ತಗಳನ್ನು ಹೊಂದಿದೆ. 'ಜರ್ನಲ್ ಆಫ್ ಆರ್ಥ್ರೋಪೋಡ್-ಬಾರ್ನ್ ಡಿಸೀಸಸ್'ವರದಿಯ ಪ್ರಕಾರ, ಇದು ಅತ್ಯುತ್ತಮ ಕೀಟ ನಿವಾರಕವಾಗಿದೆ.
ಬಳಕೆ: ಮಿತವಾದ ಸೂರ್ಯನ ಬೆಳಕಿರುವ ಭಾರತೀಯ ಅಡುಗೆಮನೆಗಳ ವಾತಾವರಣದಲ್ಲಿ ಇದನ್ನು ಸಣ್ಣ ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದು.
ನಿಮ್ಮ ಅಡುಗೆಮನೆಯನ್ನು ನೈಸರ್ಗಿಕವಾಗಿ ಸ್ವಚ್ಛ ಹಾಗೂ ಕೀಟಮುಕ್ತವಾಗಿಟ್ಟುಕೊಳ್ಳಲು ಈ ಮೇಲಿನ ಸಸ್ಯಗಳನ್ನು ಇಂದೇ ನಿಮ್ಮ ಮನೆಗೆ ತನ್ನಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications